ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ಗೆ ಬ್ರಿಟನ್ ಪ್ರಧಾನಿ ಬೋರಿಸ್ ಭೇಟಿ; ನಡೆಯಲಿದೆ ಮೋದಿ ಜೊತೆ ಚರ್ಚೆ

Last Updated 17 ಏಪ್ರಿಲ್ 2022, 8:54 IST
ಅಕ್ಷರ ಗಾತ್ರ

ಲಂಡನ್‌: ಇದೇ ಮೊದಲ ಬಾರಿಗೆ ಬ್ರಿಟಿಷ್‌ ಪ್ರಧಾನಿಯೊಬ್ಬರು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಬೋರಿಸ್‌ ಜಾನ್ಸನ್‌ ಮುಂದಿನ ವಾರ ಎರಡು ದಿನಗಳ ಭಾರತ ಭೇಟಿಗೆ ಬರಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಬೋರಿಸ್‌ ಅವರು ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಏಪ್ರಿಲ್‌ 21ರಂದು ಅವರ ಪ್ರಯಾಣ ಆರಂಭವಾಗಲಿದೆ. ಬ್ರಿಟನ್‌ ಮತ್ತು ಭಾರತದಲ್ಲಿನ ಪ್ರಮುಖ ವಲಯಗಳಲ್ಲಿನ ಹೂಡಿಕೆಗಳ ಕುರಿತು ಘೋಷಣೆಯಾಗಲಿವೆ ಎಂದು ಡೌನಿಂಗ್‌ ಸ್ಟ್ರೀಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್‌ 22ರಂದು ನವದೆಹಲಿಯಲ್ಲಿ ಬೋರಿಸ್‌ ಜಾನ್ಸನ್‌ ಮತ್ತು ನರೇಂದ್ರ ಮೋದಿ ಭೇಟಿ ನಡೆಯಲಿದೆ. ಅಲ್ಲಿ ಭಾರತ ಮತ್ತು ಬ್ರಿಟನ್‌ ನಡುವಿನ ರಕ್ಷಣಾ ಕಾರ್ಯತಂತ್ರ, ರಾಜತಾಂತ್ರಿಕತೆ ಮತ್ತು ಆರ್ಥಿಕತೆಯ ಪಾಲುದಾರಿಕೆ, ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ) ಸಂಬಂಧಿಸಿದಂತೆ ಮಾತುಕತೆ ಆಗಲಿದೆ.

'ನನ್ನ ಭಾರತದ ಭೇಟಿಯ ವೇಳೆ ಉಭಯ ರಾಷ್ಟ್ರಗಳಿಗೆ ಮುಖ್ಯವಾಗಿರುವ ವಿಚಾರಗಳನ್ನು ಪ್ರಸ್ತಾಪಿಸಲಿದ್ದೇನೆ. ಉದ್ಯೋಗ ಸೃಷ್ಟಿಯಿಂದ ಹಿಡಿದು, ಆರ್ಥಿಕತೆ ವೃದ್ಧಿ, ಇಂಧನ ಹಾಗೂ ರಕ್ಷಣಾ ಕ್ಷೇತ್ರದ ವಿಷಯಗಳನ್ನು ಒಳಗೊಂಡಿರಲಿವೆ' ಎಂದು ಬೋರಿಸ್‌ ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ಅವರು ಪ್ರಮುಖ ಉದ್ದಿಮೆಗಳಿಗೆ ಭೇಟಿ ನೀಡಲಿದ್ದು, ಎರಡೂ ರಾಷ್ಟ್ರಗಳ ನಡುವಿನ ವಾಣಿಜ್ಯ, ವ್ಯಾಪಾರ ಹಾಗೂ ಜನರ ಸಂಪರ್ಕಗಳ ಬಗ್ಗೆ ಚರ್ಚಿಸಲಿದ್ದಾರೆ. ಬ್ರಿಟನ್‌ನಲ್ಲಿರುವ ಬ್ರಿಟಿಷ್‌–ಭಾರತೀಯರಲ್ಲಿ ಅರ್ಧದಷ್ಟು ಜನರ ಮೂಲ ಗುಜರಾತ್‌ ಆಗಿದೆ.

ಕೈಗಾರಿಕೆಗಳಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ, ಉಭಯ ರಾಷ್ಟ್ರಗಳ ನಡುವೆ ವಿಜ್ಞಾನ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಸಹಯೋಗ ಸೇರಿದಂತೆ ಪ್ರಮುಖ ಘೋಷಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಬ್ರಿಟನ್‌ ಮತ್ತು ಭಾರತದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಭಾಗವಾಗಿ ಬ್ರಿಟನ್‌ನಲ್ಲಿ 530 ಮಿಲಿಯನ್‌ ಪೌಂಡ್‌ಗಳಷ್ಟು (ಸುಮಾರು ₹5,283 ಕೋಟಿ) ಹೂಡಿಕೆ ಮಾಡಲು ಎರಡೂ ರಾಷ್ಟ್ರಗಳ ಪ್ರಧಾನಿಗಳು ಕಳೆದ ವರ್ಷ ಸಮ್ಮತಿಸಿದ್ದರು. ಭಾರತೀಯ ಕಂಪನಿಗಳ ಹೂಡಿಕೆಯಿಂದಾಗಿ ಬ್ರಿಟನ್‌ನಲ್ಲಿ 95,000 ಉದ್ಯೋಗಗಳು ಸೃಷ್ಟಿಯಾಗಿರುವುದಾಗಿ ಅಂದಾಜಿಸಲಾಗಿದೆ.

ಕೋವಿಡ್‌–19 ಸಾಂಕ್ರಾಮಿಕದ ಕಾರಣಗಳಿಂದಾಗಿ ಈ ಹಿಂದೆ ಬೋರಿಸ್‌ ಅವರ ಭಾರತ ಭೇಟಿಯು ಎರಡು ಬಾರಿ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT