ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್ ಚುನಾವಣೆ: ಒಂದೆಡೆ ವಂಚನೆ, ಮತ್ತೊಂದೆಡೆ ಮತಯಾಚನೆ- ಸಚಿನ್ ಪೈಲಟ್

ಸೇನೆಯಲ್ಲಿ 1.22 ಲಕ್ಷ ಹುದ್ದೆ ಖಾಲಿ ಏಕೆ
Last Updated 28 ಜನವರಿ 2022, 19:32 IST
ಅಕ್ಷರ ಗಾತ್ರ

ಚಂಡೀಗಡ: ಸೈನಿಕರ ಹೆಸರಿನಲ್ಲಿ ಮತ ಕೇಳುತ್ತಿರುವ ಬಿಜೆಪಿ, ಸೈನಿಕರಿಗೆ ಅನ್ಯಾಯ ಮಾಡುತ್ತಿದೆ. ದೇಶದ ಭದ್ರತೆಯಲ್ಲಿ ರಾಜಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ಮುಖಂಡ ಸಚಿನ್ ಪೈಲಟ್ ಆರೋಪಿಸಿದ್ದಾರೆ.

ಇಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯದ ವೇಳೆ ಅವರು, ಸೈನಿಕರಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದ್ದಾರೆ. ‘ಶೌರ್ಯ ಕೆ ನಾಮ್‌ ಪರ್ ವೋಟ್‌, ಸೇನಾ ಕೆ ಹಿತೋ ಪರ್‌ ಚೋಟ್‌’ ಎಂಬ ಕಾಂಗ್ರೆಸ್‌ನ ಕಿರು ಹೊತ್ತಗೆಯನ್ನೂ ಅವರು ಬಿಡುಗಡೆ ಮಾಡಿದ್ದಾರೆ.

‘ಕೇಂದ್ರದ ಬಿಜೆಪಿ ಸರ್ಕಾರವು ಸೈನಿಕರ ಶ್ರೇಯೋಭಿವೃದ್ಧಿ ಬಗ್ಗೆ ಮಾತನಾಡುತ್ತದೆ. ಆದರೆ ಭಾರತೀಯ ಸೇನೆಯಲ್ಲಿ 1.22 ಲಕ್ಷ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 10,000 ಅಧಿಕಾರಿಗಳ ಹುದ್ದೆ ಖಾಲಿ ಇವೆ. ಕೇಂದ್ರ ಸರ್ಕಾರವು ದೇಶದ ಭದ್ರತೆಯಲ್ಲಿ ರಾಜಿಯಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಅಧಿಕಾರಕ್ಕೆ ಬರುವ ಮುನ್ನ ಒಂದು ಶ್ರೇಣಿ, ಒಂದು ಪಿಂಚಣಿ (ಒಆರ್‌ಒಪಿ) ಜಾರಿಗೆ ತರುತ್ತೇವೆ ಎಂದು ಬಿಜೆಪಿ ಹೇಳಿತ್ತು. ಎರಡು ಬಾರಿ ಅಧಿಕಾರಕ್ಕೆ ಬಂದರೂ ಒಆರ್‌ಒಪಿ ಸರಿಯಾಗಿ ಅನುಷ್ಠಾನಕ್ಕೆ ಬರಲಿಲ್ಲ. ಬಿಜೆಪಿ ಅಧಿಕಾರದ ಏಳೂ ವರ್ಷಗಳಲ್ಲಿ 30 ಲಕ್ಷ ನಿವೃತ್ತ ಸೈನಿಕರಿಗೆ ಏನೂ ದೊರೆತಿಲ್ಲ. ಅವರೆಲ್ಲರಿಗೆ ಬಿಜೆಪಿ ಮೋಸ ಮಾಡಿದೆ’ ಎಂದಿದ್ದಾರೆ.

‘ಸೇನಾ ಕ್ಯಾಂಟೀನ್‌ಗಳಲ್ಲಿ ಖರೀದಿಸುವ ವಸ್ತುಗಳಿಗೆ ಬಿಜೆಪಿ ಸರ್ಕಾರವು ಜಿಎಸ್‌ಟಿ ವಿಧಿಸುತ್ತಿದೆ. ಸೇನಾ ಸಿಬ್ಬಂದಿಯ ಅಂಗವಿಕಲ ಪಿಂಚಣಿ ಮತ್ತು ನಾಗರಿಕ ಸೇವಾ ಸಿಬ್ಬಂದಿಯ ಅಂಗವಿಕಲ ಪಿಂಚಣಿಯಲ್ಲೂ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದೆ. ಹೆಚ್ಚುವರಿ ಕಾರ್ಯದರ್ಶಿ ರ‍್ಯಾಂಕ್‌ನ ಹುದ್ದೆಗೆ ₹60,000 ಅಂಗವಿಕಲ ವೇತನ ನಿಗದಿ ಮಾಡಲಾಗಿದೆ. ಲೆಫ್ಟಿನೆಂಟ್ ಜನರಲ್ ಹುದ್ದೆಗೆ ₹27,000 ಅಂಗವಿಕಲ ವೇತನ ನಿಗದಿ ಮಾಡಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

***

ನಮಗೆ ನಮ್ಮ ಸೇನೆ ಕುರಿತು ಹೆಮ್ಮೆಯಿದೆ. ಯೋಧರ ವಿಷಯದಲ್ಲಿ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎಂದು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ

-ಸಚಿನ್‌ ಪೈಲಟ್‌, ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT