ಶನಿವಾರ, ಸೆಪ್ಟೆಂಬರ್ 26, 2020
22 °C
ಬಿಎಸ್‌ಪಿ ಶಾಸಕರನ್ನು ಕಾಂಗ್ರೆಸ್‌ ಪಕ್ಷದಲ್ಲಿ ವಿಲೀನಗೊಳಿಸಿದ ಪ್ರಕರಣ

ರಾಜಸ್ಥಾನ ವಿಧಾನಸಭೆ ಸ್ಪೀಕರ್‌ಗೆ ಹೈಕೋರ್ಟ್‌ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ: ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಆರು ಶಾಸಕರನ್ನು ಕಾಂಗ್ರೆಸ್‌ ಪಕ್ಷದೊಂದಿಗೆ ವಿಲೀನಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ವಿಧಾನಸಭಾಧ್ಯಕ್ಷ ಸಿ.ಪಿ.ಜೋಶಿಯವರಿಗೆ ಹೈ ಕೋರ್ಟ್‌ ಬುಧವಾರ ನೋಟಿಸ್‌ ಜಾರಿ ಮಾಡಿದೆ.

ಬಿಎಸ್‌ಪಿ ಶಾಸಕರನ್ನು ಕಾಂಗ್ರೆಸ್‌ ಪಕ್ಷದೊಂದಿಗೆ ವಿಲೀನಗೊಳಿಸಿರುವುದರ ವಿರುದ್ಧ ಬಿಜೆಪಿ ನಾಯಕ ಮದನ್ ದಿಲಾವರ್‌ ಮತ್ತು ಬಿಎಸ್‌ಪಿಯ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್‌ ಮಿಶ್ರಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಜೋಶಿಯವರಿಗೆ ನೋಟಿಸ್ ನೀಡಿತು. ಗುರುವಾರದೊಳಗೆ ನೋಟಿಸ್‌ಗೆ ಉತ್ತರಿಸಲು ಹೈಕೋರ್ಟ್‌ ಸೂಚಿಸಿದೆ. ಗುರುವಾರ 10.30ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

ಹಿನ್ನೆಲೆ: ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್‌ಚಂದ್‌ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವನಾ ಮತ್ತು ರಾಜೇಂದ್ರ ಗುಧಾ ಎಂಬ ಆರು ಮಂದಿ ಶಾಸಕರಿಗೆ ಸದ್ಯ ಬಿಎಸ್‌ಪಿ ವಿಪ್‌ ಜಾರಿ ಮಾಡಿದೆ. 2018ರಲ್ಲಿ ನಡೆದಿದ್ದ ರಾಜಸ್ಥಾನ ವಿಧಾನಸಭೆ ಚುನಾಣೆಯಲ್ಲಿ ಇವರೆಲ್ಲರೂ ಬಿಎಸ್‌ಪಿಯಿಂದ ಆಯ್ಕೆಯಾಗಿದ್ದರು.

ಆದರೆ, ಆರೂ ಜನರೂ ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿ ಕಳೆದ ವರ್ಷ ಸೆಪ್ಟೆಂಬರ್‌ 16ರಂದು ಸ್ಪೀಕರ್‌ಗೆ ವಿಲೀನ ಅರ್ಜಿ ಸಲ್ಲಿಸಿದ್ದರು. ಎರಡು ದಿನಗಳ ನಂತರ ಆದೇಶ ಹೊರಡಿಸಿದ್ದ ಸ್ಪೀಕರ್‌ ಆರು ಮಂದಿಯೂ ಇನ್ನು ಮುಂದೆ ಕಾಂಗ್ರೆಸ್‌ನ ಶಾಸಕರು ಎಂದು ಘೋಷಿಸಿದ್ದರು. ಹೀಗಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 107ಕ್ಕೆ ಏರಿತ್ತು. ಆರೂ ಶಾಸಕರೂ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಬಿಎಸ್‌ಪಿಯ ಆರು ಮಂದಿ ಶಾಸಕರನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿರುವ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಶಾಸಕ ಮದನ್‌ ದಿಲಾವರ್ ಮತ್ತು ಬಿಎಸ್‌ಪಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು