ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರಾ: ಬಿಜೆಪಿ, ಟಿಎಂಸಿ ಜಟಾಪಟಿ ತಾರಕಕ್ಕೆ

‘ಖೇಲಾ ಹೋಬೆ’ ಘೋಷಣೆ ಕೂಗಿದ್ದಕ್ಕೆ ಟಿಎಂಸಿ ನಾಯಕಿ ವಿರುದ್ಧ ಕೊಲೆ ಯತ್ನ ಪ್ರಕರಣ
Last Updated 22 ನವೆಂಬರ್ 2021, 19:45 IST
ಅಕ್ಷರ ಗಾತ್ರ

ಅಗರ್ತಲಾ: ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಟಿಎಂಸಿ ನಡುವಣ ಜಟಾಪಟಿ ತಾರಕಕ್ಕೆ ಏರಿದೆ. ತ್ರಿಪುರಾದಲ್ಲಿ ಪ್ರಚಾರಕ್ಕೆ ತೆರಳಿದ್ದ ಟಿಎಂಸಿ ಯುವ ಘಟಕದ ಅಧ್ಯಕ್ಷೆ ಸಯಾನಿ ಘೋಷ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಟಿಎಂಸಿ, ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

ಇದೇ 25ಕ್ಕೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದೆ. ಅಕ್ಟೋಬರ್ 22ರಿಂದ ಚುನಾವಣಾ ಕಾರ್ಯಗಳು ನಡೆಯುತ್ತಿವೆ. 334 ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಎದುರಾಳಿಗಳು ಇಲ್ಲದ ಕಾರಣ 112 ಸ್ಥಾನಗಳಲ್ಲಿ ಬಿಜೆಪಿ ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಪ್ರಚಾರದ ವೇಳೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಹಲವು ಬಾರಿ ಘರ್ಷಣೆ ನಡೆದಿದೆ.

ಮುಖ್ಯಮಂತ್ರಿ ವಿಪ್ಲವ್ ದೇವ್ ಅವರ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಸಮೀಪ ಸಯಾನಿ ಘೋಷ್ ಮತ್ತು ಟಿಎಂಸಿಯ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಇದಕ್ಕಾಗಿ ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

‘ಅಗರ್ತಲಾದಲ್ಲಿ ಮುಖ್ಯಮಂತ್ರಿ ವಿಪ್ಲವ್‌ ದೇವ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಯುತ್ತಿದ್ದ ಪ್ರದೇಶದಲ್ಲಿ ಸಯಾನಿ ಘೋಷ್‌ ಹಿಂಸಾಚಾರವನ್ನು ಪ್ರಚೋದಿಸಿದರು. ‘ಖೇಲಾ ಹೋಬೆ’ ಎಂದು ಘೋಷಣೆ ಕೂಗಿದ್ದಾರೆ. ಎರಡು ಗುಂಪುಗಳ ಮಧ್ಯೆ ಘರ್ಷಣೆ ಸೃಷ್ಟಿಸಲು ಯತ್ನಿಸಿದರು ಮತ್ತು ಕೊಲೆ ಮಾಡಲು ಯತ್ನಿಸಿದರು’ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಇಲ್ಲಿನ ಸಾದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಯಾನಿ ಅವರನ್ನು ವಿಚಾರಣೆಗೆ ಎಂದು ಕರೆಸಿಕೊಂಡ ಪೊಲೀಸರು, ಭಾನುವಾರ ತಡರಾತ್ರಿ ಬಂಧಿಸಿ
ದ್ದಾರೆ. ಈ ವೇಳೆ ಟಿಎಂಸಿ ಕಾರ್ಯಕರ್ತರು ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸಯಾನಿ ಅವರನ್ನುಸೋಮವಾರ ಬೆಳಿಗ್ಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

‘ನಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ರಮಗಳಿಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ‍ಪಡಿಸುತ್ತಿದ್ದಾರೆ’ ಎಂದು ಟಿಎಂಸಿ ನಾಯಕಿ ಸುಶ್ಮಿತಾ ದೇವ್ ಆರೋಪಿಸಿದ್ದಾರೆ.

ವಿಚಾರಣೆ ಇಂದು

ತ್ರಿಪುರಾದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಎಲ್ಲಾ ಪಕ್ಷಗಳಿಗೆ ಮುಕ್ತ ಅವಕಾಶವಿರುವಂತೆ ಸುಪ್ರೀಂ ಕೋರ್ಟ್‌ ನವೆಂಬರ್ 11ರಂದು ನೀಡಿದ್ದ ಸೂಚನೆಯನ್ನು ಸರ್ಕಾರ ಕಡೆಗಣಿಸಿದೆ. ತ್ರಿಪುರಾ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿ ಎಂದು ಟಿಎಂಸಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಿದೆ.

ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ. ಟಿಎಂಸಿಯ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಮಂಗಳವಾರ ವಿಚಾರಣೆ ನಡೆಯಲಿದೆ.

ಪ್ರಧಾನಿ ಜೊತೆ ಚರ್ಚೆ: ಮಮತಾ

ಸೋಮವಾರ ಸಂಜೆ ದೆಹಲಿಗೆ ಬಂದಿಳಿದಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ತ್ರಿಪುರಾ ಹಿಂಸಾಚಾರದ ಬಗ್ಗೆ ಚರ್ಚಿಸಲಿದ್ದಾರೆ. ‘ತ್ರಿಪುರಾ ಹಿಂಸಾಚಾರವೂ ಸೇರಿದಂತೆ ರಾಜ್ಯಕ್ಕೆ ಸಂಬಂಧಪಟ್ಟ ಕೆಲವು ವಿಚಾರಗಳ ಬಗ್ಗೆ ಪ್ರಧಾನಿ ಜೊತೆ ಚರ್ಚಿಸುತ್ತೇನೆ’ ಎಂದು ಮಮತಾ ಹೇಳಿದ್ದಾರೆ.

ವಿಪ್ಲವ್ ದೇವ್ ಅವರ ನೇತೃತ್ವದ ತ್ರಿಪುರಾ ಸರ್ಕಾರವು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಧಿಕ್ಕರಿಸುತ್ತಿದ್ದು, ಜನಸಾಮಾನ್ಯರಿಗೆ ಉತ್ತರಿಸಬೇಕು ಎಂದು ಮಮತಾ ಆಗ್ರಹಿಸಿದ್ದಾರೆ.

‘ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಕನಿಷ್ಠ ಚಿಕಿತ್ಸೆಯನ್ನೂ ಅಲ್ಲಿನ ಬಿಜೆಪಿ ಸರ್ಕಾರ ನೀಡುತ್ತಿಲ್ಲ. ಕೋಲ್ಕತ್ತಕ್ಕೆ ಚಿಕಿತ್ಸೆಗಾಗಿ ಎಷ್ಟು ಜನರನ್ನು ಕರೆತರಲಿ. ಎಡಪಂಥೀಯ ಸಂಘಟನೆಗಳು ಹಾಗೂ ಮಾನವ ಹಕ್ಕು ಸಂಘಟನೆಗಳು ಎಲ್ಲಿ ಹೋದವು’ ಎಂದು ಮಮತಾ ಪ್ರಶ್ನಿಸಿದ್ದಾರೆ. ತ್ರಿಪುರಾದಲ್ಲಿ ಚುನಾವಣಾ ಪ್ರಕ್ರಿಯೆಯ ಅಣಕ ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, ರಾಜಕೀಯ ಪಕ್ಷಗಳಿಗೆ ಸಭೆ ನಡೆಸಲು ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದಾದರೆ, ಚುನಾವಣೆಗಳ ಗತಿಯೇನು ಎಂದು ಪ್ರಶ್ನಿಸಿದ್ದಾರೆ.

ಬಿಎಸ್‌ಎಫ್ ಕಾರ್ಯವ್ಯಾಪ್ತಿ ವಿಸ್ತರಣೆಯನ್ನೂ ಅವರು ಪ್ರಶ್ನಿಸಿದ್ದಾರೆ. ‘ಕಾನೂನು ಸುವ್ಯವಸ್ಥೆಯು ರಾಜ್ಯಕ್ಕೆ ಸಂಬಂಧಪಟ್ಟ ವಿಚಾರ. ಕೇಂದ್ರೀಯ ಪಡೆಗಳು ರಾಜ್ಯದ ಪ್ರದೇಶಗಳನ್ನು ಒತ್ತಾಯದಿಂದ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ. ತನ್ನ ಅನುಕೂಲಕ್ಕಾಗಿ ಅರೆಸೇನಾಪಡೆಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.


ಶಾ ಭೇಟಿ ಮಾಡಿದ ಟಿಎಂಸಿ ನಿಯೋಗ

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿ ಮಾಡಿದ ಟಿಎಂಸಿ ನಿಯೋಗವು ತ್ರಿಪುರಾ ಹಿಂಸಾಚಾರ ವಿಷಯವನ್ನು ಪ್ರಸ್ತಾಪಿಸಿತು.

‘ಸಂಸದರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ, ಮುಖಂಡರನ್ನು ಹೇಗೆ ಬಂಧಿಸಲಾಗುತ್ತಿದೆ ಎಂಬುದರ ಬಗ್ಗೆ ಶಾ ಅವರಿಗೆ ವಿವರವಾದ ಮಾಹಿತಿ ನೀಡಿದ್ದೇವೆ. ಈ ಸಂಬಂಧ, ತ್ರಿಪುರಾ ಮುಖ್ಯಮಂತ್ರಿ ಜೊತೆ ಗೃಹಸಚಿವರು ಭಾನುವಾರ ಮಾತನಾಡಿದ್ದು, ವರದಿ ನೀಡುವಂತೆ ರಾಜ್ಯಕ್ಕೆ ಸೂಚಿಸುವ ಭರವಸೆ ನೀಡಿದ್ದಾರೆ’ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ತಿಳಿಸಿದ್ದಾರೆ. ಸುಖೇಂದು ಶೇಖರ್ ರಾಯ್, ಶಂತನು ಸೇನ್, ಕಲ್ಯಾಣ್ ಬ್ಯಾನರ್ಜಿ, ಡೆರೆಕ್ ಒಬ್ರಿಯಾನ್, ಮಾಲಾ ರಾಯ್ ಹಾಗೂ ಇತರ 11 ಸಂಸದರು ನಿಯೋಗದಲ್ಲಿ ಇದ್ದರು.

ಟಿಎಂಸಿ ನಿಯೋಗಕ್ಕೆ ಶಾ ಭೇಟಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಗೃಹಸಚಿವಾಲಯದ ಎದುರು ಸೋಮವಾರ ಬೆಳಿಗ್ಗೆ ಧರಣಿ ನಡೆಸಿದ ನಿಯೋಗದ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಧ್ಯಾಹ್ನದ ವೇಳೆಗೆ ಶಾ ಅವರ ಭೇಟಿಗೆ ನಿಯೋಗಕ್ಕೆ ಅವಕಾಶ ಮಾಡಿಕೊಡಲಾಯಿತು.

ಟಿಎಂಸಿ ನಿಯೋಗವನ್ನು ಭೇಟಿ ಮಾಡಲು ಅವಕಾಶ ನೀಡದ ಗೃಹಸಚಿವ ಅಮಿತ್ ಶಾ ವಿರುದ್ಧ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ. ‘ಭೇಟಿಗೆ ಅವಕಾಶ ನೀಡುವಂತೆ ಆಗ್ರಹಿಸಿ ನಿಯೋಗದ ಸದಸ್ಯರು ಪ್ರತಿಭಟನೆ ನಡೆಸಿದರೂ ಕೇಳುವವರಿಲ್ಲ‘ ಎಂದು ಅವರು ದೂರಿದ್ದಾರೆ.

****

ತ್ರಿಪುರಾದಲ್ಲಿ ಟಿಎಂಸಿ ಕಾರ್ಯಕರ್ತರಿಗೆ ಬಿಜೆಪಿ ಏನು ಮಾಡುತ್ತಿದೆಯೋ, ಬಂಗಾಳದಲ್ಲಿ ಅದನ್ನೇ ಮಾಡುವಂತೆ ನಮ್ಮ ಕಾರ್ಯಕರ್ತರಿಗೆ ಹೇಳಬೇಕಿದೆ ಕುನಾಲ್ ಘೋಷ್

-ಟಿಎಂಸಿ ಪಶ್ಚಿಮ ಬಂಗಾಳ ಘಟಕದ ಕಾರ್ಯದರ್ಶಿ

****

ಟಿಂಎಸಿಗೆ ತ್ರಿಪುರಾದಲ್ಲಿ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದು ಸಾಧ್ಯವಾಗಲಿಲ್ಲ. ಆ ಹತಾಶೆಯಿಂದ ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ

- ತ್ರಿಪುರಾ ರಾಜ್ಯ ಬಿಜೆಪಿ ಘಟಕ

****

ತ್ರಿಪುರಾ ಸರ್ಕಾರ ಕ್ರೌರ್ಯ ಮೆರೆಯುತ್ತಿದೆ. ಅಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಹಲವರ ಹತ್ಯೆಯಾಗಿದೆ. ಗೂಂಡಾಗಳು ಪೊಲೀಸ್ ಠಾಣೆಗಳಲ್ಲಿ ಆಶ್ರಯ ಪಡೆದಿದ್ದಾರೆ ಮಮತಾ ಬ್ಯಾನರ್ಜಿ,

-ಟಿಎಂಸಿ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT