ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಸಂಕಟ| ಕಾನೂನು ಸಮರಕ್ಕೆ ಉದ್ಧವ್ ಸಿದ್ಧ

ಎಂವಿಎ ಸರ್ಕಾರಕ್ಕೆ ಬಹುಮತ ಇದೆ ಎಂದು ಪುನರುಚ್ಚರಿಸಿದ ಅಜಿತ್: ರಂಗಕ್ಕಿಳಿದ ಶರದ್‌ ಪವಾರ್‌
Last Updated 24 ಜೂನ್ 2022, 20:15 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರವು ತನಗೆ ಬಹುಮತ ಇದೆ ಎಂದು ಶುಕ್ರವಾರ ಪುನರುಚ್ಚರಿಸಿದೆ. ಉದ್ಧವ್ ವಿರುದ್ಧ ಬಂಡಾಯ ಎದ್ದಿರುವ ಪ್ರಭಾವಿ ಮುಖಂಡ ಏಕನಾಥ ಶಿಂಧೆ ಅವರು ‘ನಿಜವಾದ ಶಿವಸೇನಾ ನಮ್ಮದು’ ಎಂದಿದ್ದಾರೆ. ಹಾಗಾಗಿ, ಕಾನೂನು ಹೋರಾಟಕ್ಕೆ ಮುಂದಾಗಲು ಉದ್ಧವ್ ನೇತೃತ್ವದ ಪಕ್ಷವು ನಿರ್ಧರಿಸಿದೆ. ಇದರಿಂದಾಗಿ, ಬಿಜೆಪಿ ಆತುರದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ, ಕಾಯ್ದು ನೋಡುವ ತಂತ್ರ ಅನುಸರಿಸಬಹುದು ಎನ್ನಲಾಗಿದೆ.

ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ತಂಗಿರುವ ಶಿಂಧೆ ಮತ್ತು ಇತರ ಶಾಸಕರು ದಣಿಯುವಂತೆ ಮಾಡುವುದು ಉದ್ಧವ್ ನೇತೃತ್ವದ ಶಿವಸೇನಾದ ಉದ್ದೇಶ. ಅವರಲ್ಲಿ ಉದ್ವಿಗ್ನತೆ ಉಂಟಾಗಿ, ಅವರು ಮಹಾರಾಷ್ಟ್ರಕ್ಕೆಹಿಂದಿರುಗುವಂತೆ ಮಾಡುವುದು ಸೇನಾದ ತಂತ್ರ ಎನ್ನಲಾಗಿದೆ.

ಪಕ್ಷದಲ್ಲಿ ಉಂಟಾದ ಬಂಡಾಯದಿಂದ ಉದ್ಧವ್ ಕಂಗೆಟ್ಟಿದ್ದಾರೆ. ಹಾಗಾಗಿ, ಎಂವಿಎಯ ರೂವಾರಿ ಶರದ್‌ ಪವಾರ್‌ ಅವರೇ ರಂಗಕ್ಕೆ ಇಳಿದಿದ್ದಾರೆ. ಅವರು ಹಲವು ಜನರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ಮತ್ತು ಉಪ ಸ್ಪೀಕರ್‌ ನರಹರಿ ಝರ್ವಾರಿ ಅವರು ಯಾವ ಕ್ರಮಕೈಗೊಳ್ಳುತ್ತಾರೆ ಎಂಬುದರ ಮೇಲೆ ಮುಂದಿನದೆಲ್ಲವೂ ಅವಲಂಬಿತವಾಗಿದೆ.

‘ಅವರು (ಬಂಡಾಯ ಗುಂಪು) ತಮ್ಮದೇ ನಿಜವಾದ ಶಿವಸೇನಾ ಎಂದು ಹೇಳುತ್ತಿದ್ದಾರೆ... ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗೂಡಿ ಎಂವಿಎ ಮೈತ್ರಿಕೂಟ ರಚಿಸಲಾಗಿದೆ. ಎಂವಿಎಗೆ ಬಹುಮತ ಇದೆ’ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

‘ಬಂಡಾಯ ಗುಂಪಿಗೆ ಬೆಂಬಲ ಇದೆ ಎಂಬುದು ಈವರೆಗೆ ಕಾಗದದಲ್ಲಿ ಮಾತ್ರ ಇದೆ. ಅವರು ಮುಂಬೈಗೆ ಬಂದೇ ಇಲ್ಲ. ಅವರು ಬಂದ ಬಳಿಕ ಸಂಖ್ಯೆಗಳು ಬದಲಾಗಲಿವೆ’ ಎಂದು ಶಿವಸೇನಾದ ಮುಖ್ಯ ವಕ್ತಾರ ಸಂಜಯ ರಾವುತ್‌ ಹೇಳಿದ್ದಾರೆ.

‘ಅಲ್ಲಿಗೆ ಹೋದವರು ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ನಾವು ಅವರ ವಿರುದ್ಧ ಸದನದಲ್ಲಿ ಮತ್ತು ಬೀದಿ
ಯಲ್ಲಿ ಹೋರಾಡಲಿದ್ದೇವೆ’ ಎಂದೂ ಹೇಳಿದ್ದಾರೆ. ‘ಇದು ರಾಜಕೀಯ ಹೋರಾಟವಷ್ಟೇ ಅಲ್ಲ, ಕಾನೂನು ಹೋರಾಟವೂ ಹೌದು’ ಎಂದು ಸೇನಾದ ಸಂಸದ ಅರವಿಂದ ಸಾವಂತ್ ಹೇಳಿದ್ದಾರೆ.

ಉದ್ಧವ್‌ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ಇದೆ ಎಂದು ಕಾಂಗ್ರೆಸ್ ಹೇಳಿದೆ. ಎಂವಿಎ ಸರ್ಕಾರ ಉಳಿಸಿಕೊಳ್ಳುವವರೆಗೆ ಹೋರಾಟ ನಿಲ್ಲದು ಎಂದಿದೆ.

ಅಡ್ವೊಕೇಟ್ ಜನರಲ್‌ ಅಶುತೋಷ್‌ ಕುಂಭಕೋಣಿ ಅವರು ವಿಧಾನಭವನಕ್ಕೆ ಭೇಟಿ ಕೊಟ್ಟಿದ್ದಾರೆ. ಅಮಾನತಿಗೆ ಸಂಬಂಧಿಸಿ ಸಲಹೆ ನೀಡುವುದಕ್ಕಾಗಿ ಬಂಡಾಯ ಶಾಸಕರ ಕಡೆಯಿಂದ ಬಂದಿರುವ ಪತ್ರಗಳನ್ನು ಪರಿಶೀಲಿಸಿದ್ದಾರೆ.

ಪದಾಧಿಕಾರಿಗಳ ಜತೆ ಮಾತು:ಉದ್ಧವ್ ಠಾಕ್ರೆ ಅವರು ಶಿವಸೇನಾದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ್ದಾರೆ. ಶಿವಸೇನಾ ಮತ್ತು ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರದ ಉಳಿವಿನ ಕುರಿತಂತೆ ಇರುವ ಅನುಮಾನಗಳನ್ನು ತಳ್ಳಿ ಹಾಕಿದ್ದಾರೆ.

‘ನಾನು ಮುಖ್ಯಮಂತ್ರಿಯ ಅಧಿಕೃತ ನಿವಾಸವನ್ನು ಮಾತ್ರ ತೆರವು ಮಾಡಿದ್ದೇನೆ. ಆದರೆ, ನನ್ನ ದೃಢನಿಶ್ಚಯ ಹಾಗೆಯೇಇದೆ’ ಎಂದು ಶಿವಸೇನಾದ ಜಿಲ್ಲಾ ಘಟಕಗಳ ಮುಖ್ಯಸ್ಥರು ಮತ್ತು ಸಂಪರ್ಕ ಪ್ರಮುಖರ ಸಭೆಯನ್ನು ಉದ್ದೇಶಿಸಿ ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷ ಜತೆಗಿಲ್ಲ: ಏಕನಾಥ ಶಿಂಧೆ

‘ಯಾವುದೇ ರಾಷ್ಟ್ರೀಯ ಪಕ್ಷವು ನಮ್ಮೊಂದಿಗೆ ಸಂಪ‍ರ್ಕದಲ್ಲಿ ಇಲ್ಲ. ದೊಡ್ಡ ಶಕ್ತಿ ನಮ್ಮ ಬೆಂಬಲಕ್ಕೆ ಇದೆ ಎಂದು ನಾನು ಹೇಳಿದ್ದು ಬಾಳಾಸಾಹೇಬ್‌ ಠಾಕ್ರೆ ಮತ್ತು ಆನಂದ್ ದಿಘೆ ಅವರನ್ನು ಉದ್ದೇಶಿಸಿ’ ಎಂದು ಶಿವಸೇನಾದ ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಶುಕ್ರವಾರ ಹೇಳಿದ್ದಾರೆ. ಶಿವಸೇನಾದ ಬಂಡಾಯ ಶಾಸಕರ ಗುಂಪಿಗೆ ಬಿಜೆಪಿಯ ಬೆಂಬಲ ಇದೆಯೇ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ. ಪ್ರಭಾವಿ ರಾಷ್ಟ್ರೀಯ ಪಕ್ಷವೊಂದು ತಮಗೆ ಬೆಂಬಲ ನೀಡಿದೆ ಎಂದು ಶಿಂಧೆ ಅವರು ಗುರುವಾರ ಹೇಳಿದ್ದರು.

ಕಟ್ಟೆಚ್ಚರ: ಶಿಂಧೆ ಅವರ ಬಂಡಾಯದ ವಿರುದ್ಧ ಶಿವಸೇನಾ ಕಾರ್ಯಕರ್ತರು ಬೀದಿಗಿಳಿಯುವ ಸಾಧ್ಯತೆ ಇರುವುದರಿಂದ ಮಹಾರಾಷ್ಟ್ರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಂಡಾಯ ಶಾಸಕರಿಗೆ ಸಂಬಂಧಿಸಿದ ಫಲಕಗಳನ್ನು ಸೇನಾ ಕಾರ್ಯಕರ್ತರು ಕಿತ್ತೆಸೆದ ಒಂದೆರಡು ಘಟನೆಗಳು ವರದಿಯಾಗಿವೆ. ಹಾಗಾಗಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.

ಪವಾರ್‌–ಉದ್ಧವ್‌ ಭೇಟಿ: ಶರದ್‌ ಪವಾರ್‌ ಅವರು ಉದ್ಧವ್‌ ಠಾಕ್ರೆ ಅವರನ್ನು ಶುಕ್ರವಾರ ಸಂಜೆ ಭೇಟಿಯಾಗಿದ್ದಾರೆ. ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್‌ ಪಾಟೀಲ್‌, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪವಾರ್‌ ಜತೆಗಿದ್ದರು.

ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ಅಜಿತ್ ಪವಾರ್ ಅವರು ಗುರುವಾರ ಹೇಳಿದ್ದರು. ಎಂವಿಎ ನೇತೃತ್ವದ ಸರ್ಕಾರದ ಭವಿಷ್ಯವು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಧಾರವಾಗುತ್ತದೆಯೇ ಹೊರತು ಶಿಂಧೆ ಮತ್ತು ಅವರ ಬೆಂಬಲಿಗರು ತಂಗಿರುವ ಗುವಾಹಟಿಯ ಹೋಟೆಲ್‌ನಲ್ಲಿ ಅಲ್ಲ ಎಂದು ಪವಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT