ಬುಧವಾರ, ಆಗಸ್ಟ್ 17, 2022
28 °C
ಕಮಲ ಪಾಳೆಯಕ್ಕೆ ಸುವೇಂದು?

ಟಿಎಂಸಿ ಶಾಸಕ ಸ್ಥಾನಕ್ಕೆ ಸುವೇಂದು ಅಧಿಕಾರಿ ರಾಜೀನಾಮೆ: ಬಿಜೆಪಿ ಸ್ವಾಗತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಾಯಕತ್ವದ ವಿರುದ್ಧ ಬಂಡೆದ್ದಿರುವ ಟಿಎಂಸಿಯ ಸುವೇಂದು ಅಧಿಕಾರಿ ಬುಧವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸುವೇಂದು ರಾಜೀನಾಮೆ ನೀಡಿದ್ದನ್ನು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಸ್ವಾಗತಿಸಿದ್ದು, ಪಕ್ಷವು ಅವರನ್ನು ಮುಕ್ತವಾಗಿ ಸ್ವಾಗತಿಸಲಿದೆ ಎಂದು ಹೇಳಿದ್ದಾರೆ.

ಕಳೆದ ತಿಂಗಳಷ್ಟೇ ಸುವೇಂದು ತಮ್ಮ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದ ನಾಯಕತ್ವ ಹಾಗೂ ಚಟುವಟಿಕೆಗಳಿಂದಲೂ ಅವರು ಅಂತರ ಕಾಯ್ದುಕೊಂಡಿದ್ದರು. ಬುಧವಾರ ಸಂಜೆ ರಾಜ್ಯ ವಿಧಾನಸಭೆಗೆ ಬಂದ ಅವರು, ವಿಧಾನಸಭಾ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ‘ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ತಕ್ಷಣವೇ ಇದನ್ನು ಅಂಗೀಕರಿಸಬೇಕೆಂದು ಕೋರುವೆ’ ಎಂದೂ ಸುವೇಂದು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಟಿಎಂಸಿಯೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಯತ್ನಗಳು ವಿಫಲವಾದ ನಂತರ, ಪಕ್ಷದ ಯಾರನ್ನೂ ಹೆಸರಿಸದೇ ಸುವೇಂದು ಪಕ್ಷದ ನಾಯಕತ್ವದ ಬಗ್ಗೆ ಹಲವು ಬಾರಿ ಟೀಕೆ ಮಾಡಿದ್ದರು. ಅವರ ಆಪ್ತರ ಪ್ರಕಾರ, ಟಿಎಂಸಿಯ ಪ್ರಾಥಮಿಕ ಸದಸ್ಯತ್ವಕ್ಕೂ ಸುವೇಂದು ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಶನಿವಾರದಿಂದ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳದ ಪ್ರವಾಸಲ್ಲಿದ್ದಾರೆ.

ಸುವೇಂದು ರಾಜೀನಾಮೆಗೆ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ‘ಇದೊಂದು ಒಳ್ಳೆಯ ಪರಿಹಾರ’ ಎಂದಿದ್ದಾರೆ. ‘ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸಮಾಧಾನಕರ ಸಂಗತಿ. ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಆಗಲು ಬಯಸಿದ್ದರಿಂದ ಬಿಜೆಪಿಗೆ ಸೇರಲು ಬಯಸಿದ್ದಾರೆ. ಹಾಗಾಗಿ, ಅವರು ಅಲ್ಲಿಗೆ ಹೋಗಬಹುದು. ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ನಾವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದೂ ಹೇಳಿದ್ದಾರೆ.

ಸುವೇಂದು ಅವರು ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಟಿಎಂಸಿ ಶಾಸಕರಾಗಿ ಆಯ್ಕೆಯಾಗಿದ್ದರು. 2009ರಲ್ಲಿ ನಂದಿಗ್ರಾಮದಲ್ಲಿ ಎಡಪಂಥೀಯ ಸರ್ಕಾರದ ವಿರುದ್ಧದ ಭೂಸ್ವಾಧೀನ ವಿರೋಧಿ ಚಳವಳಿಯಲ್ಲಿ ಸುವೇಂದು, ಮಮತಾ ಬ್ಯಾನರ್ಜಿ ಅವರಿಗೆ ನೆರವಾಗಿದ್ದರು. 2011ರಲ್ಲಿ ಮಮತಾ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು