ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಡಿಗಳಲ್ಲಿ ರೈತರು–ಪೊಲೀಸರ ನಡುವೆ ಸಂಘರ್ಷದ ವಾತಾವರಣ.. ಇಲ್ಲಿವೆ ಪ್ರಮುಖಾಂಶ

Last Updated 29 ಜನವರಿ 2021, 2:28 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಾಜಧಾನಿ ಗಡಿಗಳಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದೆಹಲಿ–ಉತ್ತರ ಪ್ರದೇಶದ ಗಡಿ ಪ್ರದೇಶ ಗಾಜಿಪುರ್‌ನಲ್ಲಿ ಪೊಲೀಸರು ಮತ್ತು ರೈತರ ನಡುವೆ ಒಂದು ರೀತಿಯ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಸ್ಥಳ ಬಿಟ್ಟು ತೆರಳುವಂತೆ ನಿನ್ನೆ ಸ್ಥಳಿಯರು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಬಂದರೂ ರೈತರು ಮಾತ್ರ ಜಾಗ ಬಿಟ್ಟು ಕದಲಿಲ್ಲ. ಬೇಕಾದರೆ ಪೊಲೀಸರ ಗುಂಡೇಟು ತಿನ್ನುತ್ತೇವೆ. ಆದರೆ, ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಟಿಕ್ರಿ ಮತ್ತು ಸಿಂಘು ಗಡಿಗಳಲ್ಲೂ ಅಧಿಕ ಪ್ರಮಾಣದ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರೈತರು ಮುಂದೆ ತೆರಳದಂತೆ ಜೆಸಿಬಿ ಮೂಲಕ ಪೊಲೀಸರು ಗುಂಡಿ ತೋಡಿದ್ದಾರೆ.

ಈ ಬೆಳವಣಿಗೆಗಳ ಪ್ರಮುಖಾಂಶ

1. ರೈತರ ಹೋರಾಟ ಮುಂದುವರಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಗಾಜಿಪುರ ಗಡಿಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಎಪಿಎಫ್‌ನ ಮೂರು ತುಕಡಿಗಳು (ಕೇಂದ್ರ ಸಶಸ್ತ್ರ ಪೊಲೀಸ್ ಪಡೆ), ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಯ ಆರು ತುಕಡಿಗಳು ಮತ್ತು 1000 ಪೊಲೀಸ್ ಸಿಬ್ಬಂದಿಯನ್ನು ಗಡಿಯಲ್ಲಿ ನಿಯೋಜಿಸಲಾಗಿದೆ. "ಗಾಜಿಪುರ ಗಡಿಯಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ. ಆದರೂ ಸರ್ಕಾರವು ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಇದು ಉತ್ತರ ಪ್ರದೇಶ ಸರ್ಕಾರದ ಇನ್ನೊಂದು ಮುಖವಾಗಿದೆ" ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.

2. ರಸ್ತೆಗಳಲ್ಲಿ ಠಿಕಾಣಿ ಹೂಡುತ್ತಿರುವ ನೂರಾರು ರೈತರಿಗೆ ವಿದ್ಯುತ್ ಮತ್ತು ನೀರು ಸರಬರಾಜನ್ನು ಜಿಲ್ಲಾಡಳಿತ ಕಡಿತಗೊಳಿಸಿದೆ. ನವೆಂಬರ್ 26 ರಂದು ರೈತರು ತಮ್ಮ "ದೆಹಲಿ ಚಲೋ" ಪ್ರತಿಭಟನೆಯನ್ನು ಪ್ರಾರಂಭಿಸಿದಾಗಿನಿಂದ ಗಾಜಿಪುರ ಗಡಿಯನ್ನು ಮುಚ್ಚಲಾಗಿತ್ತು. ಆದರೆ, ಮಂಗಳವಾರ, ರೈತರು ಬ್ಯಾರಿಕೇಡ್‌ಗಳನ್ನು ಮುರಿದು ತಮ್ಮ ಟ್ರಾಕ್ಟರ್ ರ‍್ಯಾಲಿಯನ್ನು ನಡೆಸಿದ್ದರು.

3. ದೆಹಲಿ-ಹರಿಯಾಣ ಗಡಿಯಾದ ಸಿಂಘು ಪ್ರದೇಶದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದ್ದು, ಪ್ರತಿಭಟನೆ ಕೈಬಿಡದಿದ್ದರೆ ಕ್ರಮ ಜರುಗಿಸುವ ಸಾಧ್ಯತೆ ಇದೆ. ಭಾರಿ ಪೊಲೀಸ್ ಜಮಾವಣೆ ಹೊರತಾಗಿಯೂ ಪ್ರತಿಭಟನೆ ಮುಂದುವರೆದಿದೆ.

4. "ರೈತರ ಆಂದೋಲನವನ್ನು ಅಪಖ್ಯಾತಿಗೆ ಗುರಿ ಮಾಡುವ ಸರ್ಕಾರದ ಪ್ರಯತ್ನಗಳು ಮುಂದುವರೆದಿದೆ. ಎಲ್ಲಾ ಗಡಿಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡುತ್ತಿರುವುದು ಸರ್ಕಾರದ ಆತಂಕವನ್ನು ಸ್ಪಷ್ಟಪಡಿಸಿದೆ. ಈ ಚಳುವಳಿಯನ್ನು ಮತ್ತೆ ಮತ್ತೆ 'ಹಿಂಸಾತ್ಮಕ' ಎಂದು ತೋರಿಸಲು ಸರ್ಕಾರ ಬಯಸಿದೆ, ಆದರೆ, ನಮ್ಮ ಹೋರಾಟ ಶಾಂತಿಯುತವಾಗಿ ನಡೆಯುತ್ತದೆ ಎಂಬುದನ್ನು ಖಚಿತಪಡಿಸಲು ಸರ್ವಾನುಮತದ ವಿಧಾನವನ್ನು ಹೊಂದಿದ್ದೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

5. ಉತ್ತರ ಪ್ರದೇಶದ ಪ್ರತಿಭಟನಾ ಸ್ಥಳಗಳಿಂದ ರೈತರಿಗೆ ತೆರಳಲು ಸೂಚಿಸಲಾಗಿದೆ. ಬುಧವಾರ ರಾತ್ರಿ, ಬಾಗ್ಪತ್ ಜಿಲ್ಲಾಡಳಿತವು ಸ್ಥಳೀಯ ಪ್ರತಿಭಟನಾ ಸ್ಥಳವನ್ನು ತೆರವು ಮಾಡಿದೆ. "ಮಾನಸಿಕ ಅಸ್ವಸ್ಥರು, ಅನಾರೋಗ್ಯ ಪೀಡಿತರು, ವೃದ್ಧರನ್ನು ಅವರ ಮನೆಗಳಿಗೆ ಕಳುಹಿಸಲಾಗಿದೆ" ಎಂದು ಜಿಲ್ಲಾಡಳಿತ ತಿಳಿಸಿದೆ.

6. ನೆರೆಯ ಹರಿಯಾಣದ ಕರ್ನಾಲ್‌ನಲ್ಲಿ ಸುಮಾರು ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ 24 ಗಂಟೆಗಳಲ್ಲಿ ಜಾಗ ಬಿಟ್ಟು ತೆರಳುವಂತೆ ಸ್ಥಳೀಯರು ಗಡುವು ನೀಡಿದ್ದಾರೆ. ಈ ಮಧ್ಯೆ, ರೈತರು ಪ್ರತಿಭಟನೆ ನಡೆಸುತ್ತಿರುವ ಹೆದ್ದಾರಿ ಟೋಲ್ ಪ್ಲಾಜಾಗಳ ನಿಯಂತ್ರಣವನ್ನು ಪಡೆಯಲು ಹರಿಯಾಣ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

6. ಮಂಗಳವಾರ ಪ್ರತಿಭಟನಾಕಾರರಿಂದ ಹಿಂಸಾಚಾರ ಕಂಡಿದ್ದ ಕೆಂಪು ಕೋಟೆಯಲ್ಲಿ ಆಗಿರುವ ಹಾನಿಯನ್ನು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಪಟ್ಟಿ ಮಾಡಿದ್ದಾರೆ. "ಅತಿ ಹೆಚ್ಚು ಭದ್ರತಾ ಪ್ರದೇಶದಲ್ಲಿ ಅತಿದೊಡ್ಡ ನಷ್ಟವಾಗಿದೆ, ಪ್ರಧಾನ ಮಂತ್ರಿ ರಾಷ್ಟ್ರಧ್ವಜ ಹಾರಿಸುವ ಸ್ಥಳದಲ್ಲಿಕೆಲವು ರಚನೆಗಳು ಕಾಣೆಯಾಗಿದೆ " ಎಂದು ಹೇಳಿದ್ದಾರೆ.

7. ಗಣರಾಜ್ಯೋತ್ಸವದ ಹಿಂಸಾಚಾರವು ಅವರ ಹೋರಾಟಟವನ್ನು ಕೆಡಿಸುವ ಪಿತೂರಿಯ ಪರಿಣಾಮವಾಗಿದೆ ಎಂದು ರೈತರು ಹೇಳಿದ್ದಾರೆ. ನಮ್ಮ ಶಾಂತಿಯುತ ಪ್ರತಿಭಟನೆಯನ್ನು "ಮುರಿಯಲು" ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಕೆಂಪು ಕೋಟೆಯಲ್ಲಿ ನಡೆದ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಟಿಕಾಯತ್ ಒತ್ತಾಯಿಸಿದ್ದಾರೆ. ಮಂಗಳವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 25 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, 19 ಜನರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT