ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯಪ್ಪಸ್ವಾಮಿ ಕುರಿತು ಆಕ್ಷೇಪಾರ್ಹ ಹೇಳಿಕೆ: ತೆಲಂಗಾಣದಲ್ಲಿ ವ್ಯಕ್ತಿ ಬಂಧನ

Last Updated 31 ಡಿಸೆಂಬರ್ 2022, 14:40 IST
ಅಕ್ಷರ ಗಾತ್ರ

ಹೈದರಾಬಾದ್‌: ಅಯ್ಯಪ್ಪ ಸ್ವಾಮಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ, ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ನಾಸ್ತಿಕ ಬೈರಿ ನರೇಶ್‌ ಎಂಬುವವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಕೊಡಂಗಲ್‌ ಪೊಲೀಸ್ ಠಾಣೆಯಲ್ಲಿ ಬೈರಿ ಅವರ ವಿರುದ್ಧ ಶುಕ್ರವಾರ ಮೊಕದ್ದಮೆ ದಾಖಲಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಬೈರಿ ಅವರನ್ನು ಹನಮ್‌ಕೊಂಡ ಜಿಲ್ಲೆಯ ಕಮಲಾಪುರಂನಲ್ಲಿ ಶನಿವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಕೋಡಂಗಲ್‌ನಲ್ಲಿ ಡಿಸೆಂಬರ್‌ 19ರಂದು ನಡೆದಿದ್ದ ನಾಸ್ತಿಕರ ಸಭೆಯಲ್ಲಿ ಭಾಷಣ ಮಾಡಿದ್ದ ಬೈರಿ ಅವರು ಹಿಂದೂ ದೇವತೆ ಅಯ್ಯಪ್ಪ ಹುಟ್ಟಿನ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಭಾಷಣದ ವಿಡಿಯೊ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಹಿಂದೂ ಸಮುದಾಯದವರಿಂದ ಆಕ್ರೋಶ ವ್ಯಕ್ತವಾಯಿತು.

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿರುವವರು ನರೇಶ್‌ ಅವರ ಹೇಳಿಕೆ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ಮತ್ತು ರಸ್ತೆ ತಡೆ ಶನಿವಾರವೂ ಮುಂದುವರಿಯಿತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರ ಗೃಹ ಕಚೇರಿ ಪ್ರಗತಿ ಭವನದ ಬಳಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದರು.

ತೆಲಂಗಾಣದ ವಿಎಚ್‌ಪಿ ಕಾರ್ಯಕರ್ತರು ಕೊಠಾಪೇಟ್‌ನಲ್ಲಿ ಸರ್ಕಾರದ ಪ್ರತಿಕೃತಿ ದಹಿಸಿದ್ದರು. ಜೊತೆಗೆ, ನಾಸ್ತಿಕರ ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.

ಬೈರಿ ಅವರ ಜೊತೆ ರೆಂಜಾರ್ಲ ರಾಜೇಶ್‌ ಎಂಬುವವರು ಕೂಡ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT