ಶುಕ್ರವಾರ, ಆಗಸ್ಟ್ 6, 2021
21 °C

ಅಮೆರಿಕದ ಕಾನೂನು ಉಲ್ಲಂಘನೆ ಆರೋಪ: ರವಿ ಶಂಕರ್‌ ಪ್ರಸಾದ್‌ಗೆ ಟ್ವಿಟರ್‌ ನಿರ್ಬಂಧ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

DH Photo

ನವದೆಹಲಿ: ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ ಪ್ರಸಾದ್‌ ಅವರ ಟ್ವಿಟರ್‌ ಖಾತೆಯು ಶುಕ್ರವಾರ ಸುಮಾರು ಒಂದು ಗಂಟೆ ಸ್ಥಗಿತಗೊಂಡಿತ್ತು. ಅಮೆರಿಕದ ಐಟಿ ಕಾನೂನು ಉಲ್ಲಂಘನೆಯ ಆರೋಪದಡಿ ಸುಮಾರು ಒಂದು ಗಂಟೆ ಕಾಲ ನಿರ್ಬಂಧ ಹೇರಿತ್ತು ಎಂದು ಸಚಿವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಟಿವಿಯ ಚರ್ಚಾ ಕಾರ್ಯಕ್ರಮವೊಂದರ ವಿಡಿಯೊವನ್ನು ರವಿ ಶಂಕರ್‌ ಪ್ರಸಾದ್ ಪೋಸ್ಟ್‌ ಮಾಡಿದ್ದರು. ಇದು ಅಮೆರಿಕದ ಐಟಿ ಕಾನೂನಿನ ಡಿಜಿಟಲ್‌ ಮಿಲೇನಿಯಮ್‌ ಕಾಪಿರೈಟ್‌ ಆ್ಯಕ್ಟ್‌ ಉಲ್ಲಂಘನೆಯಾಗಿದೆ ಎಂದು ಟ್ವಿಟರ್‌ ತಿಳಿಸಿದ್ದಾಗಿ ರವಿ ಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಟ್ವಿಟರ್‌ ಖಾತೆಯು ಪುನಃ ಸಕ್ರಿಯಗೊಂಡ ಬಳಿಕ ಸರಣಿ ಟ್ವೀಟ್‌ ಮಾಡಿರುವ ರವಿ ಶಂಕರ್‌ ಪ್ರಸಾದ್‌, ಟ್ವಿಟರ್‌ ಕ್ರಮವನ್ನು ಟೀಕಿಸಿದ್ದಾರೆ.

ಐಟಿ ಕಾನೂನಿನ ಪ್ರಕಾರ ನನ್ನ ಟ್ವಿಟರ್‌ ಖಾತೆಯನ್ನು ಸ್ಥಗಿತಗೊಳಿಸುವ ಮುಂಚೆ ಮಾಹಿತಿ ನೀಡಬೇಕಿತ್ತು. ಟ್ವಿಟರ್‌ ಅದನ್ನು ಮಾಡಿಲ್ಲ. ನನ್ನ ಸಂದರ್ಶನದಲ್ಲಿ ಟ್ವಿಟರ್‌ನ ಅನಿಯಂತ್ರಿತ ಕ್ರಮಗಳ ಬಗ್ಗೆ ಮತ್ತು ಉನ್ನತ ತಂಡದ ನಿರ್ವಹಣೆಯ ಬಗ್ಗೆ ಹೇಳಿಕೆಗಳನ್ನು ನೀಡಿದ್ದೆ. ಅದರಲ್ಲಿ ಪ್ರಬಲ ಸಂದೇಶವಿತ್ತು. ಪರಿಣಾಮಕಾರಿಯಾಗಿತ್ತು. ಅದರ ಮೇಲೆ ನಿರ್ಬಂಧ ಹೇರಲು ಟ್ವಿಟರ್‌ ಪ್ರಯತ್ನಿಸಿರುವುದು ಇದರಿಂದ ಸಾಬೀತಾಗಿದೆ ಎಂದಿದ್ದಾರೆ.

ಭಾರತದ ನೂತನ ಐಟಿ ಕಾನೂನು ಟ್ವಿಟರ್‌ಗೆ ತನ್ನ ಅಜೆಂಡಾ ಸ್ಥಾಪಿಸಲು ತೊಡಕಾಗಿದೆ. ಅದಕ್ಕಾಗಿಯೇ ಕಾನೂನು ಅನುಸರಿಸಲು ಟ್ವಿಟರ್‌ ಹಿಂದೇಟು ಹಾಕುತ್ತಿದೆ. ಟ್ವಿಟರ್‌ ಕ್ರಮವು ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ತನ್ನ ಅಜೆಂಡಾಗೆ ಸರಿ ಹೊಂದದ ಹೇಳಿಕೆಗಳನ್ನು ಟ್ವಿಟರ್‌ ತೆಗೆದು ಹಾಕುತ್ತಿದೆ. ಯಾವ ಸಾಮಾಜಿಕ ತಾಣಗಳು ಏನು ಮಾಡಿದರು ಚಿಂತೆಯಿಲ್ಲ. ಆದರೆ ಎಲ್ಲವೂ ಭಾರತದ ಹೊಸ ಐಟಿ ಕಾನೂನುಗಳನ್ನು ಅನುಸರಿಸಲೇಬೇಕು. ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು