ಮಂಗಳವಾರ, ಆಗಸ್ಟ್ 16, 2022
22 °C

ಸಿಂಘು ಗಡಿಯಲ್ಲಿನ ರೈತರ ಪ್ರತಿಭಟನೆಗೆ ಶಕ್ತಿ ತುಂಬುತ್ತಿರುವ ‘ತಂತ್ರಜ್ಞಾನ’ಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರಿಗೆ ‘ತಂತ್ರಜ್ಞಾನಗಳು‘ ಶಕ್ತಿ ತುಂಬುತ್ತಿವೆ...!

ಹೌದು, ಪ್ರತಿಭಟನಾ ನಿರತ ರೈತರ ಹಸಿವು ನೀಗಿಸಲು ಗಂಟೆಯೊಳಗೆ ಸಾವಿರಾರು ಚಪಾತಿ ಮಾಡಿಕೊಡುವ ಯಂತ್ರಗಳು ಸಿಂಘು ಗಡಿಯ ರಸ್ತೆಗೆ ಬಂದಿಳಿದಿವೆ. ನಿತ್ಯದ ಬಟ್ಟೆಗಳನ್ನು ಒಗೆದುಕೊಡಲು ವಾಷಿಂಗ್‌ ಮೆಷಿನ್‌ಗಳು ಟ್ರ್ಯಾಕ್ಟರ್‌ ಏರಿ ಪ್ರತಿಭಟನಾ ಸ್ಥಳಕ್ಕೆ ಬಂದಿವೆ. ಮೊಬೈಲ್ ಫೋನ್ ಚಾರ್ಜ್‌ ಮಾಡಲು, ರಾತ್ರಿ ವೇಳೆ ದೀಪಗಳನ್ನು ಬೆಳಗಿಸಲು ಸೋಲಾರ್ ಪ್ಯಾನಲ್‌ಗಳು ಜತೆಯಾಗಿವೆ.

ಪ್ರತಿಭಟನೆಗೆ ಅಡ್ಡಿಯಾಗಬಾರದು, ಧರಣಿನಿರತ ರೈತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದೊಂದಿಗೆ ಸಿಖ್‌ ಗುರುದ್ವಾರ ನಿರ್ವಹಣಾ ಸಮಿತಿ, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಹಲವು ‘ಸೇವಾ ಸಂಸ್ಥೆ‘ಗಳು ವಿವಿಧ ತಂತ್ರಜ್ಞಾನಗಳ ಮೂಲ ಪ್ರತಿಭಟನಾ ನಿರತರಿಗೆ ನೆರವಾಗಿವೆ.

ಪ್ರತಿಭಟನಾ ಸ್ಥಳದಲ್ಲಿ ಬೃಹತ್ ಆಟೊಮ್ಯಾಟಿಕ್ ಯಂತ್ರಗಳನ್ನು ಜೋಡಿಸಲಾಗಿದೆ. ಈ ಯಂತ್ರದಿಂದ ಒಂದು ಗಂಟೆಗೆ ಸುಮಾರು 1200 ಚಪಾತಿಗಳನ್ನು ಮಾಡಬಹುದು. ‘ಈ ಯಂತ್ರಕ್ಕೆ ಹಿಟ್ಟು ಹಾಕಿದರೆ ಸಾಕು. ಹಿಟ್ಟನ್ನು ಕತ್ತರಿಸಿ ಉಂಡೆ ಕಟ್ಟಿ, ಚಪಾತಿ ಲಟ್ಟಿಸಿ, ಬೇಯಿಸಿ ಕೊಡುತ್ತದೆ.

‘ಬೆಳಿಗ್ಗೆ 7ಕ್ಕೆ ಶುರುವಾದರೆ ರಾತ್ರಿ 12ರವರೆಗೆ ಈ ಯಂತ್ರ ನಡೆಯುತ್ತಿರುತ್ತದೆ. ನಿತ್ಯ 5 ಸಾವಿರ ಮಂದಿಗೆ ಊಟ ಪೂರೈಸುತ್ತೇವೆ ‘ ಎನ್ನುತ್ತಾರೆ ದೆಹಲಿ ಸಿಖ್‌ ಗುರುದ್ವಾರ ನಿರ್ವಹಣಾ ಸಮಿತಿಯ ಹರದೀಪ್ ಸಿಂಗ್‌.

ಟ್ರ್ಯಾಕ್ಟರ್‌ ಮೇಲೆ ವಾಷಿಂಗ್ ಮೆಷಿನ್‌

ಪ್ರತಿಭಟನೆಗಾಗಿ ತಮ್ಮ ಮನೆಗಳನ್ನು ಬಿಟ್ಟು ಬಂದಿರುವವರಿಗೆ, ನಿತ್ಯದ ಸ್ನಾನಕ್ಕೆ, ಬಟ್ಟೆಗಳನ್ನು ಶುಚಿಗೊಳಿಸುವುದು ದೊಡ್ಡ ಸಮಸ್ಯೆಯಾಯಿತು. ಕೆಲವರು ಈ ಕೆಲಸಕ್ಕಾಗಿ ಸಮೀಪದ ಪೆಟ್ರೋಲ್ ಬಂಕ್‌ಗಳನ್ನು ಆಶ್ರಯಿಸುತ್ತಿದ್ದರು. ಆದರೆ, ದೆಹಲಿ ಭಾಗದಲ್ಲಿ ಚಳಿ ಹೆಚ್ಚಾಗಿರುವುದರಿಂದ ಇದೂ ಸಾಧ್ಯವಾಗುತ್ತಿರಲಿಲ್ಲ.

ಇದನ್ನು ಗಮನಿಸಿದ ಲೂಧಿಯಾನದ 30ರ ಹರೆಯದ ಪ್ರಿನ್ಸ್ ಸಂಧು, ನಡುವೆ ಊರಿಗೆ ಹೋಗಿ ಬರುವಾಗ ಟ್ರ್ಯಾಕ್ಟರ್‌ ಮೇಲೆ ಎರಡು ವಾಷಿಂಗ್‌ ಮೆಷಿನ್‌ಗಳನ್ನು ಜೋಡಿಸಿಕೊಂಡು ಪ್ರತಿಭಟನಾ ಸ್ಥಳಕ್ಕೆ ಬಂದುಬಿಟ್ಟರು. ಜತೆಗೆ, ಮತ್ತೊಬ್ಬ ‘ಸಮಾಜ ಸೇವಕರು‘ ವಾಷಿಂಗ್‌ ಮೆಷಿನ್‌ ದೇಣಿಗೆಯಾಗಿ ನೀಡಿದರು. ಹೀಗೆ ಒಬ್ಬೊಬ್ಬರು ಒಂದೊಂದು ಯಂತ್ರಗಳನ್ನು ತಂದು ‘ಲಾಂಡ್ರಿ‘ ರೀತಿ ನಿತ್ಯವೂ ಬಟ್ಟೆ ಒಗೆದುಕೊಳ್ಳುತ್ತಿದ್ದಾರೆ.

‘ಬಟ್ಟೆ ಒಗೆಯಲು ಪ್ರತಿದಿನ ಸುಮಾರು 250 ಜನರು ಇಲ್ಲಿಗೆ ಬರುತ್ತಾರೆ. ಅನೇಕರು ಅದರಲ್ಲಿ ಬಟ್ಟೆ ತೊಳೆದುಕೊಳ್ಳುತ್ತಾರೆ. ಈ ಮಷೀನ್‌ಗಳನ್ನು ಬಳಸಲು ಗೊತ್ತಿಲ್ಲದ ಹಿರಿಯರಿಗೆ ನಾವು ಸಹಾಯ ಮಾಡುತ್ತೇವೆ‘ ಎನ್ನುತ್ತಾರೆ ಸಂಧು.

ಲಾಂಡ್ರಿ ಪಕ್ಕ ಚಾರ್ಜಿಂಗ್ ಕೇಂದ್ರ

ಮೊಬೈಲ್‌ ಫೋನ್‌ಗಳು ಪ್ರತಿಭಟನಾಕಾರರಿಗೆ ಪ್ರಮುಖವಾದ ಸುದ್ದಿ ನೀಡುವ ‘ಮಾಧ್ಯಮ‘. ಆದರೆ, ಬೇಗ ಚಾರ್ಜ್ ಮುಗಿದು ಹೋಗುತ್ತಿದ್ದರಿಂದ ರೀಚಾರ್ಜ್ ಮಾಡಲು ಕಷ್ಟವಾಗುತ್ತಿತ್ತು. 36ರ ಹರೆದಯ ಪುಷ್ಪೀಂದರ್ ಸಿಂಗ್, ಒಂದು ಉಪಾಯ ಮಾಡಿದರು. ತಮ್ಮೂರು ಹರಿಯಾಣದ ಕರ್ನಾಲ್‌ನ ಮನೆಯಿಂದ ಹೊರಡುವ ಮೊದಲು ಎರಡು 100 ವ್ಯಾಟ್ ಸೌರ ಫಲಕಗಳನ್ನು ತನ್ನ ಟ್ರಾಕ್ಟರ್ ಟ್ರಾಲಿಯ ಮೇಲೆ ಹಾಕಿಕೊಂಡು ಬಂದರು. ಪ್ರತಿಭಟನಾ ಸ್ಥಳದಲ್ಲೇ ಸೋಲಾರ್ ಮೊಬೈಲ್ ಚಾರ್ಜರ್ ಕೇಂದ್ರ ಜೋಡಿಸಿಕೊಂಡರು. ಬಟ್ಟೆ ಒಗೆಯು ಘಟಕದ ಸಮೀಪದಲ್ಲೇ ಈ ಜಾರ್ಜಿಂಗ್ ಯೂನಿಟ್ ಹಾಕಿದ್ದಾರೆ.

‘ಮೊಬೈಲ್ ಫೋನ್‌ಗಳು ನಮ್ಮ ಸುತ್ತ ಏನು ನಡೆಯುತ್ತಿದೆ ಎಂದು ತಿಳಿಯುವ ಏಕೈಕ ಮೂಲ. ಅವುಗಳನ್ನು ಚಾರ್ಜ್ ಮಾಡುವುದು ಸಮಸ್ಯೆಯೆಂದು ನನಗೆ ತಿಳಿದಿತ್ತು. ಹಾಗಾಗಿ ನಾನು ಇಲ್ಲಿಗೆ ಬರುವ ಮೊದಲು ಈ ಎರಡು ಸೌರ ಫಲಕಗಳನ್ನು ತಲಾ ₹2,400ಗೆ ಖರೀದಿಸಿದೆ. ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಅವು ನಮಗೆ ಸಹಾಯ ಮಾಡುತ್ತವೆ. ಜತೆಗೆ, ರಾತ್ರಿ ವೇಳೆ ಬೆಳಕು ನೀಡಲು ನೆರವಾಗಿವೆ‘ ಎನ್ನುತ್ತಾರೆ ಪುಷ್ಪೀಂದರ್ ಸಿಂಗ್. ಸಿಂಗ್ ಅವರನ್ನು ನೋಡಿ, ಅನೇಕರು ಸೌರಫಲಕಗಳನ್ನು ಹಾಕಿಕೊಂಡು ಚಾರ್ಜ್‌ ಮಾಡಿಕೊಳ್ಳುತ್ತಿದ್ದಾರೆ.

ಈ ಪ್ರತಿಭಟನಾಕಾರರಿಗೆ ಖಲ್ಸಾ ಏಡ್ ಅಂತರರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ, ಸಿಂಘು ಗಡಿಯಲ್ಲಿನ ಪ್ರತಿಭಟನಾಕಾರರಿಗೆ ಕಾಲು ಮಸಾಜ್ ಮಾಡುವ ಹಾಗೂ ನೀರು ಕಾಯಿಸುವ ಗೀಸರ್‌ಗಳನ್ನು ಅಳಡಿಸಲು ನೆರವಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು