ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಎಕ್ಸ್‌ಪ್ರೆಸ್‌ ಎಂಜಿನ್‌ ಡಿಕ್ಕಿ: ಹಳಿತಪ್ಪಿದ ದಾದರ್-ಪುದುಚೇರಿ ರೈಲು  

Last Updated 16 ಏಪ್ರಿಲ್ 2022, 2:47 IST
ಅಕ್ಷರ ಗಾತ್ರ

ಮುಂಬೈ: ಗದಗ ಎಕ್ಸ್‌ಪ್ರೆಸ್‌ನ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ದಾದರ್-ಪುದುಚೇರಿ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಹಳಿತಪ್ಪಿವೆ. ಶುಕ್ರವಾರ ರಾತ್ರಿ ಮುಂಬೈನ ಮಾತುಂಗಾ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಕೇಂದ್ರ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾತ್ರಿ 9.45ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಇದುವರೆಗೆ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.

ಭಾರತದ ಪ್ರಯಾಣಿಕ ರೈಲು ಸೇವೆಗೆ 169 ವರ್ಷ ತುಂಬುವುದಕ್ಕೆ ಒಂದು ದಿನ ಬಾಕಿ ಇರುವಾಗಲೇ ಈ ಘಟನೆ ನಡೆದಿದೆ.1853ರಏಪ್ರಿಲ್ 16 ರಂದು ಮುಂಬೈ ಮತ್ತು ಥಾಣೆ ನಡುವೆ ದೇಶದಲ್ಲಿ ಮೊದಲ ಬಾರಿಗೆ ಪ್ರಯಾಣಿಕ ರೈಲು ಸೇವೆ ಆರಂಭವಾಗಿತ್ತು.

ದಾದರ್-ಪುದುಚೇರಿ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ಪ್ಲಾಟ್‌ಫಾರ್ಮ್ 7ರ ಮೂಲಕ ದಾದರ್‌ ನಿಲ್ದಾಣದ ಪ್ರವೇಶಿಸಿತ್ತು. ಅದೇ ಹೊತ್ತಿಗೆ ನಿಲ್ದಾಣದಿಂದ ತೆರಳುತ್ತಿದ್ದ ಗದಗ ಎಕ್ಸ್‌ಪ್ರೆಸ್ ರೈಲು, ಕ್ರಾಸಿಂಗ್‌ ಬಳಿ ಚಾಲುಕ್ಯ ಎಕ್ಸ್‌ಪ್ರೆಸ್‌ಗೆ ಹಿಂಬದಿಯಿಂದ ಗುದ್ದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗದಗ ಎಕ್ಸ್‌ಪ್ರೆಸ್‌ ರೈಲು ಚಾಲುಕ್ಯ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆಯುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರೈಲು ಡಿಕ್ಕಿ ಹೊಡೆಯುವಾಗ ಕೆಲವು ಪ್ರಯಾಣಿಕರು ಕೂಗಾಡುತ್ತಿರುವುದು ವಿಡಿಯೊದಲ್ಲಿದೆ.

‘ಪರಿಸ್ಥಿತಿ ಸರಿಪಡಿಸಲು ಕಾರ್ಯಾಚರಣೆ ನಡೆಯುತ್ತಿದೆ‘ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರ ಶಿವಾಜಿ ಸುತಾರ್ ತಿಳಿಸಿದ್ದಾರೆ. ಸುರಕ್ಷತೆಯ ಕಾರಣಗಳಿಗಾಗಿ ಸ್ಥಗಿತಗೊಳಿಸಲಾಗಿದ್ದ ರೈಲ್ವೆ ಮಾರ್ಗಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಶಿವಾಜಿ ಹೇಳಿದರು.

‘ಎರಡೂ ರೈಲುಗಳ ನಡುವೆ ಸಣ್ಣ ಮಟ್ಟದ ಡಿಕ್ಕಿ ಸಂಭವಿಸಿದೆ. ದಾದರ್‌–ಪುದುಚೇರಿ ನಡುವಿನ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳನ್ನು ಹಳಿಗೆ ತರಲಾಗುತ್ತಿದೆ’ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಆಯುಕ್ತ ಕ್ವೈಸರ್ ಖಾಲಿದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ತಿಂಗಳು ಕೇಂದ್ರ ರೈಲ್ವೆ ವಿಭಾಗದಲ್ಲಿ ನಡೆದ ಎರಡನೇ ದುರ್ಘಟನೆ ಇದಾಗಿದೆ. ಈ ಹಿಂದೆ, ಲೋಕಮಾನ್ಯ ತಿಲಕ್-ಜಯನಗರ ಎಕ್ಸ್‌ಪ್ರೆಸ್ (ಪವನ್ ಎಕ್ಸ್‌ಪ್ರೆಸ್) ಏಪ್ರಿಲ್ 3 ರಂದು ಮಹಾರಾಷ್ಟ್ರದ ನಾಸಿಕ್ ಬಳಿ ಹಳಿತಪ್ಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT