ಗುರುವಾರ , ಫೆಬ್ರವರಿ 25, 2021
28 °C
ಅಪಪ್ರಚಾರದ ವಿರುದ್ಧ ಹರಿಹಾಯ್ದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌

ಸುಳ್ಳಿನಿಂದ ಲಸಿಕೆ ಕಾರ್ಯಕ್ರಮಕ್ಕೆ ಹಿನ್ನಡೆ: ಸಚಿವ ಹರ್ಷವರ್ಧನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್ ಲಸಿಕೆ ಸುರಕ್ಷಿತವಲ್ಲ ಎಂದು ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಇದರಿಂದ ಹೆದರಿರುವ ಜನರು ಲಸಿಕೆ ಪಡೆಯುವುದರಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ಗಳಲ್ಲಿ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ಕಾರ್ಯಕ್ರಮಕ್ಕೆ ಜನವರಿ 11ರಂದು ಚಾಲನೆ ನೀಡಲಾಗಿದೆ. ಈಗಾಗಲೇ ಲಕ್ಷಾಂತರ ಮಂದಿ ಲಸಿಕೆ ಪಡೆದಿದ್ದಾರೆ. ಕೆಲವರಲ್ಲಷ್ಟೇ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ಲಸಿಕೆ ಅಪಾಯಕಾರಿಯಲ್ಲ. ಆದರೆ ಕೆಲವು ಮಂದಿ ರಾಜಕೀಯ ಲಾಭಕ್ಕಾಗಿ, ಲಸಿಕೆ ಸುರಕ್ಷಿತವಲ್ಲ ಎದು ಸುಳ್ಳು ಹೇಳುತ್ತಿದ್ದಾರೆ. ಲಸಿಕೆ ಪಡೆಯಲು ನೋಂದಣಿ ಮಾಡಿಸಿಕೊಂಡಿದ್ದವರೂ, ಈ ಸುಳ್ಳನ್ನು ನಂಬಿ ಹಿಂದೆ ಸರಿಯುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೋವಿಡ್‌ ಸಾಂಕ್ರಾಮಿದ ಶವಪೆಟ್ಟಿಗೆಗೆ ಈ ಲಸಿಕೆಯೇ ಕೊನೆಯ ಮೊಳೆ. ಲಸಿಕೆ ಪಡೆಯುವುದರಿಂದ ಕೋವಿಡ್ ನಿರ್ನಾಮ ಮಾಡಬಹುದು. ಕೋವಿಡ್‌ಗೆ ಹೆದರಿ, ಲಸಿಕೆಗೆ ಅಲ್ಲ. ಲಸಿಕೆ ಅಪಾಯಕಾರಿ ಎಂದು ಹೇಳುತ್ತಿರುವವರಿಗೂ ಲಸಿಕೆ ನೀಡಬೇಕಾದ ಪರಿಸ್ಥಿತಿ ಬರಲಿದೆ. ಲಸಿಕೆ ಬಗ್ಗೆ ಜನರಲ್ಲಿ ಮೂಡಿರುವ ಭಯವನ್ನು ಹೋಗಲಾಡಿಸಲು ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಗಳನ್ನು ಹಂಚಲಾಗುತ್ತಿದೆ. ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಧಾನಿಗೆ ಎರಡನೇ ಹಂತದಲ್ಲಿ ಲಸಿಕೆ: ಮೊದಲ ಸುತ್ತಿನಲ್ಲಿ ಮೂರು ಕೋಟಿಗೂ ಹೆಚ್ಚು ಆರೋಗ್ಯ ಮತ್ತು ಮುಂಚೂಣಿಯಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಲಸಿಕೆ ಹಾಕಿದ ನಂತರ, ಚುನಾಯಿತ ಪ್ರತಿನಿಧಿಗಳಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಎರಡನೇ ಸುತ್ತಿನಲ್ಲಿ ಕೋವಿಡ್ ಲಸಿಕೆ ಹಾಕುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಸೇರಿದಂತೆ ಸಂಪುಟ ಸಚಿವರು, ಮುಖ್ಯಮಂತ್ರಿಗಳು, ಎಲ್ಲಾ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಲಸಿಕೆ ಹಾಕಿಸಿಕೊಳ್ಳಲಿದ್ದಾರೆ. ಆದರೂ, ರಾಜಕಾರಣಿಗಳಿಗೆ ಲಸಿಕೆ ನೀಡಲು ನಿರ್ದಿಷ್ಟ ಸಮಯ ನಿಗದಿಪಡಿಸಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮೊದಲ ಹಂತದ ಲಸಿಕೆ ಕಾರ್ಯ ಕ್ರಮವು ಆರೋಗ್ಯ ಕಾರ್ಯಕರ್ತರಿಗೆ ಮೀಸಲಾಗಿರುವ ಕಾರಣ ರಾಜಕಾರಣಿ ಗಳು ತಮಗೆ ಲಸಿಕೆ ನೀಡುವಂತೆ ಒತ್ತಾಯಿಸಬಾರದು ಎಂದು ಪ್ರಧಾನಿ ಅವರು ಮುಖ್ಯಮಂತ್ರಿಗಳ ಜೊತೆ ನಡೆಸಿದ ವಿಡಿಯೊ ಸಂವಾದದಲ್ಲಿ ಹೇಳಿದ್ದರು. ಕೆಲವು ತಿಂಗಳಲ್ಲಿ ದೇಶದ 30 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

ಕೋವಿನ್‌ ಬಗ್ಗೆ ಮಾಹಿತಿಯೇ ಇಲ್ಲ

-ಶೆಮಿನ್‌ ಜಾಯ್‌

ಕೋವಿನ್‌ ಅಥವಾ ಕೋವಿಡ್‌ ವ್ಯಾಕ್ಸಿನ್‌ ಇಂಟೆಲಿಜೆನ್ಸ್‌ ನೆಟ್‌ವರ್ಕ್‌, ಕೋವಿಡ್‌–19 ಲಸಿಕೆ ಅಭಿಯಾನದಲ್ಲಿ ಅತ್ಯಂತ ಮಹತ್ವದ ಪಾತ್ರ ಹೊಂದಿದೆ. ಆದರೆ, ಈ ಸಾಫ್ಟ್‌ವೇರ್‌ ಅನ್ನು ಅಭಿವೃದ್ಧಿಪಡಿಸಿದ್ದು ಯಾರು, ವೆಚ್ಚ ಎಷ್ಟಾಗಿದೆ ಎಂಬ ಬಗ್ಗೆ ಕೇಂದ್ರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಯಾವ ಮಾಹಿತಿಯೂ ಇಲ್ಲ. ಈ ಬಗ್ಗೆ, ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಗೆ ಸಚಿವಾಲಯವು ಹೀಗೆ ಉತ್ತರಿಸಿದೆ. 

ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದವರು ಯಾರು, ವೆಚ್ಚ ಎಷ್ಟು, ಸರ್ಕಾರ ಮತ್ತು ತಯಾರಿಸಿದ ಸಂಸ್ಥೆಯ ನಡುವೆ ನಡೆದ ಸಂವಹನ ಪ್ರತಿ ಕೊಡಿ ಎಂದು ಕಾನೂನು ವಿದ್ಯಾರ್ಥಿ ಅನಿಕೇತ್‌ ಗೌರವ್‌ ಅವರು ಕೇಳಿದ್ದರು. 

ಅಂತಹ ಯಾವುದೇ ಮಾಹಿತಿ ಇಲ್ಲ ಎಂದು ಇದೇ 19ರಂದು ಸಚಿವಾಲಯವು ಮಾಹಿತಿ ನೀಡಿದೆ. ಅನಿಕೇತ್‌ ಅವರು ಮೊದಲಿಗೆ ಈ ಅರ್ಜಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸಲ್ಲಿಸಿದ್ದರು. ಅಲ್ಲಿಂದ ಈ ಅರ್ಜಿಯನ್ನು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಕಳುಹಿಸಲಾಗಿದೆ. 

ಕೋವಿನ್‌ನಲ್ಲಿ ಹಲವು ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿವೆ. ಹಾಗಾಗಿ, ಹಲವು ಸ್ಥಳಗಳಲ್ಲಿ ಲಸಿಕೆ ನೀಡಿಕೆ ಪ್ರಕ್ರಿಯೆಯ ದಾಖಲಾತಿಯನ್ನು ಆಫ್‌ಲೈನ್‌ನಲ್ಲಿಯೇ ಇರಿಸಿಕೊಳ್ಳಲಾಗಿದೆ.

ಕೋವಿನ್‌ ಅನ್ನು ಬಲಪಡಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶ ಇದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌ ಅವರು ಕಳೆದ ಡಿಸೆಂಬರ್‌ನಲ್ಲಿ ಘೋಷಿಸಿದ್ದರು. ಇಬ್ಬರು ವಿಜೇತರಿಗೆ ₹40 ಮತ್ತು ₹20 ಲಕ್ಷ ಬಹುಮಾನ ನೀಡಲಾಗುವುದು ಎಂದೂ ಪ್ರಕಟಿಸಿದ್ದರು. 

ಕೋವಿಡ್‌ ಲಸಿಕೆ ಕಾರ್ಯನಿರ್ವಹಣೆ ಮಾರ್ಗಸೂಚಿ ಪ್ರಕಾರ, ಲಸಿಕೆ ಅಭಿಯಾನದಲ್ಲಿ ಕೋವಿನ್‌ ನಿರ್ಣಾಯಕ ಪಾತ್ರ ವಹಿಸುತ್ತದೆ. ಲಸಿಕೆ ಅಭಿಯಾನದ ನಿರ್ವಹಣೆ, ದಾಖಲೆ ನಿರ್ವಹಣೆ, ಮೌಲ್ಯಮಾಪನ ಎಲ್ಲವೂ ಕೋವಿನ್‌ ಮೂಲಕವೇ ನಡೆಯುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು