ಶುಕ್ರವಾರ, ಅಕ್ಟೋಬರ್ 23, 2020
22 °C
ಮುಂದುವರಿದ ಪ್ರತಿಪಕ್ಷಗಳ ಪ್ರತಿಭಟನೆ *ಎರಡನೇ ದಿನವೂ ನಡೆಯದ ಕಲಾಪ

ರಾಜ್ಯಸಭೆ ಗದ್ದಲ: ಎಂಟು ಸದಸ್ಯರ ಅಮಾನತು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಪ್ರತಿಭಟನೆ ನಡೆಸಿರುವ ರಾಜ್ಯಸಭಾ ಸಂಸದರು

ನವದೆಹಲಿ: ಕೃಷಿ ಮಸೂದೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಗದ್ದಲ ಮಾಡಿದ್ದ ವಿರೋಧ ಪಕ್ಷಗಳ ಎಂಟು ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಗಿದೆ.

ತೃಣಮೂಲ ಕಾಂಗ್ರೆಸ್‌ನ ಡೆರೆಕ್‌ ಒಬ್ರಿಯಾನ್, ಡೋಲಾ ಸೇನ್,‌ ಆಮ್‌ ಆದ್ಮಿ ಪಕ್ಷದ ಸಂಜಯ್‌ ಸಿಂಗ್, ಕಾಂಗ್ರೆಸ್‌ನ ರಾಜೀವ್‌ ಸಾತವ್‌, ಸೈಯದ್‌ ನಾಸಿರ್‌ ಹುಸೇನ್ (ಕರ್ನಾಟಕ)‌, ರಿಪುನ್‌ ಬೋರಾ, ಸಿಪಿಎಂನ ಕೆ.ಕೆ.ರಾಗೇಷ್‌ ಮತ್ತು ಎಳಮರಂ ಕರೀಂ ಅವರನ್ನು ಚಳಿಗಾಲ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ.

ಭಾನುವಾರ ಕೃಷಿ ಮಸೂದೆ ಮಂಡನೆ ಮತ್ತು ಅಂಗೀಕಾರದ ವೇಳೆ ಕಲಾಪಗಳಿಗೆ ಅಡ್ಡಿಪಡಿಸಿದ ಈ ಸಂಸದರನ್ನು ಅಮಾನತು ಮಾಡುವಂತೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್‌ ನಿರ್ಣಯ ಮಂಡಿಸಿದರು. ನಿರ್ಣಯಕ್ಕೆ ಧ್ವನಿಮತದ ಅಂಗೀಕಾರ ದೊರೆಯಿತು. 

ಹೊರ ಹೋಗಲು ನಕಾರ: ಸದನದಿಂದ ಹೊರ ತೆರಳುವಂತೆ ಅಮಾನತುಗೊಂಡ ಸಂಸದರಿಗೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಸೂಚಿಸಿದರು. ಆದರೆ, ಹೊರ ಹೋಗಲು ನಿರಾಕರಿಸಿದ ಸಂಸದರು ನಿರ್ಣಯ ವಿರೋಧಿಸಿ ಪ್ರತಿಭಟನೆಗೆ ಇಳಿದರು. ಅಮಾನತು ನಿರ್ಣಯದ ವಿರುದ್ಧ ಘೋಷಣೆ ಕೂಗುತ್ತ ವಿರೋಧ ಪಕ್ಷಗಳ ಇತರ ಸದಸ್ಯರು ಸಹ ಪ್ರತಿಭಟನೆಗೆ ಸೇರಿಕೊಂಡರು.

ವಿವರಣೆ ನೀಡಲು ಸಂಸದರಿಗೆ ಅವಕಾಶ ನೀಡಬೇಕು ಮತ್ತು ಅಮಾನತು ನಿರ್ಣಯವನ್ನು ಮತಕ್ಕೆ ಹಾಕಬೇಕು ಎಂದು ಪಟ್ಟು ಹಿಡಿದರು. ಇದರಿಂದ ಐದು ಬಾರಿ ಕಲಾಪ ಮುಂದೂಡಬೇಕಾಯಿತು.‘ಸರ್ಕಾರ ಮಂಡಿಸಿದ ನಿರ್ಣಯದ ಮೇಲೆ ಅಮಾನತು ನಿರ್ಧಾರ ಕೈಗೊಳ್ಳಲಾಗಿದೆ’ ಎಂದ ಸಭಾಪತಿ ವೆಂಕಯ್ಯ ನಾಯ್ಡು ಅವರು ವಿರೋಧ ಪಕ್ಷಗಳ ಬೇಡಿಕೆಯನ್ನು ತಳ್ಳಿಹಾಕಿದರು. 

ಅವಿಶ್ವಾಸಕ್ಕೆ ಸಿಗದ ಮನ್ನಣೆ: ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರ ವಿರುದ್ಧ 46 ಸಂಸದರು ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್‌ ಸಲ್ಲಿಸಿದರು. ನೋಟಿಸ್‌ ಸರಿಯಾದ ಕ್ರಮದಲ್ಲಿಲ್ಲ ಎಂದು ನಾಯ್ಡು ಅವರು, ವಿರೋಧ ಪಕ್ಷಗಳ ಬೇಡಿಕೆ ತಳ್ಳಿ ಹಾಕಿದರು.

‘ಉಪ ಸಭಾಪತಿ ಹರಿವಂಶ್‌ ಅವರನ್ನು ಸಂಸದರು ಕೆಟ್ಟ ಪದಗಳಲ್ಲಿ ನಿಂದಿಸಿದ್ದಾರೆ ಮತ್ತು ಬೆದರಿಕೆ ಒಡ್ಡಿದ್ದಾರೆ. ಸದಸ್ಯರ ಈ ವರ್ತನೆ ನೋವು ತಂದಿದೆ. ರಾಜ್ಯಸಭೆಯ ಇತಿಹಾಸದಲ್ಲಿಯೇ ಇದು ಕರಾಳ ದಿನ’ ಎಂದು ನಾಯ್ಡು ವಿಷಾದ ವ್ಯಕ್ತಪಡಿಸಿದರು.

ಟಿಎಂಸಿ ಸಂಸದ ಡೆರೆಕ್‌ ಒಬ್ರಿಯಾನ್‌ ಸೇರಿದಂತೆ ಪ್ರತಿಯೊಬ್ಬರ ಹೆಸರು ಕೂಗಿ ಸದನದಿಂದ ಹೊರ ನಡೆಯು
ವಂತೆ ಅವರು ಸೂಚಿಸಿದರು. ಇದನ್ನು ಕಿವಿಗೆ ಹಾಕಿಕೊಳ್ಳದ ಸಂಸದರು ಪ್ರತಿಭಟನೆ ಮುಂದುವರಿಸಿದರು. ಇದರಿಂದ ಸೋಮವಾರವೂ ಕಲಾಪ ನಡೆಯಲಿಲ್ಲ.    

ಸದನದ ಅವಧಿ ಮುಗಿದ ನಂತರ ಹೊರಬಂದ ವಿರೋಧ ಪಕ್ಷಗಳ ಸದಸ್ಯರು ಸಂಸತ್‌ ಭವನದ ಹೊರಗೆ ಪ್ರತಿಭಟನೆ ಕುಳಿತರು. ‘ದೇಶದ ರೈತ ಸಮೂಹದ ಹಿತಾಸಕ್ತಿ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಘೋಷಣೆ ಕೂಗಿದರು.

*
ಸಂಸದರು ತಮ್ಮ ವರ್ತನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಸದಸ್ಯರ ವರ್ತನೆ ಮೇಲ್ಮನೆಯ‌ ಘನತೆ, ಗೌರವಕ್ಕೆ ಧಕ್ಕೆ ತಂದಿದೆ.  -ವೆಂಕಯ್ಯ ನಾಯ್ಡು, ರಾಜ್ಯಸಭೆ ಸಭಾಪತಿ

*
ಸಂಸದರ ಅಮಾನತು ನಿರ್ಣಯ ಏಕಪಕ್ಷೀಯ ಮತ್ತು ಪ್ರಜಾತಂತ್ರದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ 
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು