ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಪ್ರಣಾಳಿಕೆ: ಸ್ವರ್ಗ ಧರೆಗಿಳಿಸುವ ಭರವಸೆ ಅನುಷ್ಠಾನಕ್ಕೆ ಹಣವೆಲ್ಲಿದೆ?

ಸಾಲದ ಭಾರಕ್ಕೆ ತತ್ತರಿಸೀತು ತಮಿಳುನಾಡು: ಅರ್ಥಶಾಸ್ತ್ರಜ್ಞರ ಎಚ್ಚರಿಕೆ
Last Updated 18 ಮಾರ್ಚ್ 2021, 1:56 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಬದ್ಧ ಪ್ರತಿಸ್ಪರ್ಧಿ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆಯ ಸೋಲು–ಗೆಲುವಿನ ಸಾಧ್ಯತೆಗಳ ಜತೆಗೆ ತೀವ್ರ ಚರ್ಚೆ ನಡೆಯುತ್ತಿದೆ. ಅದರ ಜತೆಗೆ, ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಉಚಿತ ಕೊಡುಗೆಗಳು ಈಗಾಗಲೇ ಸಾಲದ ಸುಳಿಗೆ ಸಿಲುಕಿರುವ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

2006ರಲ್ಲಿ ಡಿಎಂಕೆ ಮುಖ್ಯಸ್ಥ ಕೆ. ಕರುಣಾನಿಧಿ ಅವರು ಅತಿಜನಪ್ರಿಯತೆಯ ಮೊರೆ ಹೋಗುವ ಕಾರ್ಯತಂತ್ರವನ್ನು ಮೊತ್ತ ಮೊದಲಿಗೆ ಆರಂಭಿಸಿದರು. ಉಚಿತ ಬಣ್ಣದ ಟಿ.ವಿ. ಮುಂತಾದ ಹತ್ತಾರು ಭರವಸೆಗಳು ಆಗಿನ ಪ್ರಣಾಳಿಕೆಯಲ್ಲಿ ಇದ್ದವು. ಮುಂದೆ ಇದುವೇ ಒಂದು ಪದ್ಧತಿಯಾಯಿತು. ಉಚಿತ ಲ್ಯಾಪ್‌ಟಾಪ್‌, ಹಾಲುಕರೆವ ದನ, ಮಿಕ್ಸರ್‌ ಗ್ರೈಂಡರ್‌, ಚಿನ್ನದ ಮಂಗಳಸೂತ್ರಗಳೆಲ್ಲವೂ ಪ್ರಣಾಳಿಕೆ ಸೇರಿದವು.

2021ರ ವಿಧಾನಸಭಾ ಚುನಾವಣೆಯಲ್ಲಿಯೂ ದ್ರಾವಿಡ ಪಕ್ಷಗಳೆರಡೂ ಉಚಿತ ಕೊಡುಗೆಗಳ ಭರವಸೆಯ ಮಳೆ ಸುರಿಸಿವೆ. ದಾಖಲೆಯ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಏರಲು ಬಯಸಿರುವ ಎಐಎಡಿಎಂಕೆ ಮತ್ತು ಹತ್ತು ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಲೇಬೇಕು ಎಂಬ ಉಮೇದಿನಲ್ಲಿರುವ ಡಿಎಂಕೆ ಉಚಿತ ಕೊಡುಗೆಗಳ ಜತೆಗೆ ಇತರ ಭರವಸೆಗಳನ್ನೂ ನೀಡಿವೆ. ಪೌರತ್ವ ತಿದ್ದುಪಡಿ ಕಾಯ್ದೆ ರದ್ದತಿ ಮತ್ತು ರಾಜೀವ್‌ ಗಾಂಧಿ ಹಂತಕರ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ ಎಂಬ ಭರವಸೆಗಳೂ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದಿವೆ.

ಉಚಿತ ವಾಷಿಂಗ್‌ ಮಷೀನ್‌, ಎಲ್ಲರಿಗೂ ವಸತಿ, ಸೋಲಾರ್‌ ಕುಕ್ಕರ್‌ಗಳು, ಶಿಕ್ಷಣ ಸಾಲ ಮನ್ನಾ, ಸರ್ಕಾರಿ ಸೇವೆಯಲ್ಲಿ ಇಲ್ಲದ ಕುಟುಂಬಗಳ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ಇತ್ಯಾದಿ ಎಐಎಡಿಎಂಕೆಯ ಭರವಸೆಗಳಲ್ಲಿ ಸೇರಿವೆ. ಅಕ್ಕಿ ಪಡೆಯುವ ಕಾರ್ಡ್‌ ಇರುವವರು ಕೋವಿಡ್‌–19ಕ್ಕೆ ಒಳಗಾದರೆ ₹4,000 ನೆರವು, ಖಾಸಗಿ ಕ್ಷೇತ್ರದ ಶೇ 75ರಷ್ಟು ನೌಕರಿಯನ್ನು ಸ್ಥಳೀಯರಿಗೆ ಮೀಸಲಿರಿಸುವ ಕಾನೂನು ಸೇರಿ ಹತ್ತಾರು ಘೋಷಣೆಗಳು ಡಿಎಂಕೆಯ ಪ್ರಣಾಳಿಕೆಯಲ್ಲಿಯೂ ಇವೆ.

ರಾಜ್ಯದಲ್ಲಿ ಮದ್ಯ ನಿಷೇಧವನ್ನು ಹಂತ ಹಂತವಾಗಿ ಜಾರಿಗೆ ತರುವುದಾಗಿ ಎರಡೂ ಪಕ್ಷಗಳು ವಾಗ್ದಾನ ಮಾಡಿವೆ. ಚುನಾವಣೆಯ ಬಳಿಕ ಸರ್ಕಾರ ರಚನೆಯಾದ ಕೂಡಲೇ ಮದ್ಯ ನಿಷೇಧ ಮಾಡುವುದಾಗಿ ಕಾಂಗ್ರೆಸ್‌ ಭರವಸೆ ಕೊಟ್ಟಿದೆ. ಕಾಂಗ್ರೆಸ್‌ ಪಕ್ಷವು ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಕಿರಿಯ ಪಾಲುದಾರ ಮಾತ್ರ ಆಗಿರುವುದರಿಂದ ಅಧಿಕಾರಕ್ಕೆ ಬಂದರೆ ಈ ಬೇಡಿಕೆ ಈಡೇರಿಸುವುದು ಕೂಡ ಡಿಎಂಕೆಯ ಹೊಣೆಯೇ ಆಗುತ್ತದೆ. ಹೊಸ ಸರ್ಕಾರವು ಭಾರಿ ಸಾಲದ ಹೊರೆಯನ್ನು ಹೊರಬೇಕಾಗುತ್ತದೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಚುನಾವಣಾ ಭರವಸೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸುಲಭವೇನೂ ಅಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.

‘ಪಕ್ಷಗಳು ನೀಡಿರುವ ಭರವಸೆಗಳು ಅಸಾಧಾರಣ. ಆದರೆ, ಅಧಿಕಾರಕ್ಕೆ ಬಂದ ಬಳಿಕ ಅದನ್ನು ಜಾರಿಗೊಳಿಸಲು ಹಣ ಹೊಂದಿಸುವುದು ಎಲ್ಲಿಂದ ಎಂದು ಯಾವ ಪಕ್ಷವೂ ಯೋಚನೆಯನ್ನೇ ಮಾಡಿರಲಿಕ್ಕಿಲ್ಲ’ ಎನ್ನುತ್ತಾರೆ ಕೇಂದ್ರದ ಮಾಜಿ ರೆವೆನ್ಯೂ ಕಾರ್ಯದರ್ಶಿ ಎಂ.ಆರ್.ಶಿವರಾಮನ್‌. ಪ್ರತಿ ಕುಟುಂಬದ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ಕೊಡುವುದಾಗಿ ಒಂದು ಪಕ್ಷವು ಭರವಸೆ ಕೊಟ್ಟಿದೆ. ಆದರೆ, ರಾಜ್ಯದಲ್ಲಿ ಎಷ್ಟು ಕುಟುಂಬಗಳಿವೆ ಎಂಬುದನ್ನೇ ಅವರು ಲೆಕ್ಕ ಹಾಕಿದಂತಿಲ್ಲ. ಲಕ್ಷಾಂತರ ಕುಟುಂಬಗಳಿವೆ. ಪ್ರತಿ ಕುಟುಂಬದ ಒಬ್ಬ ವ್ಯಕ್ತಿಗೆ ನೌಕರಿ ಕೊಟ್ಟರೆ ಸಂಬಳ ಮತ್ತು ಇತರ ಸೌಲಭ್ಯಕ್ಕಾಗಿ ಸರ್ಕಾರ ಮೇಲೆ ಆಗುವ ಹಣಕಾಸಿನ ಹೊರೆ ಎಷ್ಟು ಎಂದು ಅವರು ಪ್ರಶ್ನಿಸುತ್ತಾರೆ.

ಒಂದು ಬಾರಿ ಕೊಟ್ಟು ಬಿಡುವ ಕೊಡುಗೆಗಳು ಅರ್ಥ ವ್ಯವಸ್ಥೆಯನ್ನು ದೀರ್ಘಾವಧಿಯಲ್ಲಿ ಬಾಧಿಸುವುದಿಲ್ಲ. ಆದರೆ, ಜನಪ‍್ರಿಯ ಯೋಜನೆಗಳ ಜಾರಿಗಾಗಿ ಮರುಕಳಿಸುವ ವೆಚ್ಚವನ್ನು ಸರಿದೂಗಿಸುವುದು ದೊಡ್ಡ ಸವಾಲು. ಇಂತಹ ಯೋಜನೆಗಳಿಗೆ ದೊಡ್ಡ ಮೊತ್ತ ಬೇಕಾದರೆ ಅಭಿವೃದ್ಧಿ ಯೋಜನೆಗಳ ಜಾರಿಗೆ ಸರ್ಕಾರದ ಬಳಿ ಸಮಯವಾಗಲಿ ಹಣವಾಗಲಿ ಇರುವುದಿಲ್ಲ ಎಂಬ ಎಚ್ಚರಿಕೆ ನೀಡಿದವರು ಮದ್ರಾಸ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ನಿರ್ದೇಶಕ ಕೆ.ಆರ್‌. ಷಣ್ಮುಗಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT