ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ‘ವೈಫಲ್ಯ’ ಹಾನಿ ತಡೆಗೆ ಬಿಜೆಪಿ ಕಸರತ್ತು

Last Updated 1 ಜೂನ್ 2021, 18:25 IST
ಅಕ್ಷರ ಗಾತ್ರ

ಲಖನೌ: ಕೋವಿಡ್ ನಿರ್ವಹಣೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಎಡವಿದೆ ಎಂಬ ವರದಿಗಳಿದ್ದು, ಇದರಿಂದ ಉಂಟಾಗಬಹುದಾದ ಸಂಭವನೀಯ ಹಾನಿ ತಡೆಗಟ್ಟುವ ಕುರಿತು ಬಿಜೆಪಿ ನಾಯಕರು ಮಂಗಳವಾರ ಇಲ್ಲಿ ಚಿಂತನ–ಮಂಥನ ನಡೆಸಿದರು.

ಎರಡು ದಿನಗಳ ಭೇಟಿಗೆ ಇಲ್ಲಿಗೆ ಬಂದಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಸರ್ಕಾರದ 10ಕ್ಕೂ ಹೆಚ್ಚು ಸಚಿವರು, ಪಕ್ಷದ ಹಿರಿಯ ಮುಖಂಡರ ಜತೆ ಸಭೆ ನಡೆಸಿದರು. ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ದಿನೇಶ್ ಶರ್ಮಾ ಜೊತೆಗೂ ಚರ್ಚೆ ನಡೆಸಿದರು. ಕೋವಿಡ್ ನಿರ್ವಹಣೆ ವಿಚಾರದ‌ಲ್ಲಿ ಪಕ್ಷಕ್ಕೆ ಆಗಬಹುದಾದ ಸಂಭವನೀಯ ಹಾನಿ ಕುರಿತು ಸಚಿವರು, ಮುಖಂಡರಿಂದ ಸಂತೋಷ್ ಅವರು ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.

ಸೋಲಿಗೆ ಕಾರಣ ಹುಡುಕಾಟ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಕಾಣಲು ಕಾರಣವಾದ ಅಂಶಗಳು ಹಾಗೂ ಜನರ ಚಿತ್ತ ಎತ್ತ ಇದೆ ಎಂಬುದನ್ನು ಪಕ್ಷದ ರಾಷ್ಟ್ರೀಯ ನಾಯಕತ್ವ ತಿಳಿಯಬಯಸಿದೆ ಎಂದು ಮೂಲಗಳು ಹೇಳಿವೆ.

‘ಕೋವಿಡ್ ನಿರ್ವಹಣೆ, ಪಂಚಾಯಿತಿ ಚುನಾವಣೆ ಫಲಿತಾಂಶ ಹಾಗೂ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಪಕ್ಷದ ಕೆಲವು ಶಾಸಕರ ವಿಚಾರಗಳು ಚರ್ಚೆಗೆ ಬಂದವು’ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.

ಜನರನ್ನು, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕೋವಿಡ್‌ನಿಂದ ತೊಂದರೆಗೆ ಒಳಗಾದವರನ್ನು ಸಂಪರ್ಕಿಸಿ ಅಗತ್ಯವಿರುವ ಸೌಲಭ್ಯಗಳನ್ನು ನೀಡಬೇಕು ಎಂದು ಸಂತೋಷ್ ಸೂಚಿಸಿದರು.

‘ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಹಳ ಸಮಯ ಉಳಿದಿಲ್ಲ. ಜನರನ್ನು ಸಂಪರ್ಕಿಸಿ, ಈ ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆಯನ್ನು ತುಂಬಬೇಕಿದೆ’ ಎಂದು ಮುಖಂಡರೊಬ್ಬರು ಹೇಳಿದ್ದಾರೆ.

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿ, ರಾಜ್ಯದ ಕೋವಿಡ್ ಪರಿಸ್ಥಿತಿ ನಿರ್ವಹಣೆ ಮತ್ತು ಸಂಘವು ಜನರಿಗೆ ನೀಡಿದ ಸಹಾಯದ ಬಗ್ಗೆ ಚರ್ಚಿಸಿದ್ದರು. ಸಂಘದ ಜೊತೆ ಗುರುತಿಸಿಕೊಂಡಿರುವ ವೈದ್ಯರ ಜೊತೆಗೂ ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT