ನವದೆಹಲಿ: ವಿವೇಚನಾ ಕೋಟಾ ಅಡಿ ಸರ್ಕಾರಿ ನಿವೇಶನಗಳ ಹಂಚಿಕೆಯನ್ನು ರದ್ದುಗೊಳಿಸಬೇಕಾದ ಸಮಯ ಬಂದಿದೆ. ಈ ರೀತಿಯ ಹಂಚಿಕೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಕಾರಣವಾಗುತ್ತದೆ ಎಂದು ಸುಪ್ರೀಂಕೋರ್ಟ್ ಶನಿವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಬಿ.ವಿ.ನಾಗರತ್ನಾ ಅವರಿದ್ದ ನ್ಯಾಯಪೀಠ, ಒಡಿಶಾ ಸರ್ಕಾರ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘ವಿವೇಚನಾ ಕೋಟಾದಡಿ ನಿವೇಶನಗಳನ್ನು ಹಂಚುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದರೆ, ಈ ಮಾರ್ಗಸೂಚಿಗಳನ್ನು ಅನುಸರಿಸದಿರುವುದು ಇಲ್ಲವೇ ನಿರ್ದಿಷ್ಟ ಸನ್ನಿವೇಶಗಳಿಗೆ ಹೊಂದುವಂತೆ ಅವುಗಳನ್ನು ತಿರುಚಿರುವುದು ಕಂಡುಬಂದಿದೆ’ ಎಂದು ನ್ಯಾಯಪೀಠ ಹೇಳಿತು.
‘ವಿವೇಚನಾ ಕೋಟಾ ಪದ್ಧತಿಯನ್ನು ರದ್ದುಗೊಳಿಸುವುದು ಹಾಗೂ ಸರ್ಕಾರಿ ಸ್ವತ್ತುಗಳು/ನಿವೇಶನಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡುವುದೇ ಅತ್ಯುತ್ತಮ ಮಾರ್ಗವೆನಿಸುತ್ತದೆ. ಸರ್ಕಾರಿ ಸ್ವತ್ತುಗಳ ಹಂಚಿಕೆಗೆ ಸಾರ್ವಜನಿಕ ಹಿತಾಸಕ್ತಿಯೇ ಪ್ರಧಾನ ಮಾರ್ಗದರ್ಶಕ ತತ್ವವಾಗಿರಬೇಕು’ ಎಂದು ನ್ಯಾಯಪೀಠ ಪ್ರತಿಪಾದಿಸಿತು.
‘ಚುನಾಯಿತ ಸರ್ಕಾರವೊಂದು ತನ್ನ ವಿವೇಚನಾಧಿಕಾರ ಬಳಸಿಫಲಾನುಭವಿಗಳನ್ನು ಆಯ್ಕೆ ಮಾಡಿದಾಗಲೂ, ಅಂಥ ಆಯ್ಕೆ ವಸ್ತುನಿಷ್ಠವಾಗಿರಬೇಕು, ತರ್ಕಬದ್ಧ ಹಾಗೂ ಅರ್ಥವಾಗುವಂತೆಯೂ ಇರಬೇಕು’ ಎಂದು ನ್ಯಾಯಮೂರ್ತಿಗಳು ಹೇಳಿದರು.
ಭುವನೇಶ್ವರ ನಗರದಲ್ಲಿನ ಬೆಲೆಬಾಳುವ ಸರ್ಕಾರಿ ಜಾಗವನ್ನು ಮೂವರು ಅಧಿಕಾರಿಗಳು ತಮ್ಮ ಕುಟುಂಬಗಳ ಸದಸ್ಯರು ಹಾಗೂ ಸಂಬಂಧಿಗಳಿಗೆ ಅತಿ ಕಡಿಮೆ ಬೆಲೆಗೆ ನೀಡಿದ್ದರು. ಈ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವಂತೆ ಒಡಿಶಾ ಸರ್ಕಾರ ಅರ್ಜಿ ಸಲ್ಲಿಸಿತ್ತು.
ಅಲ್ಲದೇ, ಈ ಮೂವರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ವಿಚಾರಣೆ ನಡೆಸುವುದನ್ನು ರದ್ದುಗೊಳಿಸಿ ಒಡಿಶಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸಹ ನ್ಯಾಯಪೀಠ ವಜಾಗೊಳಿಸಿತು.
ಈ ಮೂವರು ಅಧಿಕಾರಿಗಳು ಕಾನೂನುಬಾಹಿರವಾಗಿ ಸರ್ಕಾರಿ ಜಾಗವನ್ನು ಹಂಚಿಕೆ ಮಾಡಿ, ಭುವನೇಶ್ವರ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟವುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.