ಗುರುವಾರ , ಜೂನ್ 30, 2022
25 °C
ಬಜೆಟ್‌ನಲ್ಲಿ ಮೀಸಲಿರಿಸಿದ ₹35,000 ಕೋಟಿ ಖರ್ಚಿನ ಲೆಕ್ಕ ಕೊಡಿ: ಕೇಂದ್ರಕ್ಕೆ ‘ಸುಪ್ರೀಂ’ ಆದೇಶ

ತರ್ಕರಹಿತ ಲಸಿಕೆ ನೀತಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಲಸಿಕೆ ನೀತಿಗೆಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಹಲವು ಕಠಿಣ ಪ್ರಶ್ನೆಗಳನ್ನು ಬುಧವಾರ ಕೇಳಿದೆ. ಆರೋಗ್ಯ ಕಾರ್ಯಕರ್ತರು ಮತ್ತು 45 ವರ್ಷಕ್ಕಿಂತ ಮೇಲಿನವರಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ. 18–44ರ ವಯೋಮಾನದವರಿಗೆ ಉಚಿತ ಲಸಿಕೆ ನೀಡುತ್ತಿಲ್ಲ. ಈ ಲಸಿಕೆ ನೀತಿಯೇ ‘ಸ್ವೇಚ್ಛೆಯದ್ದು’ ಮತ್ತು ‘ಅತಾರ್ಕಿಕ’ವಾದುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌, ಎಲ್‌.ಎನ್‌. ರಾವ್‌ ಮತ್ತು ಎಸ್‌. ರವೀಂದ್ರ ಭಟ್‌ ಅವರ ಪೀಠವು ಹೇಳಿದೆ. 

ಕೇಂದ್ರ ಸರ್ಕಾರದ 2021–22ರ ಬಜೆಟ್‌ನಲ್ಲಿ ₹35 ಸಾವಿರ ಕೋಟಿಯನ್ನು ಲಸಿಕೆ ಖರೀದಿಗಾಗಿಯೇ ಮೀಸಲು ಇರಿಸಲಾಗಿದೆ ಎಂಬುದನ್ನು ಪೀಠವು ಉಲ್ಲೇಖಿಸಿದೆ. ಇದರಲ್ಲಿ ಈವರೆಗೆ ಎಷ್ಟು ಹಣವನ್ನು ವೆಚ್ಚ ಮಾಡಲಾಗಿದೆ ಮತ್ತು 18–44ರ ವಯಸ್ಸಿನವರಿಗೆ ಹಾಕಿಸಲು ಲಸಿಕೆ ಖರೀದಿಗೆ ಈ ಹಣವನ್ನು ಏಕೆ ಬಳಸಬಾರದು ಎಂದು ಕೇಳಿದೆ. 

ಲಸಿಕೆ ಅಭಿಯಾನದ ಈವರೆಗಿನ ಮೂರೂ ಹಂತಗಳಲ್ಲಿ ಲಸಿಕೆ ಪಡೆಯಲು ಅರ್ಹತೆ ಇದ್ದವರು ಎಷ್ಟು ಜನರಿ
ದ್ದರು, ಅವರಲ್ಲಿ ಎಷ್ಟು ಜನರಿಗೆ ಒಂದು ಡೋಸ್‌ ಮತ್ತು ಎಷ್ಟು ಜನರಿಗೆ ಎರಡು ಡೋಸ್‌ ಲಸಿಕೆ ಹಾಕಿಸಲಾಗಿದೆ, ಗ್ರಾಮೀಣ ಪ್ರದೇಶದ ಜನರೆಷ್ಟು, ನಗರಪ್ರದೇಶದ ಜನರೆಷ್ಟು ಎಂಬ ಮಾಹಿತಿಯನ್ನೂ ಸಲ್ಲಿಸಬೇಕು ಎಂದು ಪೀಠವು ಆದೇಶಿಸಿದೆ. 

ಲಸಿಕೆ ಹಾಕಿಸಿಕೊಳ್ಳಲು ಅರ್ಹತೆ ಇರುವ ಎಲ್ಲ ವ್ಯಕ್ತಿಗಳಿಗೂ ಈ ವರ್ಷದ ಕೊನೆಯ ಹೊತ್ತಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಹಾಗಾಗಿ,ಲಸಿಕೆ ಹಾಕಿಸಿಕೊಳ್ಳಲು ಬಾಕಿ ಇರುವ ಜನರಿಗೆ ಯಾವಾಗ ಮತ್ತು
ಹೇಗೆ ಲಸಿಕೆ ನೀಡಲಾಗುವುದು ಎಂಬ ನೀಲನಕ್ಷೆಯನ್ನು ಸಲ್ಲಿಸಬೇಕು ಎಂದು ಕೇಂದ್ರಕ್ಕೆ ಕೋರ್ಟ್ ಸೂಚಿಸಿದೆ. 

ಲಸಿಕೆ ನೀತಿ ರೂಪುಗೊಳ್ಳಲು ಕಾರಣವಾದ ಎಲ್ಲ ದಾಖಲೆಗಳು, ಕಡತ ಟಿಪ್ಪಣಿಗಳು, ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಮತ್ತು ಸ್ಪುಟ್ನಿಕ್‌–ವಿ ಲಸಿಕೆಯ ಈವರೆಗಿನ ಖರೀದಿಯ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದೆ. 
ಅಸಾಧಾರಣವಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಯಾಂಗದ ವಿವೇಕ ಮತ್ತು ವಿವೇಚನಾಧಿಕಾರದ ಮೇಲೆ ನಂಬಿಕೆ ಇರಿಸಬೇಕು ಎಂಬ ಕೇಂದ್ರದ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ. 

ದರ ನೀತಿ ಸಂದೇಹಾಸ್ಪದ: ಸೀರಂ ಇನ್ಸ್‌ಟಿಟ್ಯೂಟ್‌ ಮತ್ತು ಭಾರತ್‌ ಬಯೊಟೆಕ್‌ ತಯಾರಿಸುವ ಲಸಿಕೆಗಳನ್ನು ಕೇಂದ್ರ ಸರ್ಕಾರ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ 50:25:25 ಅನುಪಾತದಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಈ ನೀತಿಯು ಸ್ಪರ್ಧಾತ್ಮಕ ದರ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಲಭ್ಯತೆಗೆ ಅವಕಾಶ ಕೊಡುವುದಿಲ್ಲ. ಲಸಿಕೆ ತಯಾರಿಕಾ ಕಂಪನಿಗಳ ಜತೆಗೆ ದರ ಮತ್ತು ಪ್ರಮಾಣದಲ್ಲಿ ಮಾ‌ತ್ರ ಚೌಕಾಸಿಗೆ ಅವಕಾಶ ಇದೆ. ಕೇಂದ್ರ ಸರ್ಕಾರವು ಈ ಎರಡನ್ನೂ ಮೊದಲೇ ನಿಗದಿ ಮಾಡಿದೆ. ಹಾಗಾಗಿ ಈ ಅವಕಾಶ ಕೈತಪ್ಪಿದೆ. ಸ್ಪರ್ಧಾತ್ಮಕತೆಗಾಗಿಯೇ ಹೆಚ್ಚು ದರ ನಿಗದಿ ಮಾಡಲಾಗಿದೆ ಎಂಬ ಕೇಂದ್ರ ಸರ್ಕಾರದ ಸಮರ್ಥನೆಯ ಬಗ್ಗೆ ಅನುಮಾನ ಮೂಡುತ್ತದೆ ಎಂದು ಪೀಠ ಹೇಳಿದೆ.

ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಸಿದ ಕಾರಣ ತನಗೆ ಕಡಿಮೆ ದರದಲ್ಲಿ ಲಸಿಕೆ ಸಿಕ್ಕಿದೆ ಎಂದು ಕೇಂದ್ರ ವಾದಿಸುತ್ತಿದೆ. ಹಾಗಿದ್ದರೆ ತಯಾರಾಗುವ ಎಲ್ಲ ಲಸಿಕೆಗಳನ್ನೂ ಕೇಂದ್ರವೇ ಖರೀದಿ ಮಾಡಬಹುದಿತ್ತಲ್ಲವೇ ಎಂದು ಕೋರ್ಟ್ ಪ್ರಶ್ನಿಸಿದೆ.  ಲಸಿಕೆ ಖರೀದಿಯಲ್ಲಿ ಕೇಂದ್ರವು ಹೊಂದಿರುವ ಏಕಸ್ವಾಮ್ಯದ ಸ್ಥಿತಿಯೇ ಅತ್ಯಂತ ಕಡಿಮೆ ದರದಲ್ಲಿ ಲಸಿಕೆ ಪಡೆದುಕೊಳ್ಳಲು ಕಾರಣ ಎಂದಾದರೆ, ಲಸಿಕೆ ನೀತಿಯ ಹಿಂದಿನ ತರ್ಕವನ್ನೇ ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ. ಏಕೆಂದರೆ, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯಗಳು ಈ ನೀತಿಯಿಂದಾಗಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತವೆ ಎಂದು ಪೀಠವು ಹೇಳಿದೆ. 

ರಾಜ್ಯಗಳ ನಿಲುವೇನು?: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸಲಿವೆ ಎಂದು ಕೇಂದ್ರವು ಮೇ 9ರಂದು ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಈ ವಿಚಾರದಲ್ಲಿ ತಮ್ಮ ನಿಲುವೇನು ಎಂಬುದನ್ನು ದೃಢಪಡಿಸಬೇಕು. ಉಚಿತವಾಗಿ ಲಸಿಕೆ ಹಾಕಿಸಲು ಸಿದ್ಧ ಎಂದಾದರೆ ಅದನ್ನು ಪ್ರಮಾಣಪತ್ರದ ಮೂಲಕ ತಿಳಿಸಬೇಕು. ಇದರಿಂದಾಗಿ ಎಲ್ಲರಿಗೂ ಉಚಿತ ಲಸಿಕೆ ದೊರೆಯಲಿದೆ ಎಂಬ ಭರವಸೆಯು ಜನರಲ್ಲಿ ಮೂಡುತ್ತದೆ ಎಂದು ಕೋರ್ಟ್‌ ಹೇಳಿದೆ.

ಎರಡು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸಿ

*ಉಚಿತವಾಗಿ ಲಸಿಕೆ ಹಾಕಿಸುವಿಕೆಗೆ ಸಂಬಂಧಿಸಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಎರಡು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು

*ಲಸಿಕೆಗಳಿಗೆ ಬೇಡಿಕೆ ಸಲ್ಲಿಸಿದ್ದು ಯಾವಾಗ, ಡೋಸ್‌ಗಳ ಸಂಖ್ಯೆ ಎಷ್ಟು ಮತ್ತು ಅವು ಯಾವಾಗ ‍ಪೂರೈಕೆ ಆಗಲಿವೆ ಎಂಬ ಮಾಹಿತಿಯನ್ನು ಕೇಂದ್ರ ನೀಡಬೇಕು

*ಕೇಳಲಾದ ಪ್ರತಿ ಪ್ರಶ್ನೆಗೂ ಪ್ರತ್ಯೇಕವಾಗಿಯೇ ಮಾಹಿತಿ ಸಲ್ಲಿಸಬೇಕು 

*ಇದೇ 30ರಂದು ಮುಂದಿನ ವಿಚಾರಣೆ ನಡೆಯಲಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು