ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್‌ ರ್‍ಯಾಲಿ| ಕೆಂಪುಕೋಟೆಗೆ ರೈತರ ಲಗ್ಗೆ: ಹಿಂಸೆಗೆ ತಿರುಗಿದ ಹೋರಾಟ

ಹಿಂಸೆಗೆ ತಿರುಗಿದ ‘ರೈತ ಗಣರಾಜ್ಯೋತ್ಸವ’ l ಎರಡು ತಿಂಗಳ ಸಂಯಮದ ಬಳಿಕ ಸಂಘರ್ಷ
Last Updated 26 ಜನವರಿ 2021, 19:47 IST
ಅಕ್ಷರ ಗಾತ್ರ

ನವದೆಹಲಿ: ಬೆತ್ತ ಮತ್ತು ಬಡಿಗೆಗಳನ್ನು ತಿರುಗಿಸುತ್ತಾ, ಕೈಯಲ್ಲಿ ತ್ರಿವರ್ಣಧ್ವಜ ಮತ್ತು ತಮ್ಮ ಸಂಘಟನೆಗಳ ಧ್ವಜಗಳನ್ನು ಹಿಡಿದ ಸಾವಿರಾರು ರೈತರು, ಪೊಲೀಸರು ಇರಿಸಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಟ್ರ್ಯಾಕ್ಟರ್‌ಗಳಲ್ಲಿ ದೆಹಲಿಯೊಳಗೆ ಮಂಗಳವಾರ ನುಗ್ಗಿದರು. ವಿವಿಧ ಭಾಗಗಳಿಂದ ನಗರಕ್ಕೆ ಲಗ್ಗೆ ಇಟ್ಟ ಅವರು ಪೊಲೀಸರ ಜತೆಗೆ ಸಂಘರ್ಷಕ್ಕೆ ಇಳಿದರು. ಗಣರಾಜ್ಯೋತ್ಸವ ದಿನದಂದು ಐತಿಹಾಸಿಕ ಕೆಂಪುಕೋಟೆಗೆ ಮುತ್ತಿಗೆ ಹಾಕಿ, ಅಲ್ಲಿ ಧ್ವಜಾರೋಹಣವನ್ನೂ ಮಾಡಿದರು.

ಸ್ವಾತಂತ್ರ್ಯೋತ್ಸವ ದಿನದ ಸಮಾರಂಭಗಳ ಕೇಂದ್ರ ಬಿಂದುವಾದ ಕೆಂಪುಕೋಟೆಯಲ್ಲಿ ಯುವಕನೊಬ್ಬ ಹಳದಿ ಬಣ್ಣದ ತ್ರಿಕೋನಾಕೃತಿಯ ಧ್ವಜಾರೋಹಣ ನಡೆಸಿದ್ದಾನೆ. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಪ್ರತಿಭಟನಕಾರರನ್ನು ಕೆಂಪುಕೋಟೆಯಿಂದ ಪೊಲೀಸರು ತೆರವು ಮಾಡಿದರು.

ಗಣರಾಜ್ಯೋತ್ಸವ ದಿನ ರಾಜಪಥ ದಲ್ಲಿ ನಡೆಯುವ ಸೇನಾ ಬಲ ಪ್ರದರ್ಶನದ ಆಕರ್ಷಣೆಯನ್ನು ರೈತರ ಪ್ರತಿಭಟನೆಯು ಮಸುಕುಗೊಳಿಸಿತು. ಗಣರಾಜ್ಯೋತ್ಸವ ಸಮಾರಂಭವು ಪೂರ್ಣಗೊಂಡ ಬಳಿಕ ನಿಗದಿತ ಮಾರ್ಗಗಳಲ್ಲಿಯೇ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಬೇಕು ಎಂಬ ಷರತ್ತನ್ನು ರೈತರು ಉಲ್ಲಂಘಿಸಿದರು. ಯುವ ಪ್ರತಿಭಟನಕಾರರು ಆಕ್ರಮಣಕಾರಿಯಾಗಿ ವರ್ತಿಸಿದರು ಮತ್ತು ಹಲವೆಡೆ ಪೊಲೀಸರ ಜತೆಗೆ ಸಂಘರ್ಷಕ್ಕೆ ಇಳಿದರು. ಹಲವು ಸ್ಥಳಗಳಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.

ಉದ್ರಿಕ್ತರಾಗಿದ್ದ ಜನರನ್ನು ಚದುರಿ ಸಲು ಪೊಲೀಸರು ಅಶ್ರುವಾಯು ಶೆಲ್‌ ಸಿಡಿಸಿದರು. ಆದರೆ, ಐಟಿಒದಲ್ಲಿ (ಇನ್‌ಕಮ್‌ ಟ್ಯಾಕ್ಸ್‌ ಆಫೀಸ್‌ ವೃತ್ತ) ನೂರಾರು ರೈತರು ಬೆತ್ತಗಳನ್ನು ಬೀಸಿ ಪೊಲೀಸರನ್ನು ಓಡಿಸಿದರು.

ಪೊಲೀಸರತ್ತ ಟ್ರ್ಯಾಕ್ಟರ್‌ಗಳನ್ನು ನುಗ್ಗಿಸಿದರು. ಐಟಿಒ ಪ್ರದೇಶವು ರಣರಂಗವಾಗಿ ಪರಿವರ್ತನೆಯಾಗಿತ್ತು. ಪ್ರತಿಭಟನಕಾರರು ವಾಹನಗಳನ್ನು ನಜ್ಜುಗುಜ್ಜಾಗಿಸಿದರು. ಬಳಸಿದ ಅಶ್ರುವಾಯು ಸೆಲ್‌ ಕವಚಗಳು, ಇಟ್ಟಿಗೆ, ಕಲ್ಲುಗಳು ಬೀದಿಯಲ್ಲೆಲ್ಲ ಚೆಲ್ಲಾಡಿದ್ದವು. ಎರಡು ತಿಂಗಳು ಅತ್ಯಂತ ಶಾಂತಿಯುತವಾಗಿ ನಡೆದ ಪ್ರತಿಭಟನೆಯು, ಆ ಹೆಗ್ಗಳಿಕೆಯನ್ನು ಕಳೆದುಕೊಂಡಿತು ಎಂಬುದಕ್ಕೆ ಈ ದೃಶ್ಯವು ಸಾಕ್ಷಿಯಾಯಿತು.ಇಂಡಿಯಾ ಗೇಟ್‌ನಿಂದ ಎರಡೇ ಕಿಲೊಮೀಟರ್‌ ದೂರದಲ್ಲಿ ಐಟಿಒ ಇದೆ.

ಸಂಘರ್ಷದಲ್ಲಿ ರೈತರೊಬ್ಬರು ಮೃತಪಟ್ಟಿದ್ದಾರೆ.ಪೊಲೀಸರ ಗುಂಡೇಟಿನಿಂದ ರೈತ ಸತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. ಆದರೆ, ಪೊಲೀಸರು ಅದನ್ನು ಅಲ್ಲಗಳೆದಿದ್ದಾರೆ. ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್‌ ಮಗುಚಿದ ಸಿ.ಸಿ.ಟಿ.ವಿ ದೃಶ್ಯಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಭದ್ರತಾ ಸಿಬ್ಬಂದಿ ಸೇರಿ ಹಲವರು ಗಾಯಗೊಂಡಿದ್ದಾರೆ.

ಐಟಿಒ ಪ್ರದೇಶದಿಂದ ಪ್ರತಿಭಟನಕಾರರನ್ನು ಪೊಲೀಸರು ಹೊರದಬ್ಬಿದರು. ಅಲ್ಲಿಂದ ಹೊರಟ ಕೆಲವು ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನು ನೇರವಾಗಿ ಕೆಂಪುಕೋಟೆಯತ್ತ ಚಲಾಯಿಸಿದರು. ಪ್ರತಿಭಟನಕಾರರ ಸಂಖ್ಯೆ ಹೆಚ್ಚು ಇದ್ದುದರಿಂದ ಕೆಲವೆಡೆ ಭದ್ರತಾ ಸಿಬ್ಬಂದಿ ಅಸಹಾಯಕರಾಗಿ ನೋಡುತ್ತಾ ನಿಂತಿದ್ದ ದೃಶ್ಯ ಕಂಡು ಬಂತು.

ಮುಸ್ಸಂಜೆಯ ವರೆಗೂ ಕೆಲವು ರೈತರು ದೆಹಲಿಯ ಬೀದಿಗಳಲ್ಲಿ ಠಳಾಯಿಸುತ್ತಿದ್ದರು. ಅಲ್ಲಲ್ಲಿ ಹಿಂಸಾಚಾರದ ವರದಿಗಳೂ ಬಂದಿವೆ. ಹೆಚ್ಚಿನ ರೈತರು ತಮ್ಮ ಪ್ರತಿಭಟನೆ ಸ್ಥಳಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಗಳಿಗೆ ಮರಳಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಎರಡು ತಿಂಗಳಿಂದ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಯ ಭಾಗವಾಗಿ ಟ್ರ್ಯಾಕ್ಟರ್‌ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.

ಅಂತರ ಕಾಯ್ದುಕೊಂಡ ಕಿಸಾನ್‌ ಮೋರ್ಚಾ

ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್‌ ಮೋರ್ಚಾವು ಟ್ರ್ಯಾಕ್ಟರ್‌ ರ್‍ಯಾಲಿಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಿಂದ ಅಂತರ ಕಾಯ್ದುಕೊಂಡಿದೆ.

ಶಾಂತಿಯುತವಾಗಿ ನಡೆಯುತ್ತಿದ್ದ ಚಳವಳಿಗೆ ನುಸುಳಿರುವ ‘ಸಮಾಜಘಾತುಕ ಶಕ್ತಿಗಳು’ ಹಿಂಸೆಗೆ ಕಾರಣವಾಗಿವೆ ಎಂದು ಆರೋಪಿಸಿದೆ.

ಹಿಂಸಾಚಾರವನ್ನು ಮೋರ್ಚಾ ಖಂಡಿಸಿದೆ. ಇದು ‘ಅನಪೇಕ್ಷಿತ’ ಮತ್ತು ‘ಸ್ವೀಕಾರಾರ್ಹವಲ್ಲದ’ ನಡವಳಿಕೆ ಎಂದಿದೆ.

‘ನಮ್ಮೆಲ್ಲ ಪ್ರಯತ್ನಗಳನ್ನು ಮೀರಿ ಕೆಲವು ಸಂಘಟನೆಗಳು ಮತ್ತು ವ್ಯಕ್ತಿಗಳು ಟ್ರ್ಯಾಕ್ಟರ್‌ ರ್‍ಯಾಲಿಯ ನಿಗದಿತ ಮಾರ್ಗವನ್ನು ಬಿಟ್ಟು ಬೇರೆಡೆಗೆ ಹೋಗಿದ್ದಾರೆ. ಖಂಡನಾರ್ಹ ಕೃತ್ಯ ಎಸಗಿದ್ದಾರೆ. ಶಾಂತಿಯನ್ನು ಕಾಯ್ದುಕೊಳ್ಳುವುದೇ ನಮ್ಮ ಅತ್ಯಂತ ದೊಡ್ಡ ಶಕ್ತಿ ಎಂದು ನಾವು ಭಾವಿಸಿದ್ದೇವೆ. ಹಿಂಸಾ
ಚಾರವು ಚಳವಳಿಗೆ ಹಿನ್ನಡೆ ಉಂಟು ಮಾಡುತ್ತದೆ’ ಎಂದು 41 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ.

ಕೆಲವು ವಿಷಾದನೀಯ ಘಟನೆಗಳನ್ನು ಬಿಟ್ಟರೆ ನಮ್ಮ ರ್‍ಯಾಲಿಯು ಶಾಂತಿಯುತವಾಗಿ, ಯೋಜನೆಯಂತೆ ನಡೆದಿದೆ. ವಿವಿಧ ಭಾಗಗಳಲ್ಲಿ ನಡೆದ ರ್‍ಯಾಲಿಯಲ್ಲಿ ಏನೇನು ಆಗಿದೆ ಎಂಬ ಬಗ್ಗೆ ಪೂರ್ಣ ವಿವರಗಳನ್ನು ಸಂಗ್ರಹಿಸಿ, ಹೇಳಿಕೆ ನೀಡಲಾಗುವುದು ಎಂದು ಮೋರ್ಚಾ ತಿಳಿಸಿದೆ.

ಹೂವಿನ ಪಕಳೆ ಮತ್ತು ಲಾಠಿ

ಕೆಲವು ಕಡೆಗಳಲ್ಲಿ ರೈತರ ರ್‍ಯಾಲಿಯನ್ನು ಹೂವಿನ ಪಕಳೆಗಳನ್ನು ಎಸೆದು ಸ್ವಾಗತಿಸಲಾಯಿತು. ಆದರೆ, ‘ನಿಹಂಗ್’ಗಳು (ಸಾಂಪ್ರದಾಯಿಕ ಸಿಖ್ ಯೋಧರು) ಭದ್ರತಾ ಸಿಬ್ಬಂದಿ ಯ ಜತೆಗೆ ಸಂಘರ್ಷಕ್ಕೆ ಇಳಿದ ಬಳಿಕ ಪರಿಸ್ಥಿತಿ ಬದಲಾ ಯಿತು. ಚಿಂತಾಮಣಿ ಚೌಕದಲ್ಲಿ ಲಾಠಿ ಪ್ರಹಾರ ನಡೆಸಲಾ ಯಿತು. ಪಶ್ಚಿಮ ದೆಹಲಿಯ ನಂಗ್ಲಾಯ್‌ ಮತ್ತು ಮುಕರಬ ಚೌಕದಲ್ಲಿ ಪೊಲೀಸರು ಅಶ್ರುವಾಯು ಷೆಲ್‌ ಸಿಡಿಸಿದರು.

ನಿಯಮ ಉಲ್ಲಂಘನೆ: 12 ಗಂಟೆಗೆ ಮೊದಲು ಟ್ರ್ಯಾಕ್ಟರ್‌ ರ್‍ಯಾಲಿ ನಡೆಸುವಂತಿಲ್ಲ ಎಂಬುದು ಪೊಲೀಸರು ವಿಧಿಸಿದ ಪ್ರಮುಖ ಷರತ್ತಾಗಿತ್ತು. ಆದರೆ, ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೇ ಸಾವಿರಾರು ರೈತರು ಕಾಲ್ನಡಿಗೆಯಲ್ಲಿಯೇ ದೆಹಲಿ ಪ್ರವೇಶಿಸಿದ್ದರು.

ರಾಜ್ಯದಲ್ಲೂ ಅನ್ನದಾತರ ಆಕ್ರೋಶ

ಬೆಂಗಳೂರು: ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ರೈತರು ಮಂಗಳವಾರ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದರು. ದಲಿತ, ಕಾರ್ಮಿಕ, ಸಿಖ್, ವಿದ್ಯಾರ್ಥಿ ಹಾಗೂ ಮಹಿಳಾ ಸಂಘಟನೆಗಳು ಪ್ರತಿಭಟನೆಗೆ ಕೈಜೋಡಿಸಿದವು.

ಬೆಳಿಗ್ಗೆ 8 ಗಂಟೆಯಿಂದಲೇ ರಾಜಧಾನಿಯತ್ತ ಅನ್ನದಾತರು ಹೆಜ್ಜೆ ಹಾಕಿದರು. ರೈತರು ಬಂದಿದ್ದ ಎಲ್ಲ ಟ್ರ್ಯಾಕ್ಟರ್‌ಗಳೂ ನಗರ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಸುಮಾರು 120 ಟ್ರ್ಯಾಕ್ಟರ್‌ಗಳನ್ನು ಮಾತ್ರ ಒಳಗೆ ಬಿಡಲಾಯಿತು. ಸುಮಾರು 1,500ಕ್ಕೂ ಹೆಚ್ಚು ವಿವಿಧ ವಾಹನಗಳಲ್ಲಿ ಬಂದ ಪ್ರತಿಭಟನ
ಕಾರರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾಯಿಸಿದರು. ಸಂಜೆ 5ರವರೆಗೂ ಪ್ರತಿಭಟನೆ ನಡೆಯಿತು. ರಾಜಧಾನಿಯಲ್ಲಿ ಶಾಂತಿಯುತವಾಗಿಯೇ ಅನ್ನದಾತರು ಹೋರಾಟ ನಡೆಸಿದರು.

ಆಯಾ ಮುಖ್ಯರಸ್ತೆಗಳಲ್ಲಿಯೇ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ಆದ್ದರಿಂದ ಏಕಕಾಲಕ್ಕೆ ಎಲ್ಲ ರೈತರು ಒಂದೆಡೆ ಸೇರಲು ಸಾಧ್ಯವಾಗಲಿಲ್ಲ. ಕಲಬುರ್ಗಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ 300 ಟ್ರ್ಯಾಕ್ಟರ್‌ಗಳಲ್ಲಿ ಜನತಾ ಪೆರೇಡ್‌ ನಡೆಯಿತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT