ಬುಧವಾರ, ಮಾರ್ಚ್ 29, 2023
30 °C
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಲಖಿಂಪುರಖೇರಿ ಪ್ರಕರಣ: ಆರೋಪಿ ರಕ್ಷಣೆಗೆಂದೇ ಸಾಕ್ಷ್ಯ ಸಂಗ್ರಹಿಸಿದಂತಿದೆ, ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಖಿಂಪುರ–ಖೇರಿ ಪ್ರಕರಣದ ತನಿಖೆಯು ಸಮರ್ಪಕವಾಗಿಲ್ಲ. ಒಬ್ಬ ಆರೋಪಿಯನ್ನು ರಕ್ಷಿಸುವ ಉದ್ದೇಶದಿಂದಲೇ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ತೋರುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ, ಪ್ರಮುಖ ಆರೋಪಿ ಆಶಿಶ್‌ ಮಿಶ್ರಾ ಅವರನ್ನು ಉಲ್ಲೇಖಿಸಿ ಕೋರ್ಟ್‌ ಹೀಗೆ ಹೇಳಿದೆ.

ಎಸ್‌ಯುವಿ ಹರಿಸಿ ನಾಲ್ವರು ರೈತರ ಹತ್ಯೆ ಮತ್ತು ನಂತರದ ಹಿಂಸಾಚಾರದಲ್ಲಿ ನಾಲ್ವರ ಹತ್ಯೆ ಪ್ರಕರಣವು ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ಅಕ್ಟೋಬರ್‌ 3ರಂದು ನಡೆದಿತ್ತು. ಆಶಿಶ್‌ ಅವರೇ ರೈತರ ಮೇಲೆ ಎಸ್‌ವಿಯು ಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು ತನಿಖೆಯ ಗತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಉತ್ತರ ‍ಪ್ರದೇಶ ಸರ್ಕಾರ ಸಲ್ಲಿಸಿದ್ದ ಸ್ಥಿತಿಗತಿ ವರದಿಯೂ ಪೀಠದ ಅತೃಪ್ತಿಯನ್ನು ಹೆಚ್ಚಿಸಿತು.

ಸಾಕ್ಷಿಗಳನ್ನು ಬೇರೆ ಬೇರೆ ಎಫ್‌ಐಆರ್‌ಗಳಲ್ಲಿ ದಾಖಲಿಸಿ, ಗೋಜಲು ಮಾಡಲಾಗಿದೆ ಎಂದೂ ಪೀಠವು ಹೇಳಿದೆ.

ತನಿಖೆಯು ಸ್ವತಂತ್ರವಾಗಿ, ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯುವಂತಾಗಲು ನಿವೃತ್ತ ನ್ಯಾಯಮೂರ್ತಿಯೊಬ್ಬರ ನಿಗಾ ಅಗತ್ಯವಾಗಿದೆ ಎಂದು ಪೀಠವು ಹೇಳಿದೆ. ಪಂಜಾಬ್‌–ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ರಂಜಿತ್‌ ಸಿಂಗ್‌ ಮತ್ತು ರಾಕೇಶ್‌ ಕುಮಾರ್‌ ಜೈನ್‌ ಅವರ ಹೆಸರನ್ನೂ ಸೂಚಿಸಿದೆ. 

ರಾಜ್ಯದ ನ್ಯಾಯಾಂಗ ಆಯೋಗದ ಉಸ್ತುವಾರಿಯಲ್ಲಿ ವಿಶ್ವಾಸ ಇಲ್ಲ. ತನಿಖೆಯ ಉಸ್ತುವಾರಿಗೆ ರಾಜ್ಯದ ಹೊರಗಿನವರೇ ಆಗಬೇಕು ಎಂದೂ ಪೀಠವು ಹೇಳಿದೆ. ನ್ಯಾಯಾಂಗ ತನಿಖಾ ಆಯೋಗದ ಡಮುಖ್ಯಸ್ಥರಾಗಿ ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರದೀಪ್‌ ಕುಮಾರ್‌ ಶ್ರೀವಾಸ್ತವ ಅವರನ್ನು ಉತ್ತರಪ್ರದೇಶ ಸರ್ಕಾರ ನೇಮಿಸಿತ್ತು. 

ಪ್ರಮುಖ ಆರೋಪಿ ಆಶಿಶ್‌ ಮಿಶ್ರಾ ಬಿಟ್ಟರೆ ಉಳಿದ ಆರೋಪಿಗಳ ಮೊಬೈಲ್‌ ಫೋನ್‌ಗಳನ್ನು ಏಕೆ ಜಪ್ತಿ ಮಾಡಿಕೊಂಡಿಲ್ಲ ಎಂದು ಕೋರ್ಟ್‌ ಪ್ರಶ್ನಿಸಿದೆ. ಉಳಿದ ಆರೋಪಿಗಳು ಮೊಬೈಲ್‌ ಫೋನ್‌ ಬಳಸಿಲ್ಲವೇ ಎಂದು ಕೇಳಿದೆ. 

ತನಿಖೆಯ ಸ್ಥಿತಿಗತಿ ವರದಿಯಲ್ಲಿ ಏನೂ ಇಲ್ಲ ಎಂದೂ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ. 10 ದಿನ ಸಮಯ ಕೊಡಲಾಗಿತ್ತು. ಆದರೆ, ಪ್ರಯೋಗಾಲಯ ವರದಿಗಳನ್ನೇ ಸಲ್ಲಿಸಲಾಗಿಲ್ಲ ಎಂಬುದು ಪೀಠದ ಸಿಟ್ಟಿಗೆ ಕಾರಣವಾಗಿದೆ.

ಮೂರನೇ ಬಾರಿ ತರಾಟೆ

ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಮೂರನೇ ಬಾರಿ ತರಾಟೆಗೆ ತೆಗೆದುಕೊಂಡಿದೆ. ಪ್ರಮುಖ ಆರೋ‍ಪಿ ಆಶಿಶ್‌ ಅವರನ್ನು ಬಂಧಿಸದ ಬಗ್ಗೆ ಸುಪ್ರಿಂ ಕೋರ್ಟ್‌ ಅಕ್ಟೋಬರ್‌ 11ರಂದು ಆಕ್ಷೇಪ ವ್ಯಕ್ತಪಡಿಸಿತ್ತು. ಅದಾದ ಮೂರು ದಿನಗಳ ಬಳಿಕ, ಆಶಿಶ್‌ ಬಂಧನವಾಗಿತ್ತು. ಸಾಕ್ಷಿಗಳ ಹೇಳಿಕೆ ದಾಖಲು ವಿಚಾರದಲ್ಲಿಯೂ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. 

‘ಹತ್ಯೆ ಆರೋಪಿಗಳ ಜತೆ ಸರ್ಕಾರ’

ಲಖಿಂಪುರ ಖೇರಿ ಪ್ರಕರಣದಲ್ಲಿ ನ್ಯಾಯ ಸಿಗಬೇಕಿದ್ದರೆ ಸ್ವತಂತ್ರ ತನಿಖೆ ಅಗತ್ಯ ಎಂಬುದು ಸುಪ್ರೀಂ ಕೋರ್ಟ್‌ ಅಭಿ‍ಪ್ರಾಯದಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. 

‘ರೈತರ ಹತ್ಯೆ ಮಾಡಿದವರ ಜತೆಗೆ ಉತ್ತರ ಪ್ರದೇಶ ಸರ್ಕಾರ ನಿಂತಿದೆ ಎಂಬುದು ಈಗ ಸ್ಪಷ್ಟವಾಗಿದೆ. ರೈತರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ತಂದೆಗೆ (ಅಜಯ್‌ ಮಿಶ್ರಾ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ) ನರೇಂದ್ರ ಮೋದಿ ಅವರ ರಕ್ಷಣೆ ಇದೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು