ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾಹಲ, ಗದ್ದಲದ ಸಂಸತ್‌ ಕಲಾಪ ಅಂತ್ಯ

ಗಡುವಿಗೆ ಎರಡು ದಿನ ಮೊದಲೇ ಸಂಸತ್ತಿನ ಮುಂಗಾರು ಅಧಿವೇಶನ ಮೊಟಕು
Last Updated 11 ಆಗಸ್ಟ್ 2021, 19:17 IST
ಅಕ್ಷರ ಗಾತ್ರ

ನವದೆಹಲಿ: ಗದ್ದಲ–ಕೋಲಾಹಲವನ್ನೇ ಹೆಚ್ಚು ಕಂಡಸಂಸತ್ತಿನ ಮುಂಗಾರು ಅಧಿವೇಶನವು ನಿಗದಿತ ಅವಧಿಗೆ ಎರಡು ದಿನ ಮುಂಚೆಯೇ ಬುಧವಾರ ಕೊನೆಗೊಂಡಿತು. ಪೆಗಾಸಸ್‌ ಕುತಂತ್ರಾಂಶ ಬಳಸಿ ನಡೆದಿದೆ ಎನ್ನಲಾದ ಬೇಹುಗಾರಿಕೆ ಮತ್ತು ಇತರ ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಭಾರಿ ಪ್ರತಿಭಟನೆಯನ್ನು ಮುಂಗಾರು ಅಧಿವೇಶನದಲ್ಲಿ ನಡೆಸಿದ್ದರು.

ರಾಜ್ಯಸಭೆಯಲ್ಲಿ ಮಂಗಳವಾರವೂ ಗದ್ದಲದ ವಾತಾವರಣ ಇತ್ತು. ವಿರೋಧ ಪಕ್ಷಗಳ ಸದಸ್ಯರು ವರದಿಗಾರರ ಮೇಜಿನ ಮೇಲೆ ಹತ್ತಿದ್ದರು. ಕಾಂಗ್ರೆಸ್‌ ಸದಸ್ಯ ಪ್ರತಾಪ್‌ ಸಿಂಗ್‌ ಬಾಜ್ವಾ ಅವರು ಹಾಳೆಗಳನ್ನು ಇದ್ದ ಕಡತವನ್ನು ಸಭಾಪತಿ ಪೀಠಕ್ಕೆ ಎಸೆದಿದ್ದರು. ಆಗ ಸಭಾಪತಿಯವರು ಪೀಠದಲ್ಲಿ ಇರಲಿಲ್ಲ.

ಲೋಕಸಭೆಯ ಕಾರ್ಯಕ್ಷಮತೆಯು ಶೇ 22ರಷ್ಟು ಮಾತ್ರ ಎಂದು ಸ್ಪೀಕರ್‌ ಓಂ ಬಿರ್ಲಾ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮುನ್ನ ಹೇಳಿದ್ದರು.

ಲೋಕಸಭೆಯಲ್ಲಿ 21 ಗಂಟೆ 14 ನಿಮಿಷದ ಕಲಾಪ ಮಾತ್ರ ನಡೆದಿದೆ. 74 ಗಂಟೆ 46 ನಿಮಿಷವು ವ್ಯರ್ಥವಾಗಿತ್ತು. ರಾಜ್ಯಸಭೆಯ 104 ಗಂಟೆಗಳ ಕಲಾಪದಲ್ಲಿ ಕೆಲಸ ಆಗಿದ್ದು 28 ಗಂಟೆ 21 ನಿಮಿಷ ಮಾತ್ರ.

17ನೇ ಲೋಕಸಭೆಯಲ್ಲಿ ಅತಿ ಹೆಚ್ಚು ಗದ್ದಲ ನಡೆದ ಅಧಿವೇಶನ ಇದು ಎಂದು ಲೋಕಸಭೆಯ ಕಾರ್ಯಾಲಯ ಹೇಳಿದೆ. 13 ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. 127ನೇ ಸಂವಿಧಾನ ತಿದ್ದುಪಡಿ ಮಸೂದೆ ಸೇರಿ ಹಲವು ಮಸೂದೆಗಳು ಅಂಗೀಕಾರ ಆಗಿವೆ. ರಾಜ್ಯಸಭೆ ಕೂಡ ಈ ಬಾರಿ ಭಾರಿ ಗದ್ದಲಕ್ಕೆ ಸಾಕ್ಷಿಯಾಗಿದೆ.

ವಿಮಾ ಮಸೂದೆ: ಮತ್ತೆ ಸಂಘರ್ಷ

ನವದೆಹಲಿ: ಒಬಿಸಿ ಮಸೂದೆ ಬಗ್ಗೆ ಬುಧವಾರ ಸುಮಾರು 6 ಗಂಟೆಗಳ ಕಾಲ ಶಾಂತಿಯುತ ಚರ್ಚೆ ನಡೆಸಿದ ರಾಜ್ಯಸಭೆ ಇದ್ದಕ್ಕಿದ್ದಂತೆ ಕೋಲಾಹಲಕ್ಕೆ ಸಾಕ್ಷಿಯಾಯಿತು. ವಿಮಾ ವಲಯದ ವಿವಾದಾತ್ಮಕ ಮಸೂದೆಯನ್ನು ಕೈಗೆತ್ತಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು ಮೇಜು ಹತ್ತಿದರು. ಮಾರ್ಷಲ್‌ಗಳು ಅವರನ್ನು ಕೆಳಗಿಳಿಸಲು ಯತ್ನಿಸಿದರು.

ಸದನದ ಒಳಗೆ ಪ್ರತಿಭಟನೆ ನಡೆಸುತ್ತಿದ್ದಾಗ ಮಹಿಳಾ ಸದಸ್ಯರ ಜತೆ ಮಾರ್ಷಲ್‌ಗಳು ಗೌರವಯುತವಾಗಿ ನಡೆದುಕೊಂಡಿಲ್ಲ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದರು. ಈ ಆರೋಪವನ್ನು ಸದನ ನಾಯಕ ಪೀಯೂಷ್ ಗೋಯಲ್ ನಿರಾಕರಿಸಿದರು. ವಿರೋಧ ಪಕ್ಷಗಳ ಸಂಸದರ ವರ್ತನೆ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

‘ಜಿಐಸಿಯನ್ನು ಖಾಸಗೀಕರಣಗೊಳಿಸುವ ವಿಮಾ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ದೊಡ್ಡ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜಿಸಿ ಅಂಗೀಕರಿಸಲಾಯಿತು. ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವಂತೆ ಬಿಜೆಪಿಗೆ ಆಪ್ತವಾಗಿರುವ ಪಕ್ಷಗಳೂ ಸೇರಿದಂತೆ ಪ್ರತಿಪಕ್ಷಗಳು ಇಟ್ಟಿದ್ದ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತು. ಈ ದಿನ ನಡೆದ ಘಟನೆಯು ದೌರ್ಜನ್ಯವನ್ನು ಮೀರಿದ್ದು’ ಎಂದು ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

‘ಮಹಿಳಾ ಸಂಸದರ ಮೇಲೆ ಇಂದು ರಾಜ್ಯಸಭೆಯಲ್ಲಿ ನಡೆದ ದಾಳಿ ಘಟನೆಯನ್ನು ನನ್ನ 55 ವರ್ಷಗಳ ಸಂಸದೀಯ ವೃತ್ತಿಜೀವನದಲ್ಲಿ ನೋಡಿಲ್ಲ. ಹೊರಗಿನಿಂದ 40ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರನ್ನು ಸದನಕ್ಕೆ ಕರೆತರಲಾಯಿತು. ಇದು ನೋವಿನ ಸಂಗತಿಯಾಗಿದ್ದು, ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ’ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಸದನದ ಹೊರಗೆ ಹೇಳಿದರು.

ಮಸೂದೆಗೆ ಸಂಸತ್‌ ಒಪ್ಪಿಗೆ

ನವದೆಹಲಿ: ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವುದಕ್ಕೆ ಬೇಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಯು ಸಂಸತ್ತಿನ ಅಂಗೀಕಾರ ಪಡೆದುಕೊಂಡಿದೆ.

ರಾಜ್ಯಸಭೆಯು ಮಸೂದೆಗೆ ಅವಿರೋಧವಾಗಿ ಬುಧವಾರ ಅನುಮೋದನೆ ನೀಡಿದೆ. ಲೋಕಸಭೆಯಲ್ಲಿ ಈ ಮಸೂದೆಯು ಮಂಗಳವಾರವೇ 187–0 ಮತಗಳಿಂದ ಅಂಗೀಕಾರ ಆಗಿತ್ತು. ರಾಜ್ಯಸಭೆಯಲ್ಲಿ ಮಸೂದೆಯ ಬಗ್ಗೆ ಸುಮಾರು ಐದೂವರೆ ತಾಸು ಚರ್ಚೆ ನಡೆಯಿತು. ಖಾಸಗಿ ಕ್ಷೇತ್ರವನ್ನೂ ಮೀಸ
ಲಾತಿ ವ್ಯಾಪ್ತಿಗೆ ತರಬೇಕು ಎಂಬ ಒತ್ತಾಯ ಚರ್ಚೆಯಲ್ಲಿ ಕೇಳಿ ಬಂತು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್‌ ಅವರು ಚರ್ಚೆಗೆ ಉತ್ತರಿಸುತ್ತಾ, ಸಂಸತ್ತು ಮಸೂದೆಯನ್ನು ಅವಿರೋಧವಾಗಿ ಅನುಮೋದಿಸಿದ ದಿನವು ಚರಿತ್ರಾರ್ಹ ಎಂದು ಹೇಳಿದರು.

ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀತಿ ಅನ್ವಯ ಆಗಬೇಕು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. ಸರ್ಕಾರದ ನೀತಿಗಳಿಂದಾಗಿ ಸಾರ್ವಜನಿಕ ವಲಯದಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ ಎಂದರು. ಖಾಸಗಿ ಕ್ಷೇತ್ರದಲ್ಲಿ ಮೀಸಲಾ
ತಿಯ ಮಸೂದೆಯನ್ನು ತನ್ನಿ. ಆ ಮಸೂದೆಯನ್ನೂ ಬೆಂಬಲಿಸುತ್ತೇವೆ ಎಂದು ಖರ್ಗೆ ಭರವಸೆ ಕೊಟ್ಟರು. ಹಿಂದುಳಿದ ವರ್ಗಗಳ ಏಳಿಗೆಗೆ ಕಾಂಗ್ರೆಸ್‌ ಪಕ್ಷವು ಮಾಡಿದ್ದು ಸಾಲದು ಎಂದು ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ಟೀಕಿಸಿದರು. ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಜನಸಂಘ ಅಥವಾ ಬಿಜೆಪಿ ನೇತೃತ್ವದ ಸರ್ಕಾರಗಳೇ ಕಾರಣ. ನರೇಂದ್ರ ಮೋದಿ ಅವರಲ್ಲದೆ ಬೇರೆ ಯಾರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಸಮುದಾಯಗಳ ಪರ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT