ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರ, 300 ಪೊಲೀಸರಿಗೆ ಗಾಯ: 22 ಎಫ್ಐಆರ್

Last Updated 27 ಜನವರಿ 2021, 8:27 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಗಣರಾಜ್ಯೋತ್ಸವ ದಿನದಂದು ರೈತರ ‘ಟ್ರ್ಯಾಕ್ಟರ್ ರ‍್ಯಾಲಿ‘ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 22 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

‘ಈ ಘಟನೆಯಲ್ಲಿ 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿವರೆಗೂ 22 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ‘ ಎಂದು ದೆಹಲಿ ಪೊಲೀಸ್‌ನ ಹೆಚ್ಚುವರಿ ಪಿಆರ್‌ಒ ಅನಿಲ್ ಮಿತ್ತಲ್‌ ತಿಳಿಸಿದ್ದಾರೆ.

ಘಟನೆಯನ್ನು ಚಿತ್ರೀಕರಿಸಿರುವ ವಿವಿಧ ವಿಡಿಯೊ ತುಣುಕುಗಳು ಮತ್ತು ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಆಧರಿಸಿ ಮಂಗಳವಾರದ ಹಿಂಸಾಚಾರದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರದ ನಡೆದ ಹಿಂಸಾಚಾರದ ನಂತರ ಕೆಂಪುಕೋಟೆ ಸೇರಿದಂತೆ ದೆಹಲಿಯ ಪ್ರಮುಖ ಭಾಗಗಳು ಮತ್ತು ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಗಳಲ್ಲಿ ಅರೆ ಸೇನಾಪಡೆಯನ್ನು ನಿಯೋಜಿಸಲಾಗಿದೆ.

ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಮಂಗಳವಾರ ನಡೆಸಿದ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ರೈತರ ಒಂದು ಗುಂಪು ನಗರದ ಬೀದಿಗಳಲ್ಲಿ ದಾಂದಲೆ ನಡೆಸಿತ್ತು. ಬ್ಯಾರಿಕೇಡ್‌ ಗಳನ್ನು ಕಿತ್ತು ಒಗೆದು ಪೊಲೀಸರ ಮೇಲೂ ಹಲ್ಲೆ ಮಾಡಿತ್ತು. ಕೆಂಪುಕೋಟೆ ಆವರಣಕ್ಕೆ ನುಗ್ಗಿದ ನೂರಾರು ಪ್ರತಿಭಟನಕಾರರು ಐತಿಹಾಸಿಕ ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಿದ್ದರು.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ 32ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ಕಿಸಾನ್‌ ಟ್ರ್ಯಾಕ್ಟರ್‌ ರ‍್ಯಾಲಿ ಆಯೋಜಿಸಿತ್ತು. ಇದಕ್ಕೂ ಮುನ್ನ, ಸಂಯುಕ್ತ ಕಿಸಾನ್ ಮೋರ್ಚಾ ಒಕ್ಕೂಟದವರು, ಪೊಲೀಸರೊಂದಿಗೆ ರ್‍ಯಾಲಿಯ ರೂಪುರೇಷೆ ಕುರಿತು ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದರು.

ಈ ಸಭೆಗಳಲ್ಲಿ ಪೊಲೀಸರು ನಿಗದಿಪಡಿಸಿದ ಸಮಯ ಹಾಗೂ ನಿಗದಿತ ದಾರಿಯಲ್ಲಿ ಶಾಂತಿಯುತವಾಗಿ ರ‍್ಯಾಲಿ ನಡೆಸುವುದಾಗಿ ಒಕ್ಕೂಟದವರು ಪೊಲೀಸರಿಗೆ ತಿಳಿಸಿದ್ದರು.

ಮಂಗಳವಾರ ಬೆಳಿಗ್ಗೆ 8.30 ಸುಮಾರಿಗೆ 6 ಸಾವಿರದಿಂದ 7 ಸಾವಿರ ಟ್ರ್ಯಾಕ್ಟರ್‌ಗಳೊಂದಿಗೆ ದೆಹಲಿಯ ಸಿಂಘು ಗಡಿಯಲ್ಲಿ ಜಮಾಯಿಸಿದ ರೈತರು ರ‍್ಯಾಲಿಗೆ ಸಿದ್ಧರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಪ್ರತಿಭಟನಕಾರರು ನಿಗದಿಪಡಿಸಿದ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ದೆಹಲಿಯ ಪ್ರವೇಶಕ್ಕೆ ಮುಂದಾದರು. ಪೊಲೀಸರು ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದರೂ ಅದು ವಿಫಲವಾಯಿತು.ಕೈಯಲ್ಲಿ ಕತ್ತಿ ಹಿಡಿದು, ಟ್ರ್ಯಾಕ್ಟರ್‌, ಕುದುರೆಗಳನ್ನು ಏರಿ ದೆಹಲಿ ಪ್ರವೇಶಿಸಿದ ಪ್ರತಿಭಟನಕಾರರನ್ನು ಪೊಲೀಸರು ತಡೆಯಲು ಯತ್ನಿಸಿದರು. ಈ ಸಂದರ್ಭದಲ್ಲಿ ಸಂಘರ್ಷ ಉಂಟಯಿತು.

ಪೂರ್ವ ನಿರ್ಧಾರಿತ ಮಾರ್ಗದಲ್ಲಿ ಹೋಗುವ ಬದಲು, ಅವರು ಮಧ್ಯ ದೆಹಲಿಯ ಕಡೆಗೆ ಹೋಗಬೇಕೆಂದು ಒತ್ತಾಯಿಸಿದರು. ಪೊಲೀಸರು ಎಷ್ಟೇ ಮನವಿ ಮಾಡಿದರೂ ಪ್ರತಿಭಟನಕಾರರು ನಿಹಾಂಗ್‌ (ಸಿಖ್‌ ಧರ್ಮದ ಹೋರಾಟಗಾರರು) ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿಸಿದರು. ಕುದುರೆಗಳನ್ನು ಏರಿ, ಕೈಯಲ್ಲಿ ಕತ್ತಿ, ಕಿರ್ಪನ್ ಮತ್ತು ಫರ್ಸಾಗಳನ್ನು ಹಿಡಿದುಕೊಂಡು ಮುಕರ್ಬಾ ಚೌಕ್ ಮತ್ತು ಸಂಜಯ್‌ಗಾಂಧಿ ಸಾರಿಗೆ ನಗರದಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಭೇದಿಸಿ ದೆಹಲಿಯತ್ತ ನುಗ್ಗಿದರು. ಗಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿವೆ.

ಐತಿಹಾಸಿಕ ಕೆಂಪುಕೋಟೆಯತ್ತ ನುಗ್ಗಿದ ಪ್ರತಿಭಟನಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿ, ಕೋಟೆಯಲ್ಲಿ ಅನ್ಯ ಧ್ವಜನವನ್ನು ಹಾರಿಸಿದರು. ಈ ವೇಳೆ ಇಡೀ ಕೆಂಪುಕೋಟೆ ಆವರಣ ಪ್ರಕ್ಷ್ಯುಬ್ಧವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT