ಮಂಗಳವಾರ, ಅಕ್ಟೋಬರ್ 27, 2020
22 °C

ಹಾಥರಸ್‌ ಘಟನೆಯನ್ನು ದುರಂತವೆಂದು ಘೋಷಿಸಲಿ: ರಾಹುಲ್‌ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟಿಯಾಲ: ‘ಹಾಥರಸ್‌ನಲ್ಲಿ ದಲಿತ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದು, ಅದನ್ನು ದುರಂತವೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಪಂಜಾಬ್‌ನಲ್ಲಿ ನಡೆಯುತ್ತಿರುವ ‘ಖೇತಿ ಬಚಾವೊ’ ಯಾತ್ರೆಯಲ್ಲಿ ಪಾಲ್ಗೊಂಡಿರುವ ರಾಹುಲ್‌, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಹರಿಹಾಯ್ದಿದ್ದಾರೆ.

‘ಯೋಗಿ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ. 

ಹಾಥರಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿರುವ ಆಕ್ರೋಶದ ಹಿಂದೆ ಅಂತರರಾಷ್ಟ್ರೀಯ ಪಿತೂರಿ ಇದೆ ಎಂದು ಯೋಗಿ ಅವರು ದೂರಿದ್ದಾರೆ. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ಯೋಗಿ ಅವರಿಗೆ ಹಾಗೆ ಅನಿಸಿರಬಹುದು. ಅದು ಅವರ ಅಭಿಪ್ರಾಯ. ಅವರು ತಮಗೆ ಬೇಕಾದ್ದನ್ನೆಲ್ಲಾ ಕಲ್ಪಿಸಿಕೊಳ್ಳಲಿ. ವಾಸ್ತವವೇನೆಂದರೆ ಹಾಥರಸ್‌ನಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಆಕೆಯ ಕುತ್ತಿಗೆಗೆ ಪೆಟ್ಟಾಗಿತ್ತು. ಆಕೆಯ ಕುಟುಂಬದವರಿಗೆ ಬೆದರಿಕೆ ಹಾಕಲಾಗುತ್ತಿದೆ. ಇಷ್ಟೆಲ್ಲಾ ಆದರೂ ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದಿದ್ದಾರೆ.  

‘ಯುವತಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಇಷ್ಟಾದರೂ ಇಡೀ ಆಡಳಿತವೇ ಸಂತ್ರಸ್ತೆಯ ಕುಟುಂಬದ ಮೇಲೆ ದಾಳಿ ನಡೆಸುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಒಂದೇ ಒಂದು ಮಾತು ಕೂಡ ಆಡಿಲ್ಲ. ಸಂತ್ರಸ್ತೆಯ ಕುಟುಂಬ ಏಕಾಂಗಿಯಲ್ಲ. ಅವರ ಬೆಂಬಲಕ್ಕೆ ನಾವು ಇದ್ದೇವೆ. ಇದನ್ನು ಮನವರಿಕೆ ಮಾಡಿಕೊಡುವ ಸಲುವಾಗಿಯೇ ಆ ಕುಟುಂಬವನ್ನು ಮತ್ತೊಮ್ಮೆ ಭೇಟಿ ಮಾಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು