ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಾಭಿಪ್ರಾಯ ಮರೆತು ಒಂದಾದ ಚಿಕ್ಕಪ್ಪ–ಮಗ: ಎಸ್‌ಪಿಯೊಂದಿಗೆ ಪಿಎಸ್‌ಪಿಎಲ್ ವಿಲೀನ

Last Updated 8 ಡಿಸೆಂಬರ್ 2022, 10:00 IST
ಅಕ್ಷರ ಗಾತ್ರ

ಲಖನೌ: ಮುಲಾಯಂ ಸಿಂಗ್‌ ಯಾದವ್‌ ಅವರ ತಮ್ಮ ಶಿವಪಾಲ್ ಸಿಂಗ್ ಯಾದವ್ ಅವರು ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) –ಪಿಎಸ್‌ಪಿಎಲ್ ಅನ್ನು ಸಮಾಜವಾದಿ ಪಕ್ಷದಲ್ಲಿ (ಎಸ್‌ಪಿ) ವಿಲೀನಗೊಳಿಸುವುದಾಗಿ ಗುರುವಾರ ಘೋಷಿಸಿದ್ದಾರೆ. ಈ ಮೂಲಕ ಎಸ್‌ಪಿ ಮತ್ತು ಯಾದವ್ ಕುಟುಂಬ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದೆ.

ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುವಾರ ಮಧ್ಯಾಹ್ನ ಸೈಫೈನಲ್ಲಿ ಶಿವಪಾಲ್ ಅವರ ಕಾರಿಗೆ ಎಸ್‌ಪಿ ಧ್ವಜವನ್ನು ಹಾಕಿದರು.

ಅಣ್ಣನ ಮಗ ಅಖಿಲೇಶ್ ಜೊತೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಶಿವಪಾಲ್ 2018 ರಲ್ಲಿ ಪಿಎಸ್‌ಪಿಎಲ್‌ ಅನ್ನು ಸ್ಥಾಪಿಸಿದ್ದರು.

ಭಿನ್ನಾಭಿಪ್ರಾಯಗಳಿಂದ ಸೊರಗಿದ್ದ ಎಸ್‌ಪಿ, ಉತ್ತರ ಪ್ರದೇಶ ರಾಜಕೀಯದಲ್ಲಿ ಅವನತಿಯ ಹಾದಿ ಹಿಡಿದಿತ್ತು. ಹಲವು ಚುನಾವಣೆಗಳಲ್ಲಿ ಮುಖಭಂಗ ಅನುಭವಿಸಿತ್ತು.

ಅಕ್ಟೋಬರ್‌ನಲ್ಲಿ ಮುಲಾಯಂ ಸಿಂಗ್ ಯಾದವ್ ನಿಧನರಾದ ನಂತರ ಈ ಇಬ್ಬರೂ ನಾಯಕರನ್ನು ಒಟ್ಟುಗೂಡಿಸುವ ಪ್ರಯತ್ನ ಕುಟುಂಬದಲ್ಲಿ ಆರಂಭವಾಗಿತ್ತು. ಅಂತಿಮವಾಗಿ ಪ್ರಯತ್ನಗಳು ಸಫಲಗೊಂಡಿವೆ.

ಪಿಎಸ್‌ಪಿಎಲ್ ನಾಯಕರಿಗೆ ಎಸ್‌ಪಿಯಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲು ಉಭಯ ನಾಯಕರು ಪರಸ್ಪರ ಒಪ್ಪಂದಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ವಿಲೀನದ ಬಗ್ಗೆ ಮಾತನಾಡಿರುವ ಶಿವಪಾಲ ಯಾದವ್‌, ‘ಪ್ರಗತಿಶೀಲ ಸಮಾಜವಾದಿ ಪಕ್ಷವನ್ನು ಎಸ್‌ಪಿಯೊಂದಿಗೆ ವಿಲೀನಗೊಳಿಸಿದ್ದೇವೆ. 2024ರಲ್ಲಿ ಒಗ್ಗಟ್ಟಾಗಿ ಹೋರಾಡುತ್ತೇವೆ. ಇಂದಿನಿಂದ ನನ್ನ ಕಾರಿನ ಮೇಲೆ ಸಮಾಜವಾದಿ ಪಕ್ಷದ ಧ್ವಜ ಇರಲಿದೆ’ ಎಂದು ಹೇಳಿದ್ದಾರೆ.

ಡಿಂಪಲ್‌ ಮುನ್ನಡೆ

ಮುಲಾಯಂ ಸಿಂಗ್‌ ಅವರ ನಿಧನದಿಂದ ತೆರವಾಗಿದ್ದ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಅಖಿಲೇಶ್‌ ಯಾದವ್‌ ಅವರ ಪತ್ನಿ ಡಿಂಪಲ್‌ 2,56,518 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ಡಿಂಪಲ್‌ 5,48,838 ಮತ ಗಳಿಸಿದ್ದರೆ, ಸಮೀಪ ಸ್ಪರ್ಧಿ ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯಾ 2,92,320 ಮತ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT