ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಧನಸ್ಸು ಕಳ್ಳನಿಗೆ ತಕ್ಕ ಪಾಠ ಕಲಿಸಿ -ಉದ್ಧವ್‌ ವಾಗ್ದಾಳಿ

ಚುನಾವಣಾ ಆಯೋಗ, ಪ್ರಧಾನಿ ಮೋದಿ ವಿರುದ್ಧವೂ ಉದ್ಧವ್‌ ವಾಗ್ದಾಳಿ
Last Updated 18 ಫೆಬ್ರವರಿ 2023, 14:03 IST
ಅಕ್ಷರ ಗಾತ್ರ

ಮುಂಬೈ: ಚುನಾವಣಾ ಆಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ‘ಶಿವಸೇನಾ’ ಹೆಸರು ಹಾಗೂ ಬಿಲ್ಲು ಮತ್ತು ಬಾಣವನ್ನೊಳಗೊಂಡ ಚಿಹ್ನೆಯನ್ನು ಮಂಜೂರು ಮಾಡಿದ್ದು, ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಿಂದೆ ಮತ್ತು ಬಿಜೆಪಿಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕೆಂದು ಶನಿವಾರ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬಾಂದ್ರಾದ ತಮ್ಮ ನಿವಾಸ ‘ಮಾತೋಶ್ರೀ’ಯ ಹೊರಗೆ ಶನಿವಾರ ನಡೆದ ಬೃಹತ್ ಶಕ್ತಿ ಪ್ರದರ್ಶನದಲ್ಲಿ ಮಾತನಾಡಿದ ಉದ್ಧವ್, ‘ಶಿವರಾತ್ರಿಯ ಸಂದರ್ಭದಲ್ಲೇ ಶಿವಧನಸ್ಸು ಕಳ್ಳತನವಾಗಿದೆ. ಕಳ್ಳ ಸಿಕ್ಕಿ ಬೀಳುತ್ತಾನೆ. ಚುನಾವಣೆಗೆ ಹೋಗಿ ಶಿವಧನಸ್ಸನ್ನು ಮರಳಿ ತನ್ನಿ. ನಿಮ್ಮೆಲ್ಲರಿಗೂ ಆ ಕಳ್ಳ ಯಾರೆಂದು ತಿಳಿದಿದೆ. ಅಂತೆಯೇ ಆ ಕಳ್ಳನ ಮಾಲೀಕನೂ ಗೊತ್ತು. ಅವರಿಗೆ ತಕ್ಕ ಪಾಠ ಕಲಿಸಿ’ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಅವನು ಜೇನುಗೂಡಿನ ಮೇಲೆ ಕಲ್ಲೆಸೆದಿದ್ದಾನೆ. ಆದರೆ, ಜೇನ್ನೊಣಗಳ ಕಡಿತವನ್ನು ಅವನು ಅನುಭವಿಸಿಲ್ಲ. ಬಾಳಾ ಸಾಹೇಬ್ ಅವರ ಶಿವಸೇನಾವನ್ನು ಎಂದಿಗೂ ಮುಗಿಸಲು ಸಾಧ್ಯವಿಲ್ಲ’ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಉದ್ಧವ್ ವಾಗ್ದಾಳಿ ನಡೆಸಿದರು. ‘ಅವರು (ಚುನಾವಣಾ ಆಯೋಗ) ಗುಲಾಮನಂತೆ ವರ್ತಿಸಿದ್ದಾರೆ. ಪ್ರಧಾನಿ ಅವರ ಗುಲಾಮನಂತೆ ಮಾಡಿದ್ದಾರೆ. ಇಂದು ಮೋದಿ ತಮ್ಮ ಹೆಸರಿನಲ್ಲಿ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ಅವರು ಬಾಳಾ ಸಾಹೇಬರ ಮುಖವಾಡವನ್ನೇ ತೆಗೆದುಕೊಳ್ಳಬೇಕು. ಅವರಿಗೆ ಠಾಕ್ರೆ ಹೆಸರು, ಬಾಳಾ ಸಾಹೇಬರ ಫೋಟೊ, ಚಿಹ್ನೆಯೂ ಬೇಕು. ಆದರೆ, ಶಿವಸೇನಾ ಕುಟುಂಬವಲ್ಲ’ ಎಂದೂ ಹೇಳಿದರು.

‘ಅವರು (ಶಿಂದೆ) ಬಿಲ್ಲು ಮತ್ತು ಬಾಣದ ಚಿಹ್ನೆಯನ್ನೇ ಹೇಗೆ ಕದ್ದಿದ್ದಾರೆ. ನಾನು ಫೇಸ್‌ಬುಕ್ ಲೈವ್ ಮಾಡಿ, ಚುನಾವಣಾ ಆಯೋಗ ಏನು ಕೇಳಿದೆ, ನಾವು ಏನು ಒದಗಿಸಿದ್ದೇವೆ ಎಂಬುದನ್ನು ನಿಮಗೆ ಹೇಳುತ್ತೇನೆ. ಈ ಹಿಂದೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಎಐಎಡಿಎಂಕೆಯಲ್ಲೂ ಇದೇ ರೀತಿಯ ವಿವಾದಗಳಿದ್ದವು. ಆದರೆ, ಒಡೆದುಹೋದ ಬಣಕ್ಕೆ ಎಂದಿಗೂ ಮೂಲ ಪಕ್ಷದ ಹೆಸರು ಅಥವಾ ಚಿಹ್ನೆಯನ್ನು ನೀಡಲಾಗಿಲ್ಲ’ ಎಂದ ಉದ್ಧವ್, ‘‌ಚುನಾವಣೆಯಲ್ಲಿ ಕಳ್ಳನಿಗೆ ತಕ್ಕ ಪಾಠ ಕಲಿಸುವವರೆಗೆ ನಾವು ವಿರಮಿಸಬಾರದು. ಕೂಡಲೇ ಚುನಾವಣೆಗೆ ಸಿದ್ಧತೆ ಆರಂಭಿಸಿ’ ಎಂದು ಕರೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT