ಗುರುವಾರ , ಸೆಪ್ಟೆಂಬರ್ 16, 2021
25 °C

ತೆಲಂಗಾಣ: ಅಕ್ರಮ ವಿರೋಧಿಸಿ ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ನಾಯಕರಿಗೆ ಗೃಹ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ‘ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ, ಕಾಂಗ್ರೆಸ್‌ ಸಂಸದ ಎ.ರೇವಂತ ರೆಡ್ಡಿ ಸೇರಿದಂತೆ ಪಕ್ಷದ ಹಲವು ನಾಯಕರನ್ನು ವಿವಿಧ ಸ್ಥಳಗಳಲ್ಲಿ ಸೋಮವಾರ ಗೃಹ ಬಂಧನದಲ್ಲಿ ಇರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಕಳೆದ ವಾರ ತೆಲಂಗಾಣ ಸರ್ಕಾರ ನಡೆಸಿದ ಕೋಕಪೇಟೆ ಜಮೀನುಗಳ ಇ-ಹರಾಜಿನಲ್ಲಿ ₹ 1,000 ಕೋಟಿಯ ಅಕ್ರಮಗಳು ನಡೆದಿವೆ’ ಎಂದು ಮಲ್ಕಾಜ್‌ಗಿರಿಯ ಲೋಕಸಭಾ ಸದಸ್ಯ ಕಾಂಗ್ರೆಸ್ ನ ರೇವಂತ್ ರೆಡ್ಡಿ ಆರೋಪಿಸಿದ್ದರು.

ಈ ಅಕ್ರಮವನ್ನು ವಿರೋಧಿಸಿ ತೆಲಂಗಾಣದ ಕಾಂಗ್ರೆಸ್‌ ಘಟಕವು ಕೋಕಪೇಟೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ರೇವಂತ ರೆಡ್ಡಿ, ಶಾಸಕ ಸಂಗ ರೆಡ್ಡಿ, ತೆಲಂಗಾಣ ಕಾಂಗ್ರೆಸ್‌ ಘಟಕದ ಕಾರ್ಯಾಧ್ಯಕ್ಷ ಟಿ. ಜಯಪ್ರಕಾಶ್‌ ರೆಡ್ಡಿ, ಮಲ್ಲು ಭಟ್ಟಿ, ಮೊಹಮ್ಮದ್‌ ಆಲಿ ಶಬ್ಬೀರ್‌ ಸೇರಿದಂತೆ ಹಲವು ಹಿರಿಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.

‘ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಅಧಿವೇಶನ ನಡೆಯುತ್ತಿರುವ ಈ ಸಮಯದಲ್ಲಿ ನನ್ನನ್ನು ಸಂಸತ್ತಿಗೆ ಹೋಗದಂತೆ ತಡೆಯಲಾಗುತ್ತಿದೆ. ನನ್ನ ಸಾಂವಿಧಾನಿಕ ಸವಲತ್ತನ್ನು ಹತ್ತಿಕ್ಕಲಾಗುತ್ತಿದೆ’ ಎಂದು ರೇವಂತ ರೆಡ್ಡಿ ಅವರು ಲೋಕಸಭಾ ಸ್ಪೀಕರ್‌ಗೆ ಪತ್ರವನ್ನು ಬರೆದಿದ್ಧಾರೆ.

‘ಸಂಸತ್ತಿನ ಅಧಿವೇಶನದಲ್ಲಿ ಪಾಲ್ಗೊಳದಂತೆ ನನ್ನನ್ನು ತಡೆಯಲಾಗುತ್ತಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಮತ್ತು ಮುಖ್ಯ ಕಾರ್ಯದರ್ಶಿ, ಡಿಜಿಪಿ ಅವರ ಆದೇಶದಂತೆ ರಾಜ್ಯ ಪೊಲೀಸರು ಈ ಕ್ರಮಕೈಗೊಂಡಿದ್ಧಾರೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಸಂಸತ್ತಿನಲ್ಲಿ ಕೋಕಪೇಟೆ ಜಮೀನು ಅಕ್ರಮದ ಬಗ್ಗೆ ಪ್ರಶ್ನಿಸುತ್ತೇನೆ ಎಂಬ ಹೆದರಿಕೆಯಿಂದ ಮುಖ್ಯಮಂತ್ರಿ ಮತ್ತು ಡಿಜಿಪಿ ಅವರು ನಾನು ಅಧಿವೇಶನದಲ್ಲಿ ಭಾಗವಹಿಸದಂತೆ ತಡೆದಿದ್ದಾರೆ. ಏನೇ ಆಗಲಿ, ಸಂಸದನಾಗಿ ನಾನು ಈ ವಿಷಯವನ್ನು ಬೆಳಕಿಗೆ ತರುತ್ತೇನೆ’ ಎಂದು ರೇವಂತ ರೆಡ್ಡಿ ಟ್ವೀಟ್‌ ಮಾಡಿದ್ದಾರೆ.

ಆದರೆ ಆಡಳಿತಾರೂಢ ಟಿಆರ್‌ಎಸ್‌ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು, ಜಮೀನು ಹರಾಜಿನ ಪ್ರಕ್ರಿಯೆಗಳು ಪಾರದರ್ಶಕವಾಗಿತ್ತು ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು