ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಯ ಸಮಯೋಚಿತ ವಿತರಣೆಗೆ ಕಾರ್ಯಪಡೆ ರಚನೆ: ಪ್ರಧಾನಿಗೆ ಉದ್ಧವ್ ಠಾಕ್ರೆ ಮಾಹಿತಿ

Last Updated 24 ನವೆಂಬರ್ 2020, 8:38 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಲಸಿಕೆ ಸಮಯೋಚಿತ ವಿತರಣೆ ಮತ್ತು ವ್ಯಾಕ್ಸಿನೇಶನ್ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ರಾಜ್ಯವು ಕಾರ್ಯಪಡೆ ರಚಿಸಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದರು.

ಕೋವಿಡ್-19 ಪರಿಸ್ಥಿತಿ ಕುರಿತಂತೆ ಚರ್ಚಿಸಲು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ನಡೆಸುತ್ತಿರುವ ಸಭೆಯಲ್ಲಿ ಠಾಕ್ರೆ ಭಾಗವಹಿಸಿದ್ದಾರೆ.

ಕೊರೊನಾ ವೈರಸ್‌ ಲಸಿಕೆಗಾಗಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದ ಲಸಿಕೆ ತಯಾರಿಕೆಯ ಪಾಲುದಾರಿಕೆ ಪಡೆದಿರುವ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಸಿಇಒ ಅದಾರ್‌ ಪೂನಾವಾಲಾ ಅವರೊಂದಿಗೆ ರಾಜ್ಯ ಸರ್ಕಾರ ಸಂಪರ್ಕದಲ್ಲಿದೆ. ಲಸಿಕೆಯ ಸಮಯೋಚಿತ ವಿತರಣೆಗಾಗಿ ಮತ್ತು ವ್ಯಾಕ್ಸಿನೇಶನ್ ಕಾರ್ಯಕ್ರಮಕ್ಕಾಗಿ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಪ್ರಧಾನಿ ಮೋದಿಗೆ ತಿಳಿಸಿರುವುದಾಗಿ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಕೋವಿಡ್‌-19 ಲಸಿಕೆಯ ಮಧ್ಯಂತರ ವರದಿಯನ್ನು ಬ್ರಿಟಿಷ್‌ ಔಷಧ ತಯಾರಕ ಸಂಸ್ಥೆ ಅಸ್ಟ್ರಾಜೆನೆಕಾ ಸೋಮವಾರ ಬಹಿರಂಗಪಡಿಸಿದ್ದು, ಕೊರೊನಾ ವೈರಸ್‌ ಅನ್ನು ತಡೆಗಟ್ಟುವಲ್ಲಿ ಲಸಿಕೆಯು ಸರಾಸರಿ ಶೇ 70 ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಲಸಿಕೆಯ ಎರಡು ಡೋಸ್‌ಗಳನ್ನು ನೀಡಿದಾಗ ಒಂದರಲ್ಲಿ ಶೇ. 62ರಷ್ಟು, ಮತ್ತೊಂದರಲ್ಲಿ ಶೇ. 90ರಷ್ಟು ಪರಿಣಾಮಕಾರಿಯಾಗಿ ಕಂಡು ಬಂದಿರುವುದಾಗಿ ಮಾಹಿತಿ ನೀಡಿದೆ.

ಠಾಕ್ರೆ ಅವರನ್ನು ಒಳಗೊಂಡಂತೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಡದ ಸಿಎಂ ಭೂಪೇಶ್ ಬಘೇಲ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.

ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿರುವ ಮಹಾರಾಷ್ಟ್ರದಲ್ಲಿ 82,915 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 3,172 ಜನರು ಸಾವಿಗೀಡಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, 1,79,237 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT