ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ವಿಷಯ; ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಸರಿಯಲ್ಲ: ಭಾರತ

ವಿಶ್ವಸಂಸ್ಥೆಯಲ್ಲಿ ಟರ್ಕಿ ಅಧ್ಯಕ್ಷರ ಮಾತಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ
Last Updated 23 ಸೆಪ್ಟೆಂಬರ್ 2020, 7:01 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವುದು ‘ಸ್ವೀಕಾರ್ಹ ಕ್ರಮವಲ್ಲ’ ಎಂದಿರುವಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, ‘ನಮ್ಮ ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಾದ ಕ್ರಮವಲ್ಲ’ ಎಂದು ಹೇಳಿದೆ.

ವಿಶ್ವಸಂಸ್ಥೆಯ 75ನೇ ಸಾಮಾನ್ಯ ಅಧಿವೇಶನದಲ್ಲಿ ಪೂರ್ವ ಮುದ್ರಿತ ಭಾಷಣದಲ್ಲಿ ಟರ್ಕಿ ಅಧ್ಯಕ್ಷರು, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ವಿಚಾರವನ್ನು ಪ್ರಸ್ತಾಪಿಸಿ,‘ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿದ ಮೇಲೂ ಅಲ್ಲಿ ಸಮಸ್ಯೆಗಳು ಮುಂದುವರಿದಿವೆ. ಇದು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವಲ್ಲಿ ಪ್ರಮುಖ ಸಮಸ್ಯೆಯಾಗಿದೆ’ ಎಂದು ಉಲ್ಲೇಖಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ವಿಶ್ವಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ, ‘ಟರ್ಕಿ ಅಧ್ಯಕ್ಷರ ಮಾತುಗಳನ್ನು ಗಮನಿಸಿದ್ದೇವೆ. ಭಾರತದ ಆಂತರಿಕ ವ್ಯವಹಾರದೊಳಗೆ ಹಸ್ತಕ್ಷೇಪ ಮಾಡುವಂತಹ ಮಾತುಗಳನ್ನಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಟರ್ಕಿ ಅಧ್ಯಕ್ಷರು ಬೇರೆ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವುದನ್ನು ಕಲಿಯಬೇಕು. ತಮ್ಮ ನೀತಿಗಳನ್ನು ಪ್ರತಿಬಿಂಬಿಸಲು ಇನ್ನಷ್ಟು ಆಳವಾದ ಅಧ್ಯಯನ ಮಾಡಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

‘ವಿಶ್ವಸಂಸ್ಥೆ ರೂಪಿಸಿರುವ ಚೌಕಟ್ಟಿನೊಳಗೆ, ಕಾಶ್ಮೀರ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಮಾತುಕತೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂಬುದನ್ನು ನಾವು ಬೆಂಬಲಿಸುತ್ತೇವೆ’ ಎಂದೂ ಟರ್ಕಿ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಹೇಳಿದ್ದರು. ಕಳೆದ ವರ್ಷವೂ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಇದೇ ರೀತಿ ಪಾಕಿಸ್ತಾನ ಪರವಾಗಿ ಅವರು ಮಾತನಾಡಿದ್ದರು.

ಕಾಶ್ಮೀರದ ವಿಚಾರದಲ್ಲಿ ಯಾವುದೇ ರಾಷ್ಟ್ರಗಳ ಹಸ್ತಕ್ಷೇಪವನ್ನು ಭಾರತ ಸಹಿಸುವುದಿಲ್ಲ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಬಾಕಿ ಇರುವ ಎಲ್ಲ ವಿಷಯಗಳನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸಿಕೊಳ್ಳಬೇಕು ಎಂಬ ತನ್ನ ನಿಲುವನ್ನು ಭಾರತ ಸಮರ್ಥಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT