ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ರೋಗಿಗಳ ಸಂಪರ್ಕಿತರ ಪತ್ತೆಗೆ ಸಿಡಿಆರ್‌ ಬಳಕೆ

ಸುಳ್ಳು, ತಪ್ಪು ಮಾಹಿತಿ ನೀಡುತ್ತಿರುವ ಕೋವಿಡ್‌ 19 ಸೋಂಕಿತರು
Last Updated 17 ಆಗಸ್ಟ್ 2020, 14:34 IST
ಅಕ್ಷರ ಗಾತ್ರ

ಲಖನೌ: ಅಪರಾಧ ತನಿಖೆ ವೇಳೆ ಪೊಲೀಸರು ಹೆಚ್ಚಾಗಿ ಬಳಸುವಂಥ ಸಿಡಿಆರ್‌(ಕರೆ ದಾಖಲೆ) ಮಾಹಿತಿಯನ್ನು ಇದೀಗ ಕೋವಿಡ್‌–19 ಸಂಪರ್ಕಿತರ ಪತ್ತೆಗೆ ಉತ್ತರ ಪ್ರದೇಶದಲ್ಲಿ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾದರಿಯನ್ನು ಅನುಸರಿಸಿ ಕೋವಿಡ್‌–19 ಸಂಪರ್ಕಿತರ ಪತ್ತೆಗೆ ಕೇರಳ ಸರ್ಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಕ್ರಮ ‘ಜನರ ಗೋಪ್ಯತೆಯ ಅತಿಕ್ರಮ’ ಎಂದು ಈ ನಿರ್ಧಾರವನ್ನುವಿರೋಧಪಕ್ಷವಾದ ಕಾಂಗ್ರೆಸ್ ಟೀಕಿಸಿತ್ತು.

ಮಾಹಿತಿ ಮುಚ್ಚಿಡುತ್ತಿರುವ ರೋಗಿಗಳು: ‘ಕೆಲ ಸೋಂಕಿತರು ಚಿಕಿತ್ಸೆ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿಗಳಿಂದ ತಾವು ಸಂಪರ್ಕಿಸಿದವರ ಮಾಹಿತಿಯನ್ನು ಬೇಕೆಂದೇ ಮುಚ್ಚಿಡುತ್ತಾರೆ. ಇನ್ನೂ ಕೆಲವರು ಸುಳ್ಳು ಮಾಹಿತಿಯನ್ನು ನೀಡುತ್ತಾರೆ. ಇದರಿಂದಾಗಿ ಸಂಪರ್ಕಿತರ ಪತ್ತೆ ಸಮಸ್ಯೆಯಾಗಿದೆ. ಈ ಕಾರಣದಿಂದ ಸೋಂಕು ಹರಡುವುದನ್ನು ತಡೆಯಲು ಕಷ್ಟವಾಗಿದೆ’ ಎಂದು ಅಧಿಕಾರಿ ತಿಳಿಸಿದರು.

‘ಸಂಪರ್ಕಿತರನ್ನು ಪತ್ತೆಹಚ್ಚಲು ಅಗತ್ಯವಿದ್ದರೆ ಯಾವ ಮಾದರಿಯನ್ನಾದರೂ ಅನುಸರಿಸಿ ಎಂದು ಜಿಲ್ಲಾ ಪೊಲೀಸ್‌ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ತಿಳಸಿದರು. ‌

‘ಉದಾಹರಣೆಗೆ ಗಾಜಿಯಾಬಾದ್‌ನಲ್ಲಿ ಇಲ್ಲಿಯವರೆಗೂ 6,567 ಜನರಲ್ಲಿ ಕೋವಿಡ್‌–19 ದೃಢಪಟ್ಟಿದೆ. ಜಿಲ್ಲಾ ಪೊಲೀಸರು ಇಲ್ಲಿಯವರೆಗೂ 637 ಸಂಪರ್ಕಿತರನ್ನಷ್ಟೇ ಪತ್ತೆ ಹಚ್ಚಿದ್ದಾರೆ. ಸೋಂಕಿತರು ತಮ್ಮ ಸಂಪರ್ಕಿತರ ವಿಳಾಸ ಹಾಗೂ ಮೊಬೈಲ್‌ ಸಂಖ್ಯೆಯ ಸುಳ್ಳು ಮಾಹಿತಿ ನೀಡಿದ್ದರೆ ಅಥವಾ ಕರೆ ಮಾಡಿದಾಗ ಸಂಪರ್ಕಿತರು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದರೆ ಆ ವೇಳೆ ಜಿಲ್ಲಾ ನಿಯಂತ್ರಣ ಕೊಠಡಿಯವರು ಸಂಪರ್ಕಿತರನ್ನು ಪತ್ತೆ ಮಾಡಿಕೊಡುವಂತೆ ನಮಗೆ ಮಾಹಿತಿ ನೀಡುತ್ತಾರೆ. ಈ ಸಂದರ್ಭದಲ್ಲಿ ನಾವು ಸಿಡಿಆರ್‌ ಬಳಸುತ್ತೇವೆ’ ಎಂದು ಗಾಜಿಯಾಬಾದ್‌ ಎಸ್‌ಪಿ(ಅಪರಾಧ) ಜ್ಞಾನೇಂದ್ರ ಕುಮಾರ್‌ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT