ಶುಕ್ರವಾರ, ಜುಲೈ 1, 2022
22 °C

ಚೆನ್ನೈ: ಆಸ್ಪತ್ರೆಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿಯಾದ ತಮಿಳುನಾಡು ಸಿಎಂ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಸೂಪರ್‌ಸ್ಟಾರ್‌ ರಜನಿಕಾಂತ್‌

ಚೆನ್ನೈ: ಮಿದುಳಿನ ರಕ್ತ ಸಂಚಾರ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ನಡೆಸಲಾದ ಶಸ್ತ್ರಚಿಕಿತ್ಸೆಯಿಂದ (carotid artery revascularisation) ಸೂಪರ್‌ಸ್ಟಾರ್‌ ರಜನಿಕಾಂತ್‌ ಚೇತರಿಸಿಕೊಳ್ಳುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಇಂದು ರಜನಿಕಾಂತ್‌ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿರುವುದಾಗಿ ವರದಿಯಾಗಿದೆ.

ಇಲ್ಲಿನ ಕಾವೇರಿ ಆಸ್ಪತ್ರೆಯಲ್ಲಿ ರಜನಿಕಾಂತ್‌ (70) ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಮನೆಗೆ ತೆರಳುವ ಸಾಧ್ಯತೆಯಿದೆ. ಅಕ್ಟೋಬರ್‌ 28ರಂದು ನಿಯಮಿತ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಎದೆಯ ಭಾಗದಲ್ಲಿ ನೋವು ಮತ್ತು ಸುಸ್ತು ಕಾಣಿಸಿಕೊಂಡಿತ್ತು ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಭಾನುವಾರ ಮುಖ್ಯಮಂತ್ರಿ ಸ್ಟಾಲಿನ್‌ ಅವರು ರಜನಿಕಾಂತ್‌ ಅವರನ್ನು ಭೇಟಿಯಾಗಿ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ. ಆಸ್ಪತ್ರೆಯಿಂದ ಸ್ಟಾಲಿನ್‌ ಅವರು ಕಾರಿನಲ್ಲಿ ಹೊರ ಹೋಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

'ತಲೆ ಸುತ್ತಿದಂತಾದ ಅನುಭವವಾದ ಕಾರಣದಿಂದ ರಜನಿಕಾಂತ್‌ ಅವರು ಆಸ್ಪತ್ರೆಗೆ ದಾಖಲಾದರು. ತಜ್ಞ ವೈದ್ಯರ ತಂಡವು ಅವರ ಆರೋಗ್ಯ ತಪಾಸಣೆ ನಡೆಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಿದೆ, ಅವರು ಚೇತರಿಸಿಕೊಳ್ಳುತ್ತಿದ್ದಾರೆ' ಎಂದು ಶುಕ್ರವಾರ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿತ್ತು.

ಸೋಮವಾರ ದೆಹಲಿಯಲ್ಲಿ ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಜನಿಕಾಂತ್‌ ಅವರಿಗೆ 51ನೇ 'ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ' ಪ್ರದಾನ ಮಾಡಲಾಯಿತು. ರಜನಿಕಾಂತ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರನ್ನು ಭೇಟಿಯಾಗಿದ್ದರು.

ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಸಿನಿಮಾದ ಟ್ರೈಲರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ನವೆಂಬರ್ 4 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

2020ರ ಡಿಸೆಂಬರ್‌ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ರಜನಿಕಾಂತ್‌ ಅವರಿಗೆ ರಕ್ತದೊತ್ತಡದಲ್ಲಿ ಏರುಪೇರು ಉಂಟಾದ ಕಾರಣ ಹೈದರಾಬಾದ್‌ನಲ್ಲಿ ಅಪೋಲೊ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಎರಡು ದಿನಗಳ ಚಿಕಿತ್ಸೆ ನಂತರ ಗುಣಮುಖರಾಗಿದ್ದರು. ಹಿಂದೆ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು