ಬುಧವಾರ, ಸೆಪ್ಟೆಂಬರ್ 29, 2021
20 °C

ತಮಿಳುನಾಡಿನಲ್ಲಿ ಆಗಸ್ಟ್‌ 9ರವರೆಗೆ ಲಾಕ್‌ಡೌನ್‌ ಮುಂದುವರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಚೆನ್ನೈ: ಕೋವಿಡ್‌-19 ಪ್ರಕರಣಗಳು ಏಕಾಏಕಿ ಏರಿಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಆಗಸ್ಟ್ 9ರವರೆಗೆ ಲಾಕ್‌ಡೌನ್‌ ಮುಂದುವರಿಕೆಯಾಗಲಿದೆ ಎಂದು ಆದೇಶಿಸಿದೆ. ಹಾಗೆಯೇ ಹಿಂದಿನ ಆದೇಶಕ್ಕೆ ಅನುಗುಣವಾಗಿ ಲಾಕ್‌ಡೌನ್‌ ಜಾರಿಯಲ್ಲಿರಲಿದೆ. ಯಾವುದೇ ನಿಯಮಗಳಲ್ಲಿ ಸಡಿಲಿಕೆ ಇಲ್ಲ ಎಂದೂ ತಿಳಿಸಿದೆ.

ಜುಲೈ 16ರಂದು ಹೊರಡಿಸಿದ್ದ ಹಿಂದಿನ ಆದೇಶದಂತೆ, ಈಜುಕೊಳಗಳು, ಬಾರ್‌-ರೆಸ್ಟೋರೆಂಟ್‌ಗಳು, ಶಿಕ್ಷಣ ಸಂಸ್ಥೆಗಳು, ಮೃಗಾಲಯಗಳು ಮತ್ತು ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನಿರಾಕರಿಸಲಾಗಿತ್ತು. ಪುದುಚೇರಿ ಹೊರತುಪಡಿಸಿ ಅಂತರರಾಜ್ಯ ಪ್ರಯಾಣವನ್ನು ನಿರ್ಬಂಧಿಸಲಾಗಿತ್ತು. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳಿಗೆ ಅವಕಾಶ ನೀಡಿರಲಿಲ್ಲ. ಆದರೆ, 50ಕ್ಕಿಂತ ಹೆಚ್ಚು ಜನರು ಸೇರದೆ ಮದುವೆ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ನೀಡಲಾಗಿತ್ತು. ಅಂತ್ಯಕ್ರಿಯೆ ವೇಳೆ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದೂ ಸೂಚಿಸಿತ್ತು.

ಕಳೆದ ತಿಂಗಳು ತಮಿಳುನಾಡಿನ 31 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದಿತ್ತು. ಆದರೆ, ಕಳೆದ ಮೂರು ದಿನಗಳಿಂದ ಈ ಸಂಖ್ಯೆಯು ಏಕಾಏಕಿ ಏರಿಕೆಯಾಗಿದೆ. ಶುಕ್ರವಾರ 1,947 ಹೊಸ ಪ್ರಕರಣಗಳು ವರದಿಯಾಗಿವೆ. ಬುಧವಾರ ಮತ್ತು ಗುರುವಾರ ಕ್ರಮವಾಗಿ 1,756 ಹಾಗೂ 1,859 ಹೊಸ ಪ್ರಕರಣಗಳು ವರದಿಯಾಗಿದ್ದವು.

ತಮಿಳುನಾಡು ಆರೋಗ್ಯ ಸಚಿವ ಎಂ.ಎ. ಸುಬ್ರಮಣಿಯನ್ ರಾಜ್ಯದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಚ್ಚಿನ ಜನರು ಮಾಸ್ಕ್‌ಗಳನ್ನು ಧರಿಸುತ್ತಿಲ್ಲ. ಕೋವಿಡ್‌ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾವೈರಸ್‌ನ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ರೂಪಾಂತರ ತಳಿಗಳು ಸೋಂಕು ಪ್ರಕರಣಗಳ ಏರಿಕೆಗೆ ಕಾರಣವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ತಮಿಳುನಾಡಿನಲ್ಲಿ ಇದುವರೆಗೆ 25,00,434 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಸಾವಿನ ಸಂಖ್ಯೆ 34,023ಕ್ಕೆ ತಲುಪಿದೆ. ಸದ್ಯ 21,207 ಸಕ್ರಿಯ ಪ್ರಕರಣಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು