ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರಾದಲ್ಲಿ ಟಿಎಂಸಿ ಯುವ ನಾಯಕಿ ಸಯಾನಿ ಘೋಷ್‌ ಬಂಧನ; ಕೊಲೆ ಯತ್ನ ಆರೋ‍ಪ

Last Updated 21 ನವೆಂಬರ್ 2021, 15:48 IST
ಅಕ್ಷರ ಗಾತ್ರ

ಅಗರ್ತಲಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ ಕಾರ್ಯದರ್ಶಿ ಸಯಾನಿ ಘೋಷ್‌ ಅವರನ್ನು ತ್ರಿಪುರಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸಭೆ ನಡೆಯುತ್ತಿರುವಾಗ ಮುಖ್ಯಮಂತ್ರಿ ವಿಪ್ಲವ್‌ ಕುಮಾರ್‌ ದೇವ್‌ ಅವರಿಗೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಐಪಿಸಿ ಸೆಕ್ಷನ್‌ 307 (ಕೊಲೆ ಯತ್ನ) ಮತ್ತು 153ಎ (ಗುಂಪುಗಳ ದ್ವೇಷ ಮೂಡಿಸುವುದು) ಅಡಿಯಲ್ಲಿ ಸಯಾನಿ ಘೋಷ್‌ ಅವರನ್ನು ಬಂಧಿಸಿರುವುದಾಗಿ ಪೊಲೀಸ್‌ ಅಧಿಕಾರಿ ರಮೇಶ್‌ ಯಾದವ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಭಾಗವಹಿಸಿದ್ದ ಸಭೆಗೆ ಸಯಾನಿ ಅವರ ಜೊತೆಗಿದ್ದ ಕೆಲವರು ಕಲ್ಲು ತೂರಿರುವುದಾಗಿ ರಮೇಶ್‌ ಯಾದವ್‌ ತಿಳಿಸಿದ್ದಾರೆ.

ಶನಿವಾರ ರಾತ್ರಿ ನಡೆಯುತ್ತಿದ್ದ ಸಭೆಯಲ್ಲಿ ಮುಖ್ಯಮಂತ್ರಿ ವಿಪ್ಲವ್‌ ದೇವ್‌ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ಸಭೆಗೆ ಬಂದ ಸಯಾನಿ ಘೋಷ್‌, 'ಖೇಲಾ ಹೋಬೆ' (ಆಟ ಶುರು) ಎಂದು ಘೋಷಣೆ ಕೂಗಿದರು ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಪೊಲೀಸ್‌ ದೂರಿನಲ್ಲಿ ತಿಳಿಸಿದ್ದಾರೆ.

ಈ ವರ್ಷ ಪಶ್ಚಿಮ ಬಂಗಾಳದಲ್ಲಿ ಮಾರ್ಚ್‌–ಏಪ್ರಿಲ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ವೇಳೆ ಟಿಎಂಸಿ 'ಖೇಲಾ ಹೋಬೆ' ಘೋಷ ವಾಕ್ಯವಾಗಿ ಬಳಸಿಕೊಂಡಿತ್ತು.

ಪೂರ್ವ ಅಗರ್ತಲಾದ ಮಹಿಳಾ ಪೊಲೀಸ್‌ ಠಾಣೆಯ ಹೊರಗೆ ಬಿಜೆಪಿ ಬೆಂಬಲಿಗರು ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವುದಾಗಿ ಟಿಎಂಸಿ ಮುಖಂಡರು ಆರೋಪಿಸಿದ್ದಾರೆ. 'ರಾಜಕೀಯ ಪಕ್ಷಗಳು ಶಾಂತಿಯುತವಾಗಿ ಕಾರ್ಯಕ್ರಮಗಳನ್ನು ನಡೆಸಲು ಸುಪ್ರೀಂ ಕೋರ್ಟ್‌ ಆದೇಶವಿದ್ದರೂ ಬಿಜೆಪಿ ಸರ್ಕಾರವು ಅದನ್ನು ಕಡೆಗಣಿಸುತ್ತಿದೆ' ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಟ್ವೀಟಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಟಿಎಂಸಿ ಬೆಂಬಲಿಗರ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದ ವಿಡಿಯೊ ಹಂಚಿಕೊಂಡಿರುವ ಅಭಿಷೇಕ್‌, 'ನಮ್ಮ ಬೆಂಬಲಿಗರ ಮೇಲೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರಕ್ಷಣೆ ನೀಡುವ ಬದಲು ಅವರ ಮೇಲೆ ದಾಳಿ ಮಾಡಲು ಗೂಂಡಾಗಳನ್ನು ಕಳುಹಿಸಿದ್ದಾರೆ' ಎಂದು ತ್ರಿಪುರಾ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಸಯಾನಿ ಘೋಷ್‌ ಅವರನ್ನು ಪ್ರಶ್ನಿಸುವ ಸಮಯದಲ್ಲಿ ಪೊಲೀಸ್‌ ಠಾಣೆಯ ಬಳಿ ಸೇರಿದ್ದ ಗುಂಪಿನ ಮೇಲೆ ಗುರುತು ಸಿಗದ ದುಷ್ಕರ್ಮಿಗಳು ದಾಳಿ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ತ್ರಿಪುರಾದ ಬಿಜೆಪಿ ವಕ್ತಾರ ನಬೆಂದು ಭಟ್ಟಾಚಾರ್ಯ ಅವರು ಟಿಎಂಸಿಯ ಆರೋಪಗಳನ್ನು ಅಲ್ಲಗೆಳದಿದ್ದಾರೆ.

ತ್ರಿಪುರಾ ವಿಧಾನಸಭೆಗೆ 2023ರಲ್ಲಿ ಚುನಾವಣೆ ನಡೆಯಲಿದ್ದು, ಟಿಎಂಸಿ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ತ್ರಿಪುರಾದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಟಿಎಂಸಿ ಸ್ಪರ್ಧಿಸುತ್ತಿದೆ. ನವೆಂಬರ್‌ 25ರಂದು ನಗರಸಭೆಗಳ ಚುನಾವಣೆ ನಡೆಯಲಿದೆ. ಒಟ್ಟು 334 ಸ್ಥಾನಗಳ ಪೈಕಿ ಬಿಜೆಪಿಯು ಅಗರ್ತಲಾ ಮುನ್ಸಿಪಲ್‌ ಕಾರ್ಪೊರೇಷನ್‌ ಸೇರಿದಂತೆ ಈಗಾಗಲೇ 112 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT