ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಇಪಿ ಅನುಷ್ಠಾನಕ್ಕೆ ಬಜೆಟ್‌ ಸಹಕಾರಿ’-ನರೇಂದ್ರ ಮೋದಿ

Last Updated 21 ಫೆಬ್ರುವರಿ 2022, 18:06 IST
ಅಕ್ಷರ ಗಾತ್ರ

‌ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ದೇಶದಾದ್ಯಂತ ಸಮರ್ಪಕವಾಗಿ ಜಾರಿಗೊಳಿಸಲು ಕೇಂದ್ರದ ಪ್ರಸಕ್ತ ಸಾಲಿನ ಬಜೆಟ್‌ ಸಹಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದರು.

ರಾಷ್ಟ್ರೀಯ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೀಟುಗಳ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.

ಕೇಂದ್ರದ ಬಜೆಟ್‌ನಿಂದ ಉಂಟಾಗುವ ಧನಾತ್ಮಕ ಪರಿಣಾಮಗಳ ಕುರಿತ ವೆಬಿನಾರ್‌ನಲ್ಲಿ ಮಾತನಾಡಿದ ಅವರು,ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಐದು ವಿಷಯಗಳ ಬಗ್ಗೆ ಬಜೆಟ್‌ ಕೇಂದ್ರೀಕರಿಸಿದೆ ಎಂದರು.

ಶಿಕ್ಷಣದ ಗುಣಮಟ್ಟ, ಕೌಶಲ ಅಭಿವೃದ್ಧಿ, ನಗರ ಯೋಜನೆ ಮತ್ತು ವಿನ್ಯಾಸ ಹಾಗೂ ಅನಿಮೇಷನ್‌ ತಂತ್ರಜ್ಞಾನಕ್ಕೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ ಎಂದು ಹೇಳಿದರು.

ಡಿಜಿಟಲ್ ವಿಶ್ವವಿದ್ಯಾಲಯವು ವಿನೂತನ ಮತ್ತು ಅಭೂತಪೂರ್ವ ಹೆಜ್ಜೆಯಾಗಿದೆ. ಅದು ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ಸಾಮರ್ಥ್ಯ ಹೊಂದಿದೆ ಎಂದ ಅವರು,ಶಿಕ್ಷಣ ಸಚಿವಾಲಯ, ಯುಜಿಸಿ ಮತ್ತು ಎಐಸಿಟಿಇ ಮತ್ತು ಡಿಜಿಟಲ್ ವಿಶ್ವವಿದ್ಯಾಲಯದ ಎಲ್ಲಾ ಸಂಬಂಧಪಟ್ಟವರು ಈ ಯೋಜನೆಗೆ ವೇಗ ನೀಡಬೇಕು ಎಂದು ಸೂಚಿಸಿದರು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಾಗ ಅಂತರರಾಷ್ಟ್ರೀಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದೂ ಅವರು ತಿಳಿಸಿದರು.

ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಡಿಜಿಟಲ್‌ ಸಂಪರ್ಕವು ಶಿಕ್ಷಣ ವ್ಯವಸ್ಥೆಯನ್ನು ಚಲನಶೀಲತೆಯಲ್ಲಿ ಇರುವಂತೆ ಮಾಡಿದೆ ಎಂದ ಅವರು,ಶೈಕ್ಷಣಿಕ ಮೂಲಸೌಕರ್ಯಗಳಾದ ಇ-ವಿದ್ಯಾ, ಒಂದು ತರಗತಿ, ಒಂದು ಚಾನೆಲ್, ಡಿಜಿಟಲ್ ಲ್ಯಾಬ್‌ಗಳು ಮತ್ತು ಡಿಜಿಟಲ್ ವಿಶ್ವವಿದ್ಯಾಲಯವು ಯುವಜನತೆಯ ಜ್ಞಾನವೃದ್ಧಿ ಮತ್ತು ಪ್ರಗತಿಗೆ ಸಾಕಷ್ಟು ಸಹಾಯ ಮಾಡಲಿವೆ ಎಂದರು.

ಮಾತೃಭಾಷೆಗೆ ಒತ್ತು

ಅಂತರರಾಷ್ಟ್ರೀಯ ಮಾತೃಭಾಷಾ ದಿನದ (ಫೆ. 21) ಬಗ್ಗೆ ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

‘ಈಗಾಗಲೇ ಹಲವು ರಾಜ್ಯಗಳಲ್ಲಿ, ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವನ್ನು ಸ್ಥಳೀಯ ಭಾಷೆಗಳಲ್ಲಿಯೂ ನೀಡಲಾಗುತ್ತಿದೆ. ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ರೂಪದಲ್ಲಿ ಅತ್ಯುತ್ತಮ ಪಠ್ಯ ಸಿದ್ಧಪಡಿಸಬೇಕು. ಅಂಥ ಪಠ್ಯವು ಇಂಟರ್‌ನೆಟ್‌, ಮೊಬೈಲ್‌ ಫೋನ್‌, ಟಿ.ವಿ ಮತ್ತು ರೇಡಿಯೊ ಮೂಲಕ ದೊರೆಯುವಂತಿರಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT