ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರ ಕ್ಷಮಾಪಣೆ ಅಸಿಂಧುವೇ?: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

ರಾಜೀವ್ ಹಂತಕರಿಗೆ ಕ್ಷಮಾಪಣೆ ಅರ್ಜಿ
Last Updated 13 ಮೇ 2022, 5:25 IST
ಅಕ್ಷರ ಗಾತ್ರ

ನವದೆಹಲಿ: ‘ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ.ಜಿ.ಪೇರರಿವಾಳನ್ ಅವರನ್ನು ಅವಧಿ ಪೂರ್ವ ಬಿಡುಗಡೆ ಮಾಡಬಹುದು ಎಂದು ತಮಿಳುನಾಡು ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸನ್ನು ರಾಜ್ಯಪಾಲರು, ರಾಷ್ಟ್ರಪತಿಯ ಪರಾಮರ್ಶೆಗೆ ಕಳುಹಿಸಿದ್ದಾರೆ. ರಾಜ್ಯಪಾಲರ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಯಾವ ಅಧಿಕಾರವಿದೆ’ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಈ ಬಗ್ಗೆ ಲಿಖಿತ ರೂಪದಲ್ಲಿ ವಿವರಣೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ತಮಿಳುನಾಡು ಸರ್ಕಾರದ ಶಿಫಾರಸನ್ನು ರಾಷ್ಟ್ರಪತಿಯ ಪರಾಮರ್ಶೆಗೆ ಕಳುಹಿಸಿದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ, ಪೇರರಿವಾಳನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಪ್ರಶ್ನೆ ಕೇಳಿದೆ. ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್‌, ಬಿ.ಆರ್‌.ಗವಾಯಿ ಮತ್ತು ಎ.ಎಸ್‌.ಬೋಪಣ್ಣ ಅವರಿದ್ದ ಪೀಠವು ಈ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿದೆ.

‘ರಾಜ್ಯದ ಶಿಫಾರಸನ್ನು ರಾಷ್ಟ್ರಪತಿಯ ಪರಾಮರ್ಶೆಗೆ ಕಳುಹಿಸಲು ಸಂವಿಧಾನದ ಯಾವ ಅಂಶ ರಾಜ್ಯಪಾಲರಿಗೆ ಅಧಿಕಾರ ನೀಡಿದೆ? ರಾಜ್ಯಪಾಲರು ರಾಜ್ಯದ ಮುಖ್ಯಸ್ಥರು. ಹೀಗಿದ್ದ ಮೇಲೆ ಅವರನ್ನು ಸಮರ್ಥಿಸಿಕೊಳ್ಳಬೇಕಿದ್ದದ್ದು ರಾಜ್ಯವಲ್ಲವೇ? ಅವರ ಕ್ರಮವನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಎಲ್ಲಿದೆ ಎಂಬುದನ್ನು ವಿವರಿಸಿ’ ಎಂದು ಪೀಠವು ಪ್ರಶ್ನಿಸಿತು.

‘ಇಂತಹ ಎಲ್ಲಾ ಪ್ರಕರಣಗಳಲ್ಲೂ ರಾಜ್ಯಪಾಲರು ರಾಜ್ಯ ಸರ್ಕಾರವನ್ನೇ ಪ್ರತಿನಿಧಿಸುತ್ತಾರೆ. ಆದರೆ ರಾಜ್ಯ ಸರ್ಕಾರವು ತೆಗೆದುಕೊಂಡ ನಿರ್ಧಾರವು ಸಂವಿಧಾನಕ್ಕೆ ವಿರುದ್ಧವಾಗಿದ್ದಾಗ, ಆ ಶಿಫಾರಸನ್ನು ರಾಷ್ಟ್ರಪತಿಯ ಪರಾಮರ್ಶೆಗೆ ವರ್ಗಾಯಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ’ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಪೀಠಕ್ಕೆ ವಿವರಿಸಿದರು.

ಇದಕ್ಕೆ ಪೀಠವು ಆಕ್ಷೇಪ ವ್ಯಕ್ತಪಡಿಸಿತು. ‘ನಿಮ್ಮ ವಾದವನ್ನು ಒಪ್ಪುವುದಾದರೆ, ಕೊಲೆ ಪ್ರಕರಣಗಳಲ್ಲಿ ರಾಜ್ಯಪಾಲರು ಈ ಹಿಂದೆ ನೀಡಿದ ಕ್ಷಮಾಪಣೆಗಳೆಲ್ಲವನ್ನೂ ರಾಷ್ಟ್ರಪತಿಗೆ ಕಳಿಸಬೇಕಾಗಿತ್ತಲ್ಲವೇ. ಸರ್ಕಾರದ ಶಿಫಾರಸು ರಾಜ್ಯಪಾಲರಿಗೆ ಒಪ್ಪಿಗೆಯಾಗದೇ ಇದ್ದರೆ, ಅದರ ಪರಿಷ್ಕರಣೆಗೆ ರಾಜ್ಯ ಸಂಪುಟಕ್ಕೇ ಅದನ್ನು ವಾಪಸ್ ಕಳಿಸಿಬೇಕಿತ್ತಲ್ಲವೇ’ ಎಂದು ಪೀಠವು ಆಕ್ಷೇಪ ವ್ಯಕ್ತಪಡಿಸಿತು.

‘ಭಾರತೀಯ ದಂಡ ಸಂಹಿತೆಯ ಅಡಿ ಬರುವ ಪ್ರಕರಣಗಳ ಕ್ಷಮಾಪಣೆ ಅರ್ಜಿಗಳು ಸಮವರ್ತಿ ಪಟ್ಟಿಯಲ್ಲಿ ಬರುತ್ತವೆ. ಹೀಗಾಗಿ ಇದನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ’ ಎಂದು ನಟರಾಜ್ ಪ್ರತಿಪಾದಿಸಿದರು.

ಆಗ ಪೀಠವು, ‘ಹಾಗಿದ್ದರೆ, ಕೊಲೆ ಪ್ರಕರಣಗಳಲ್ಲಿ 161ನೇ ವಿಧಿಯ ಅಡಿ ರಾಜ್ಯಪಾಲರು ನೀಡಿದ ಎಲ್ಲಾ ಕ್ಷಮಾಪಣೆಗಳು ಅಸಿಂಧುವಾಗುತ್ತವೆಯಲ್ಲವೇ?’ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಟರಾಜ್, ‘ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದ್ದರೂ, ಪ್ರಾಥಮಿಕ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ ಎಂದು 246 ಮತ್ತು 254ನೇ ವಿಧಿಗಳು ಹೇಳುತ್ತವೆ’ ಎಂದು ಪ್ರತಿಪಾದಿಸಿದರು.

ಆಗ ಪೀಠವು, ‘ನಾವು ಈ ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ್ದೇವೆ. ನೀವು ಏನೇ ಹೇಳುವುದಿದ್ದರೂ ಅದನ್ನು ಲಿಖಿತ ರೂಪದಲ್ಲಿ ನೀಡಿ’ ಎಂದು ಸೂಚಿಸಿತು.

*

ರಾಜ್ಯ ಸಚಿವ ಸಂಪುಟದ ಶಿಫಾರಸು ಒಪ್ಪಿತವಲ್ಲದೇ ಇದ್ದರೆ, ವಾಪಸ್‌ ಕಳಿಸಬೇಕಿತ್ತು. ಹಾಗೇ ಮಾಡದೇ ಇದ್ದದ್ದು ಒಕ್ಕೂಟವ ವ್ಯವಸ್ಥೆಗೆ ವಿರುದ್ಧವಲ್ಲವೇ?
–ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT