ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಂದೆಯನ್ನು ಹೊರಹಾಕಿದರೆ ಬಿಜೆಪಿ ಜೊತೆ ಕೈಜೋಡಿಸುವೆ ಎಂದಿದ್ದ ಠಾಕ್ರೆ: ಸೇನಾ ಶಾಸಕ

Last Updated 6 ಆಗಸ್ಟ್ 2022, 5:09 IST
ಅಕ್ಷರ ಗಾತ್ರ

ಮುಂಬೈ:ಶಿವಸೇನಾದಲ್ಲಿಬಂಡಾಯ ತಲೆದೋರಿದ್ದ ಸಂದರ್ಭದಲ್ಲಿ, ಭಿನ್ನಮತೀಯ ಶಾಸಕರು ಏಕನಾಥ ಶಿಂದೆ ಅವರನ್ನು ಹೊರಹಾಕಿದ್ದರೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಬಿಜೆಪಿಯೊಂದಿಗೆ ಕೈ ಜೋಡಿಸಲು ಸಿದ್ಧವಾಗಿದ್ದರು ಎಂದು ಮಹಾರಾಷ್ಟ್ರ ಶಾಸಕ ದೀಪಕ್‌ ಕೇಸರ್ಕರ್‌ ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಶಿವಸೇನಾ ವಕ್ತಾರರಾಗಿರುವ ಕೇಸರ್ಕರ್‌, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದ ಉದ್ಧವ್‌ ಠಾಕ್ರೆ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಯೋಜನೆಯಲ್ಲಿದ್ದರು. ಶಿವಸೇನಾದಲ್ಲಿ ಉದ್ಭವಿಸಿದ ಬಿಕ್ಕಟ್ಟಿನ ಭಾಗವಾಗಿ ಸಿಎಂ ಸ್ಥಾನಕ್ಕೆ ‌ಜೂನ್‌ 29ರಂದು ರಾಜೀನಾಮೆ ನೀಡಿದಠಾಕ್ರೆ, ತಾವು ಉನ್ನತ ಸ್ಥಾನದಲ್ಲಿ ಮುಂದುವರಿಯುವುದಕ್ಕಿಂತಲೂಮೋದಿ ಅವರೊಂದಿಗೆ ಹೊಂದಿರುವ ಸಂಬಂಧವು ತುಂಬಾ ಮುಖ್ಯವೆಂದು ಭಾವಿಸಿದ್ದರು ಎಂಬುದಾಗಿಯೂ ತಿಳಿಸಿದ್ದಾರೆ.

ಶಿವಸೇನೆಯ 39 ಶಾಸಕರು ಸದ್ಯ ಮುಖ್ಯಮಂತ್ರಿಯಾಗಿರುವ ಶಿಂದೆ ಅವರೊಂದಿಗೆ ಸೇರಿ, ಮಹಾ ವಿಕಾಸ ಆಘಾಡಿ (ಶಿವಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ) ಸರ್ಕಾರದ ವಿರುದ್ಧ ಬಂಡಾಯವೆದಿದ್ದರು. ಈ ವೇಳೆ ಬಿಜೆಪಿ ಜೊತೆ ಕೈಜೋಡಿಸುವಂತೆ ಬಂಡಾಯ ಶಾಸಕರೊಬ್ಬರ ಮೂಲಕ ಠಾಕ್ರೆಗೆ ತಿಳಿಸಲಾಗಿತ್ತು. ಆದರೆ ಠಾಕ್ರೆ, ಬಂಡಾಯ ಶಾಸಕರು ಶಿಂದೆ ಅವರನ್ನು ತೊರೆದು ಪಕ್ಷಕ್ಕೆ ಮರಳಿದರೆ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಈ ಪ್ರಸ್ತಾವನೆಯನ್ನು ಬಂಡಾಯ ಶಾಸಕರು ಮತ್ತು ಬಿಜೆಪಿ ಒಪ್ಪಿರಲಿಲ್ಲ ಎಂದು ಕೇಸರ್ಕರ್‌ ಹೇಳಿದ್ದಾರೆ.

ಉದ್ಧವ್‌ ಠಾಕ್ರೆ ಅವರೇ ಬಿಜೆಪಿ ಜೊತೆಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿದ್ದರು. ಹೀಗಿರುವಾಗ ಸೇನಾ ನಾಯಕರು, ವಿಶೇಷವಾಗಿ ಆದಿತ್ಯ ಠಾಕ್ರೆ, ಬಂಡಾಯ ಶಾಸಕರ ವಿರುದ್ಧ ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸುತ್ತಿದ್ದದ್ದು ಏಕೆ ಎಂದು ಕೇಸರ್ಕರ್‌ ಕೇಳಿದ್ದಾರೆ. 'ನಾನು ಗುವಾಹಟಿಗೆ (ಜೂನ್‌ 21ರಂದು) ತೆರಳಿದ್ದಾಗ, ಬಿಜೆಪಿ ಹಾಗೂ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದ್ದ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದೆ. ಮತ್ತೆ ಆ ವ್ಯಕ್ತಿಯನ್ನು ಠಾಕ್ರೆ ಅವರ ಬಳಿಗೆ ಕಳುಹಿಸಿ, ಆಗಿದ್ದೆಲ್ಲವನ್ನು ಮರೆತು ಮತ್ತೆ ಒಂದಾಗೋಣ ಎಂಬ ಸಂದೇಶ ರವಾನಿಸಿದ್ದೆ' ಎಂದಿದ್ದಾರೆ.

'ಆಗಲೂ ಉದ್ಧವ್‌ ಸಾಹೇಬ್‌ ಅವರು, 'ನೀವು ಶಿಂದೆಯನ್ನು ಹೊರಹಾಕುವುದಾದರೆ ಕೈಜೋಡಿಸಲು ನಾವು ಸಿದ್ಧ' ಎಂದಿದ್ದರು. ಇದು ಅಸಮಂಜಸವಾದ ತೀರ್ಮಾನ ಎಂಬ ಕಾರಣಕ್ಕೆಇದನ್ನು ಸೇನೆ ಶಾಸಕರು ಹಾಗೂ ಬಿಜೆಪಿ ಒಪ್ಪಿರಲಿಲ್ಲ. ನಂತರ ನಡೆದದ್ದೆಲ್ಲ ಈಗ ಇತಿಹಾಸ' ಎಂದು ಕೇಸರ್ಕರ್‌ ವಿವರಿಸಿದ್ದಾರೆ.

ಕೇಸರ್ಕರ್‌ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಉದ್ಧವ್‌ ಠಾಕ್ರೆ ಬಣ, ಕೇಸರ್ಕರ್‌ ಅವರು ಬಂಡಾಯ ಬಣದ ವಕ್ತಾರರಾಗಿ ನೇಮಕವಾದ ಬಳಿಕ ಅಸಮಂಜಸ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದೆ.

ಏಕನಾಥ ಶಿಂದೆ ಅವರು ಬಿಜೆಪಿ ಬೆಂಬಲದೊಂದಿಗೆ ಜೂನ್‌ 30ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT