ಶುಕ್ರವಾರ, ಮಾರ್ಚ್ 31, 2023
22 °C
ಹಿಮಾಚಲ ಪ್ರದೇಶ: ನವೆಂಬರ್ 12ರಂದು ಮತದಾನ

ಗುಜರಾತಿಗೆ ಘೋಷಣೆಯಾಗದ ಚುನಾವಣಾ ವೇಳಾಪಟ್ಟಿ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಹಿಮಾಚಲ ಪ್ರದೇಶ ವಿಧಾನಸಭೆಗೆ ಒಂದೇ ಹಂತದಲ್ಲಿ (ನವೆಂಬರ್‌ 12) ಚುನಾವಣೆ ನಡೆಯಲಿದೆ. ಡಿಸೆಂಬರ್‌ 8ರಂದು ಮತ ಎಣಿಕೆ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆಗೆ ಶುಕ್ರವಾರವೇ ಚುನಾವಣಾ ದಿನಾಂಕ ಘೋಷಿಸಲಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರಾಜಕೀಯ ಪಕ್ಷಗಳು ಇದ್ದವು. ಆದರೆ, ಚುನಾವಣಾ ಆಯೋಗವು ಹಿಮಾಚಲ ಪ್ರದೇಶದ ವಿಧಾನಸಭೆಯ ಚುನಾವಣಾ ದಿನಾಂಕವನ್ನಷ್ಟೇ ಘೋಷಣೆ ಮಾಡಿದೆ.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ‘ಪ್ರಜಾಪ್ರಭುತ್ವದ ಹಬ್ಬದಲ್ಲಿ ಅತ್ಯಧಿಕ ಸಂಖ್ಯೆ ಮತದಾರರು ಪಾಲ್ಗೊಳ್ಳುವಂತೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದರು. 

ಗುಜರಾತ್‌ ವಿಧಾನಸಭೆಗೆ ಚುನಾ ವಣೆ ದಿನಾಂಕ ಘೋಷಣೆ ಮಾಡದ ಆಯೋಗದ ಕ್ರಮಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಮತದಾನ ನಡೆದ ಒಂದು ತಿಂಗಳ ಬಳಿಕ ಮತ ಎಣಿಕೆ ನಡೆಸುವ ಆಯೋಗದ ಕ್ರಮ ವನ್ನೂ ಪ್ರಶ್ನಿಸಿವೆ.

‘ಗುಜರಾತ್‌ನಲ್ಲಿ ಇನ್ನಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಲು ಹಾಗೂ ಹೊಸ ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನುಕೂಲ ಮಾಡಿ ಕೊಡಲು ಚುನಾವಣಾ ದಿನಾಂಕವನ್ನು ಘೋಷಿಸಿಲ್ಲ. ಇದರಲ್ಲಿ ಆಶ್ಚರ್ಯವೇನಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಜೈರಾಮ್ ರಮೇಶ್‌ ಹೇಳಿದ್ದಾರೆ. 

ಆದರೆ, 2017ರಲ್ಲೂ ಎರಡು ರಾಜ್ಯಗಳಿಗೆ ಪ್ರತ್ಯೇಕವಾಗಿ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿತ್ತು. ಆಯೋಗದಿಂದ ಯಾವುದೇ ಲೋಪ ಆಗಿಲ್ಲ ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ.  ಗುಜರಾತ್‌ ವಿಧಾನಸಭೆಯ ಚುನಾವಣೆಯನ್ನು ಮುಂದಿನ ದಿನಗಳಲ್ಲಿ ಘೋಷಿಸ ಲಾಗು ವುದು ಎಂದು ಆಯೋಗ ತಿಳಿಸಿದೆ. 

ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ಅವರು ಇತ್ತೀಚೆಗೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಕಳೆದ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಪ್ರಬಲ ಪೈಪೋಟಿ ನೀಡಿದ್ದ ಕಾಂಗ್ರೆಸ್‌ ಈ ಸಲ ಆಂತರಿಕ ಕಲಹದಿಂದ ಹೈರಾಣಾಗಿದೆ. ಜಿ–23 ಗುಂಪಿನ ಆನಂದ ಶರ್ಮಾ ಅವರು ಹೈಕಮಾಂಡ್ ಜತೆಗೆ ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಆಮ್‌ ಆದ್ಮಿ ಪಕ್ಷವು, ನೆರೆಯ ರಾಜ್ಯದಲ್ಲಿ ತನ್ನ ತಾಕತ್ತು ತೋರಿ ಸುವ ಹವಣಿಕೆಯಲ್ಲಿದೆ.  2017ರಲ್ಲಿ ಹಿಮಾಚಲ ಪ್ರದೇಶಕ್ಕೆ ಅ. 12ರಂದು ಹಾಗೂ ಗುಜರಾತ್‌ಗೆ ಅ. 25ರಂದು ಚುನಾವಣೆ ಘೋಷಿಸಲಾಗಿತ್ತು. ಡಿ. 18ರಂದು ಮತ ಎಣಿಕೆ ನಡೆದಿತ್ತು.

ಈ ಸಲ ಎರಡು ರಾಜ್ಯಗಳಿಗೆ ಒಂದೇ ದಿನ ಮತ ಎಣಿಕೆ ನಡೆಯಲಿದೆಯಾ ಎಂಬ ಪ್ರಶ್ನೆಗೆ ಮುಖ್ಯ ಚುನಾವಣಾ ಆಯುಕ್ತ, ‘ಗುಜರಾತ್‌ ವಿಷಯ ಬಂದಾಗ ಈ ಬಗ್ಗೆ ನಿಮಗೆ ಹೇಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.‌

ತಾಂತ್ರಿಕವಾಗಿ, ನವೆಂಬರ್‌–ಡಿಸೆಂಬರ್‌ನಲ್ಲಿ ಗುಜರಾತ್‌ ವಿಧಾನಸಭೆಗೆ ಚುನಾವಣೆ ನಡೆಸಲು ಸಾಧ್ಯವಿದೆ. 2017ರಲ್ಲಿ ಹಿಮಾಚಲ ಪ್ರದೇಶದಲ್ಲಿ ನವೆಂಬರ್‌ 9ರಂದು ಹಾಗೂ ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ (ಡಿಸೆಂಬರ್‌ 9 ಮತ್ತು 14) ಮತದಾನ ನಡೆದಿತ್ತು. ಮತ ಎಣಿಕೆ ಒಂದೇ ದಿನ ನಡೆದಿತ್ತು. ಹಿಮಾಚಲ ಪ್ರದೇಶ ವಿಧಾನಸಭೆಯ ಅವಧಿ 2023ರ ಜನವರಿ 8ರಂದು ಕೊನೆಗೊಳ್ಳಲಿದೆ. ಗುಜರಾತ್‌ ವಿಧಾನಸಭೆಯ ಅವಧಿ 2023ರ ಫೆಬ್ರುವರಿ 18ರ ವರೆಗೆ ಇದೆ.

‘ಎರಡು ವಿಧಾನಸಭೆಗಳ ಅವಧಿಯ ಅಂತರ 40 ದಿನಗಳು ಇವೆ. ಕಣಿವೆ ರಾಜ್ಯದ ಹವಾಮಾನವನ್ನು ಪರಿಗಣಿಸಿ ಅವಲಂಬಿಸಿ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದೆ’ ಎಂದು ಚುನಾವಣಾ ಆಯುಕ್ತರು ಹೇಳಿಕೊಂಡರು. ಆದರೆ, ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ಹಾಗೂ ಗೋವಾ ರಾಜ್ಯಗಳಿಗೆ ಒಂದೇ ದಿನ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು