ಮಂಗಳವಾರ, ಮಾರ್ಚ್ 28, 2023
31 °C

₹7.4 ಕೋಟಿ ವಿಮೆ ಹಣಕ್ಕಾಗಿ ತನ್ನದೇ ಸಾವಿನ ನಾಟಕವಾಡಿದ ಸರ್ಕಾರಿ ಉದ್ಯೋಗಿ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲಂಗಾಣದಲ್ಲಿ ಸರ್ಕಾರಿ ಉದ್ಯೋಗಿಯೊಬ್ಬರು ವಿಮೆ ಹಣಕ್ಕಾಗಿ, ತಾನು ಕಾರಿನ ಸಮೇತ ಸುಟ್ಟು ಭಸ್ಮವಾದಂತೆ ನಾಟಕವಾಡಿರುವ ಪ್ರಕರಣ ತಡವಾಗಿ ಬಯಲಾಗಿದೆ.

₹7.4 ಕೋಟಿ ಮೊತ್ತದ ವಿಮೆ ಹಣಕ್ಕಾಗಿ ಆರೋಪಿ ತನ್ನದೇ ಸಾವಿನ ಬಗ್ಗೆ ಕಥೆ ಹೆಣೆದಿದ್ದಾನೆ. ಪೊಲೀಸರ ತನಿಖೆಯಿಂದ ಆತನ ಸಂಚು ಬಯಲಾಗಿದ್ದು, ಆತನ ಪತ್ನಿ ಹಾಗೂ ಇಬ್ಬರು ಸಂಬಂಧಿಕರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಮೇದಕ್ ಎಸ್ಪಿ ರೋಹಿಣಿ ಪ್ರಿಯದರ್ಶಿನಿ ತಿಳಿಸಿದ್ದಾರೆ.

44 ವರ್ಷದ ಪ್ರಮುಖ ಆರೋಪಿ ಮಾಲೋತ್ ಧರ್ಮ ತೆಲಂಗಾಣ ರಾಜ್ಯ ಸಚಿವಾಲಯದಲ್ಲಿ ಸಹಾಯಕ ಸೆಕ್ಷನ್ ಆಫೀಸರ್ (ಎಎಸ್ಒ) ಆಗಿ ಕೆಲಸ ಮಾಡುತ್ತಿದ್ದ. ಷೇರು ಮಾರುಕಟ್ಟೆಯಲ್ಲಿ ₹85 ಲಕ್ಷ ನಷ್ಟ ಅನುಭವಿಸಿದ ಆತ, ಪತ್ನಿ ಹಾಗೂ ಸಂಬಂಧಿಕರೊಂದಿಗೆ ಸೇರಿ ವಿಮೆ ಹಣ ಕ್ಲೈಮ್ ಮಾಡಿಕೊಳ್ಳುವ ಬಗ್ಗೆ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮೇದಕ್‌ನಲ್ಲಿ ಅನುಮಾನಾಸ್ಪದ ಸಾವು ಪ್ರಕರಣವೊಂದು ದಾಖಲಾಗಿತ್ತು. ಪೊಲೀಸರ ತನಿಖೆ ವೇಳೆ ಆಘಾತಕಾರಿ ಸಂಗತಿಗಳು ಹೊರಬಂದಿವೆ. ಎಂಟು ದಿನಗಳ ಹಿಂದೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹವೊಂದು ಕಾರಿನಲ್ಲಿ ಪತ್ತೆಯಾಗಿತ್ತು. ಇದನ್ನು ಮಾಲೋತ್ ಧರ್ಮ ಅವರ ಮೃತದೇಹ ಎಂದು ಬಿಂಬಿಸಲಾಗಿತ್ತು.

ಕಾರಿನಲ್ಲಿ ಮೃತಪಟ್ಟಿದ್ದ ವ್ಯಕ್ತಿಯನ್ನು ಬಾಬು ಎಂದು ಗುರುತಿಸಲಾಗಿದೆ. ಧರ್ಮ ಮತ್ತು ಅವನ ಸೋದರಳಿಯ ಶ್ರೀನಿವಾಸ್ ಸೇರಿ ಬಾಬುರನ್ನು ಹತ್ಯೆ ಮಾಡಿದ್ದರು. ಬಳಿಕ ಆತ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಬಿಂಬಿಸಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. 

ಘಟನೆ ವಿವರ: ಜ. 9ರಂದು ಮೇದಕ್‌ನ ವೆಂಕಟಾಪುರದಲ್ಲಿ ಕಾರೊಂದು ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಾಹನವು ರಸ್ತೆ ಬದಿಯ ಕಂದಕಕ್ಕೆ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡಿರಬಹುದು. ಇದರ ಪರಿಣಾಮ ಚಾಲಕ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು. 

ಘಟನಾ ಸ್ಥಳದಲ್ಲಿ ಧರ್ಮ ಅವರ ಐಡಿ ಕಾರ್ಡ್ ಸೇರಿದಂತೆ ಕೆಲವು ಪರಿಕರಗಳು ಪತ್ತೆಯಾಗಿದ್ದವು. ಸುಟ್ಟು ಕರಕಲಾದ ಮೃತದೇಹ ಧರ್ಮ ಅವರದ್ದೇ ಎಂದು ಕುಟುಂಬಸ್ಥರು ಗುರುತಿಸಿದ್ದರು. 

ಘಟನೆ ಕುರಿತು ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ಧರ್ಮ ಅವರ ಫೋನ್ ಕರೆಗಳ ಪರಿಶೀಲನೆ ನಡೆಸಿದ್ದರು. 

ಕೃತ್ಯದ ಮರು ದಿನ ವಿಡಿಯೊವೊಂದರಲ್ಲಿ ಧರ್ಮ ಅವರನ್ನು ಹೋಲುವಂತೆ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು, ಧರ್ಮ ಸತ್ತಿಲ್ಲ, ಬದಲಾಗಿ ಬೇರೆ ವ್ಯಕ್ತಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. 

ವಿಮೆ ಹಣಕ್ಕಾಗಿ ನಾಟಕ: ಧರ್ಮ ಹೆಸರಿನಲ್ಲಿ ಹಲವು ವಿಮೆ ಪಾಲಿಸಿಗಳಿವೆ. ಹೀಗಾಗಿ ತನ್ನದೇ ಸಾವಿನ ಕುರಿತು ನಾಟಕವಾಡಿದ್ದು, ಮೃತದೇಹ ಧರ್ಮ ಅವರದ್ದೇ ಎಂದು ಗುರುತಿಸಿದ್ದ ಕುಟುಂಬಸ್ಥರು ಅಂತ್ಯ ಸಂಸ್ಕಾರವನ್ನು ನಡೆಸಿದ್ದಾರೆ. ತಮ್ಮ ಸಂಬಂಧಿಕರ ಮೂಲಕ ವಿಮೆ ಹಣ ಪಡೆದುಕೊಳ್ಳಲು ಧರ್ಮ ಸಂಚು ರೂಪಿಸಿದ್ದ. 

ಧರ್ಮ, ಜನವರಿ 5ರಿಂದ ರಜೆಯಲ್ಲಿದ್ದು, ಪತ್ನಿ ಜತೆ ವೆಂಕಟಾಪುರಕ್ಕೆ ತೆರಳಿದ್ದ. ಜ. 7ರಂದು ಹೈದರಾಬಾದ್‌ಗೆ ಮರಳಿದ್ದ. ಮರು ದಿನ ವೆಂಕಟಾಪುರದ ಹೊರವಲಯದಲ್ಲಿ ಆತನ ಕಾರಿನಲ್ಲಿ ಸುಟ್ಟ ದೇಹ ಪತ್ತೆಯಾಗಿತ್ತು.

ಇದನ್ನೂ ಓದಿ... ಭಾರತಕ್ಕೆ ನ್ಯೂಜಿಲೆಂಡ್ ಪ್ರಧಾನಿ ಜಸಿಂದಾರಂತಹ ನಾಯಕರ ಅಗತ್ಯವಿದೆ: ಜೈರಾಮ್ ರಮೇಶ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು