ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್‌ ವಿಸ್ತಾ ಸ್ಥಗಿತಕ್ಕೆ ಪಿಐಎಲ್‌ ದುರುಪಯೋಗ: ಕೇಂದ್ರದ ವಾದ

ದೆಹಲಿ ಹೈಕೋರ್ಟ್‌
Last Updated 11 ಮೇ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಸೆಂಟ್ರಲ್‌ ವಿಸ್ತಾ ಅಭಿವೃದ್ಧಿ ಯೋಜನೆಯಡಿ ರಾಜಪಥದ ಇಕ್ಕೆಲಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ದೆಹಲಿ ಹೈಕೋರ್ಟ್‌ ಮುಂದೆ ಸಲ್ಲಿರುವ ಅರ್ಜಿಯು ‘ಕಾನೂನು ಪ್ರಕ್ರಿಯೆಯ ದುರುಪಯೋಗ’ ಮಾತ್ರವಲ್ಲದೆ ಕೋವಿಡ್‌ ಹೆಸರಿನಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಲು ನಡೆಯುತ್ತಿರುವ ಇನ್ನೊಂದು ಪ್ರಯತ್ನ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವು ಮಂಗಳವಾರ ಈ ವಾದವನ್ನು ಮಂಡಿಸಿದೆ. ಯೋಜನೆ ಸ್ಥಗಿತಗೊಳಿಸಬೇಕು ಎಂದು ಅನ್ಯ ಮಲ್ಹೋತ್ರಾ ಹಾಗೂ ಸೊಹೇಲ್‌ ಹಾಶ್ಮಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ಎನ್‌. ಪಟೇಲ್‌ ಹಾಗೂ ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರನ್ನೊಳಗೊಂಡ ಪೀಠವು ಹೇಳಿದೆ. ಕೇಂದ್ರ ಸರ್ಕಾರದ ಪರವಾಗಿ ನೀಡಲಾಗಿರುವ ಪ್ರಮಾಣಪತ್ರವನ್ನು ದಾಖಲಿಸಿಕೊಳ್ಳುವಂತೆ ಕೋರ್ಟ್‌ ಸೂಚಿಸಿದೆ.

‘ಈ ಕಾಮಗಾರಿಯನ್ನೂ ಸೆಂಟ್ರಲ್‌ ವಿಸ್ತಾ ಎಂದು ಕರೆಯಲಾಗುತ್ತಿದೆಯಾದರೂ, ವಾಸ್ತವದಲ್ಲಿ ಇದು ಆ ಯೋಜನೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸೆಂಟ್ರಲ್‌ ವಿಸ್ತಾ ಯೋಜನೆಯಡಿ ಸಂಸತ್‌ ಭವನದ ನವೀಕರಣ, ಸೌತ್‌ ಬ್ಲಾಕ್‌ ನಿರ್ಮಾಣ, ಕೇಂದ್ರ ಸರ್ಕಾರದ ಹೊಸ ಕಚೇರಿ ಸಂಕೀರ್ಣ ನಿರ್ಮಾಣ ಮುಂತಾದವುಗಳು ಸೇರಿವೆ.ಅದೂ ಅಲ್ಲದೆ, ಅರ್ಜಿದಾರರು ಉಲ್ಲೇಖಿಸಿರುವಂತೆ ಈ ಯೋಜನೆಗೆ ಪ್ರಧಾನಮಂತ್ರಿ ಚಾಲನೆ ನೀಡಿಲ್ಲ’ ಎಂದುಸೆಂಟ್ರಲ್‌ ವಿಸ್ತಾ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜೀವ್‌ ಹೇಳಿದ್ದಾರೆ.

‘ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಪಿಡುಗು ತೀವ್ರವಾಗಿರುವುದರಿಂದ ನಿರ್ಮಾಣ ಕಾರ್ಮಿಕರು ಸೋಂಕಿಗೆ ಒಳಗಾಗುವ ಅಪಾಯವಿದೆ. ಆದ್ದರಿಂದ ಈ ಯೋಜನೆಯ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ, ಸಿದ್ಧಾರ್ಥ ಮಲ್ಹೋತ್ರಾ ಮನವಿ ಮಾಡಿದರು.

ಆದರೆ, ಇಲ್ಲಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು ಕಾಮಗಾರಿಯ ಸ್ಥಳದಲ್ಲೇ ವಾಸಿಸುತ್ತಿದ್ದಾರೆ. ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಕೋವಿಡ್‌ನ ಇತರ ಮಾರ್ಗಸೂಚಿಗಳನ್ನೂ ಪಾಲಿಸುತ್ತಾರೆ. ಕಾಮಗಾರಿಯ ಸ್ಥಳದಲ್ಲೇ 250 ಕಾರ್ಮಿಕರು ಉಳಿದುಕೊಳ್ಳುವ ಸೌಲಭ್ಯ ಇದೆ. ಕೋವಿಡ್‌ ಮಾರ್ಗಸೂಚಿಗಳನ್ನುಪಾಲಿಸಲಾಗುತ್ತಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.

ಗುಲಾಬಿ ಕನ್ನಡಕ ತೆಗೆದಿಡಿ: ಪ್ರಧಾನಿಗೆ ರಾಹುಲ್‌ ಆಗ್ರಹ
‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಗುಲಾಬಿ ಬಣ್ಣದ ಕನ್ನಡಕವನ್ನು ತೆಗೆಯಬೇಕು. ಆ ಕನ್ನಡಕದಲ್ಲಿ ಸೆಂಟ್ರಲ್ ವಿಸ್ತಾ ಯೋಜನೆ ಬಿಟ್ಟು, ಬೇರೇನೂ ಕಾಣುವುದಿಲ್ಲ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ.

ಸೆಂಟ್ರಲ್ ವಿಸ್ತಾ ಯೋಜನೆಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಬೇಕು ಎಂಬ ತಮ್ಮ ಒತ್ತಾಯವನ್ನು ರಾಹುಲ್ ಗಾಂಧಿ ಮುಂದುವರಿಸಿದ್ದಾರೆ. ಈ ಸಂಬಂಧ ಅವರು ಮಂಗಳವಾರ ಟ್ವೀಟ್ ಮಾಡಿದ್ದಾರೆ. ‘ಅಸಂಖ್ಯ ಮೃತದೇಹಗಳು ನದಿಯಲ್ಲಿ ತೇಲಿಬರುತ್ತಿವೆ. ಆಸ್ಪತ್ರೆಗಳ ಎದುರು ಮೈಲುಗಟ್ಟಲೆ ಸಾಲುಗಳಿವೆ. ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಪ್ರಧಾನಿಯವರೇ, ನಿಮ್ಮ ಗುಲಾಬಿ ಛಾಯೆಯ ಕನ್ನಡಕವನ್ನು ತೆಗೆದಿಡಿ'’ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಇಂತಹ ಸಂಕಷ್ಟದ ಸಮಯದಲ್ಲಿ ಅಗತ್ಯವಿರುವವರಿಗೆ ಎಲ್ಲರೂ ಸಹಾಯಹಸ್ತ ಚಾಚಬೇಕು. ಇದಕ್ಕಾಗಿ ಈಗ ಆರಂಭಿಸಲಾಗಿರುವ ‘SpeakUpToSaveLives’ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಿ’ ಎಂದು ಅವರು ಕರೆ ನೀಡಿದ್ದಾರೆ.

ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ, ಹಾಸಿಗೆ, ಆಮ್ಲಜನಕ ಮತ್ತು ವೆಂಟಿಲೇಟರ್‌ಗಳು ಸಿಗದೆ ಜನರು ಪರದಾಡುತ್ತಿರುವ ದೃಶ್ಯಗಳಿರುವ ವಿಡಿಯೊ ಒಂದನ್ನು ರಾಹುಲ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಸೋನಿಯಾಗೆ ನಡ್ಡಾ ಬಹಿರಂಗ ಪತ್ರ
ರಾಹುಲ್‌ ಗಾಂಧಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನಾಲ್ಕು ಪುಟದ ಬಹಿರಂಗ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ‘ಕಾಂಗ್ರೆಸ್‌ನ ಹಿರಿಯ ನಾಯಕರು ಸತತವಾಗಿ ನಕಾರಾತ್ಮಕತೆಯನ್ನು ಹರಡುತ್ತಿದ್ದಾರೆ. ಗೊಂದಲ ಸೃಷ್ಟಿಸಿ ಜನರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ. ಕೋವಿಡ್‌ ಪ್ರಕರಣಗಳ ಹೆಚ್ಚಳವನ್ನು ತಡೆಯಲು ಯಾವ್ಯಾವ ರಾಜ್ಯಗಳು ವಿಫಲವಾಗಿವೆ ಎಂಬುದನ್ನು ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳ ಅಂಕಿ ಅಂಶಗಳು ಸ್ಪಷ್ಟವಾಗಿ ತಿಳಿಸುತ್ತಿವೆ. ಪಂಜಾಬ್‌ನಂಥ ರಾಜ್ಯದಲ್ಲಿ (ಕಾಂಗ್ರೆಸ್‌ ಆಡಳಿತವಿರುವ) ಸಾವಿನ ಪ್ರಮಾಣ ಯಾಕೆ ಹೆಚ್ಚು ಎಂಬ ಪ್ರಶ್ನೆಯನ್ನು ನೀವು ನಿಮ್ಮದೇ ಪಕ್ಷದ ಮುಖ್ಯಮಂತ್ರಿಗಳನ್ನು ಕೇಳಬೇಕು’ ಎಂದು ನಡ್ಡಾ ಹೇಳಿದ್ದಾರೆ.

ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಅಂಕಿಅಂಶಗಳ ಹೋರಾಟ ಆರಂಭವಾಗುವ ಸೂಚನೆಗಳೂ ಲಭಿಸಿವೆ.

ಈ ನಡುವೆ, #GiveItUpGuys ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ ಮಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು, 'ಕೋವಿಡ್ ವಿರುದ್ಧದ ದೇಶದ ಹೋರಾಟವನ್ನು ದುರ್ಬಲಗೊಳಿಸಬೇಡಿ ಎಂದು ಜೆ.ಪಿ.ನಡ್ಡಾ ಅವರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಬದಲಿಗೆ ನಡ್ಡಾ ಅವರು, ಕೋವಿಡ್‌ ವಿರುದ್ಧ ದೇಶದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ ಎಂದು ಪ್ರಧಾನಿಗೇಕೆ ಪತ್ರ ಬರೆಯಬಾರದು' ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT