ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಭಾಷೆಗಳ ರಕ್ಷಣೆಗೆ ಕರೆ ನೀಡಿದ ಉಪ ರಾಷ್ಟ್ರಪತಿ

ತೆಲುಗಿನಲ್ಲಿ ವಿಚಾರಣೆ ನಡೆಸಿದ ಸಿಜೆಐ ನಡೆಯನ್ನು ಕೊಂಡಾಡಿದ ವೆಂಕಯ್ಯ ನಾಯ್ಡು 
Last Updated 31 ಜುಲೈ 2021, 10:11 IST
ಅಕ್ಷರ ಗಾತ್ರ

ದೆಹಲಿ: ಭಾರತೀಯ ಭಾಷೆಗಳನ್ನು ರಕ್ಷಿಸಲು ಮತ್ತು ಪುನಶ್ಚೇತನಗೊಳಿಸಲು ನವೀನ ಮತ್ತು ಸಹಭಾಗಿ ಪ್ರಯತ್ನಕ್ಕೆ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಶನಿವಾರ ಕರೆ ನೀಡಿದ್ದಾರೆ.

ಭಾಷೆಗಳನ್ನು ಉಳಿಸಿಕೊಳ್ಳಲು ಮತ್ತು ಅವುಗಳ ನಿರಂತರತೆಯನ್ನು ಕಾಪಾಡಿಕೊಳ್ಳಲು ಕೇವಲ ಜನಾಂದೋಲನದಿಂದ ಮಾತ್ರ ಸಾಧ್ಯ. ಭಾಷೆಯ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ತಲುಪಿಸುವ ಪ್ರಯತ್ನದಲ್ಲಿ ಜನರು ಒಗ್ಗೂಡಬೇಕಾಗಿದೆ ಎಂದು ಅವರು ಹೇಳಿದರು.

‘ಮಾತೃಭಾಷೆಗಳ ರಕ್ಷಣೆ’ ಕುರಿತು ‘ತೆಲುಗು ಕೂಟಮಿ’ ಆಯೋಜಿಸಿದ್ದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ನಾಯ್ಡು, ಭಾರತೀಯ ಭಾಷೆಗಳನ್ನು ಸಂರಕ್ಷಿಸಲು ಬೇಕಾದ ಜನ ಕೇಂದ್ರಿತ ಕ್ರಮಗಳನ್ನು ಉಲ್ಲೇಖಿಸಿದರು.

ಭಾಷೆಯೊಂದನ್ನು ಶ್ರೀಮಂತಗೊಳಿಸುವಲ್ಲಿ ಭಾಷಾಂತರವು ವಹಿಸುವ ಪಾತ್ರವನ್ನು ಅವರು ಪ್ರತಿಪಾದಿಸಿದರು. ಭಾರತೀಯ ಭಾಷೆಗಳಲ್ಲಿ ಅನುವಾದದ ಗುಣಮಟ್ಟ ಮತ್ತು ಪ್ರಮಾಣವನ್ನು ಸುಧಾರಿಸುವಲ್ಲಿ ಹೆಚ್ಚಿನ ಪ್ರಯತ್ನಗಳು ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪ್ರಾಚೀನ ಸಾಹಿತ್ಯವನ್ನು ಯುವಜನರಿಗೆ ಸರಳ ಮತ್ತು ಮಾತನಾಡುವ ಭಾಷೆಯಲ್ಲಿ ಹೆಚ್ಚು ಸುಲಭವಾಗಿ ಸಿಗುವಂತೆ ಮಾಡಬೇಕು. ಗ್ರಾಮೀಣ ಪ್ರದೇಶ ಮತ್ತು ವಿವಿಧ ಉಪಭಾಷೆಗಳಲ್ಲಿರುವ ಅಳಿವಿನಂಚಿನ, ಪುರಾತನ ಪದಗಳನ್ನು ಸಂಕಲಿಸಬೇಕು. ಆ ಮೂಲಕ ಅವುಗಳನ್ನು ರಕ್ಷಿಸಬೇಕು ಎಂದು ಅವರು ಸಲಹೆ ನೀಡಿದರು.

ಯಾರೊಬ್ಬರ ಮಾತೃಭಾಷೆ ನಶಿಸಿದರೆ, ಅದನ್ನು ಮಾತನಾಡುವವರ ಅಸ್ಮಿತೆ ಮತ್ತು ಸ್ವಾಭಿಮಾನವು ಅಳಿದಂತೆ. ಮಾತೃಭಾಷೆಯನ್ನು ರಕ್ಷಿಸಿದರೆ ಮಾತ್ರ ಅದರ ಜೊತೆಗಿನ ಸಂಗೀತ, ನೃತ್ಯ, ನಾಟಕ, ಸಂಪ್ರದಾಯಗಳು, ಹಬ್ಬಗಳು, ಜ್ಞಾನವೆಂಬ ಸಂಪ್ರದಾಯವನ್ನು ಸಂರಕ್ಷಿಸಲು ಸಾಧ್ಯ ಎಂದು ಅವರು ಹೇಳಿದರು.

ಸಿಜೆಐ ನಡೆ ಶ್ಲಾಘಿಸಿದ ಉಪ ರಾಷ್ಟಪತಿ

ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಇತ್ತೀಚಿನ ನಡೆಯನ್ನು ಅವರು ಶ್ಲಾಘಿಸಿದರು. ದಂಪತಿ ನಡುವಿನ 21 ವರ್ಷದ ವೈವಾಹಿಕ ವಿವಾದವನ್ನು ತೆಲುಗಿನಲ್ಲಿ ಸಮಾಲೋಚನೆ ನಡೆಸುವ ಮೂಲಕ ಸೌಹಾರ್ದಯುತವಾಗಿ ಅವರು ಬಗೆಹರಿಸಿದ್ದರು. ನ್ಯಾಯಮೂರ್ತಿಗಳ ಈ ಕ್ರಮವನ್ನು ಕಾರ್ಯಕ್ರಮದಲ್ಲಿ ಅವರು ಪ್ರಸ್ತಾಪಿಸಿದರು.

ಜನರು ತಮ್ಮ ಸಮಸ್ಯೆಗಳನ್ನು ತಮ್ಮ ಭಾಷೆಗಳಲ್ಲೇ ನ್ಯಾಯಾಲಯದಲ್ಲಿ ಹೇಳಿಕೊಳ್ಳುವುದು ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪು ನೀಡುವಂತಾಗಬೇಕಾದ ಅಗತ್ಯವನ್ನು ಈ ಪ್ರಕರಣವು ಒತ್ತಿಹೇಳುತ್ತದೆ ಎಂದು ನಾಯ್ಡು ಹೇಳಿದರು.

ಪ್ರಾಥಮಿಕ ಶಾಲಾ ಹಂತದವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರ ಮಹತ್ವ ಮತ್ತು ಆಡಳಿತದಲ್ಲಿ ಮಾತೃಭಾಷೆ ಇರುವುದರ ಅಗತ್ಯವನ್ನು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಮಾತೃಭಾಷೆಯ ಬಳಕೆಗೆ ಒತ್ತು ನೀಡುವ ದೂರದೃಷ್ಟಿಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎಇಪಿ) ಜಾರಿಗೆ ತಂದಿರುವ ಕೇಂದ್ರವನ್ನು ಅವರು ಇದೇ ವೇಳೆ ಶ್ಲಾಘಿಸಿದರು.

ಎಂಟು ರಾಜ್ಯಗಳ 14 ಎಂಜಿನಿಯರಿಂಗ್ ಕಾಲೇಜುಗಳು ಹೊಸ ಶೈಕ್ಷಣಿಕ ವರ್ಷದಿಂದ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್‌ಗಳನ್ನು ನೀಡುತ್ತಿರುವುದನ್ನು ಅವರು ಕೊಂಡಾಡಿದರು. ತಾಂತ್ರಿಕ ಕೋರ್ಸ್‌ಗಳಲ್ಲಿ ಭಾರತೀಯ ಭಾಷೆಗಳ ಬಳಕೆಯು ಕ್ರಮೇಣ ವೃದ್ಧಿಯಾಗಬೇಕು ಎಂದು ಅವರು ಹೇಳಿದರು.

ಮಾತೃಭಾಷೆಯನ್ನು ಸಂರಕ್ಷಿಸುವಲ್ಲಿ ವಿಶ್ವದ ವಿವಿಧ ಕಡೆಗಳಲ್ಲಿ ಅನುಸರಿಸಲಾಗುತ್ತಿರುವ ಉತ್ತಮ ಕ್ರಮಗಳನ್ನು ಭಾಷಾ ಪ್ರೇಮಿಗಳು, ಭಾಷಾಶಾಸ್ತ್ರಜ್ಞರು, ಶಿಕ್ಷಕರು, ಪೋಷಕರು ಮತ್ತು ಮಾಧ್ಯಮಗಳೂ ಅನುಸರಿಸಬೇಕು ಎಂದು ವೆಂಕಯ್ಯನಾಯ್ಡು ಅವರು ಸಲಹೆ ನೀಡಿದರು.

ಫ್ರಾನ್ಸ್, ಜರ್ಮನಿ ಮತ್ತು ಜಪಾನ್‌ನಂತಹ ದೇಶಗಳು ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಕಾನೂನಿನಂತಹ ಶಾಸ್ತ್ರಗಳನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಬೋಧಿಸುತ್ತಿವೆ. ಈ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲಿಯೂ ಇಂಗ್ಲೀಷ್ ಮಾತನಾಡುವ ದೇಶಗಳಿಗೆ ಈ ದೇಶಗಳು ತಮ್ಮ ಶಕ್ತಿ ತೋರಿಸಿವೆ ಎಂದೂ ಅವರು ಉದಾಹರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT