ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತದಲ್ಲಿ ಹಿಂಸೆ, ಪೊಲೀಸ್‌ ವಶಕ್ಕೆ ಸುವೆಂದು ಅಧಿಕಾರಿ: ಜನಜೀವನಕ್ಕೆ ಅಡ್ಡಿ

ಪೊಲೀಸ್‌ ವಶಕ್ಕೆ ಸುವೆಂದು ಅಧಿಕಾರಿ; ಪೊಲೀಸ್‌ ವಾಹನಕ್ಕೆ ಬೆಂಕಿ
Last Updated 13 ಸೆಪ್ಟೆಂಬರ್ 2022, 18:27 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಕೈಗೊಂಡಿದ್ದ ‘ನಬಾನ್ನ ಚಲೊ ಅಭಿಯಾನ’ (ರಾಜ್ಯ ಸಚಿವಾಲಯಕ್ಕೆ ಕಾಲ್ನಡಿಗೆ ಜಾಥಾ) ಮಂಗಳವಾರ ಹಿಂಸಾಚಾರಕ್ಕೆ ತಿರುಗಿತು. ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ನಡೆದ ಘರ್ಷಣೆ ತಾರಕಕ್ಕೇರಿ, ಕೋಲ್ಕತ್ತದ ಜನಜೀವನ ಅಸ್ತವ್ಯಸ್ತಗೊಂಡಿತು.

ಪ್ರತಿಭಟನಕಾರರು ನಗರದ ಕೇಂದ್ರ ಭಾಗದಲ್ಲಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿ, ಪೊಲೀಸರತ್ತ ಕಲ್ಲುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿ ಪ್ರತಿಭಟನಕಾರರನ್ನು ಚದುರಿಸಿದರು.

ಸುವೆಂದುವನ್ನು ವಶಕ್ಕೆ ಪಡೆದ ಪೊಲೀಸರು: ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಸತ್ರಗಚಿಗೆ ಹೊರಟಿದ್ದ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.ಅವರ ಜೊತೆಗೆ ಬಿಜೆಪಿ ಸಂಸದ ಲಾಕೆಟ್‌ ಚಟರ್ಜಿ ಮತ್ತು ಪಕ್ಷದ ಮುಖಂಡ ರಾಹುಲ್‌ ಸಿನ್ಹಾ ಅವರನ್ನೂ ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಬಿಜೆಪಿಯ ಸಹಸ್ರಾರು ಬೆಂಬಲಿಗರು ಕೋಲ್ಕತ್ತ ಮತ್ತು ಹೌರಾದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಜಮಾಯಿಸಿದ್ದರು.

ಪ್ರತಿಭಟನಕಾರರನ್ನು ತಡೆಯಲು ಹೌರಾದ ಹಲವು ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಪ್ರತಿಭಟನಕಾರರು ಬ್ಯಾರಿಕೇಡ್‌ಗಳನ್ನು ದಾಟಲು ಮುಂದಾದಾಗ ಪೊಲೀಸರು ಅಶ್ರುವಾಯ ಪ್ರಯೋಗಿಸಿದರು. ಈ ವೇಳೆ ಸಿಟ್ಟಿಗೆದ್ದ ಪ್ರತಿಭಟನಕಾರರು ಕೋಲ್ಕತ್ತದ ಲಾಲ್‌ಬಜಾರ್‌ನಲ್ಲಿ ಪೊಲೀಸ್‌ ವಾಹನವೊಂದಕ್ಕೆ ಬೆಂಕಿ ಹಚ್ಚಿದರು.

ಈ ಘರ್ಷಣೆಯಲ್ಲಿ ಬಿಜೆಪಿಯ ಮುಖಂಡರಾದ ಮೀನಾ ದೇವಿ ಪುರೋಹಿತ್‌, ಸ್ವಪನ್‌ ದಾಸ್‌ಗುಪ್ತಾ ಸೇರಿದಂತೆ 363 ಕಾರ್ಯಕರ್ತರು ಗಾಯಗೊಂಡಿದ್ದಾರೆ. ಅವರಲ್ಲಿ 35 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಜೆಪಿಯ ರಾಜ್ಯ ಘಟಕದ ವಕ್ತಾರರಾದ ಸಮಿಕ್‌ ಭಟ್ಟಾಚಾರ್ಯ ತಿಳಿಸಿದ್ದಾರೆ.

‘ನೀವೊಬ್ಬ ಮಹಿಳೆ, ನನ್ನನ್ನು ಮುಟ್ಟಬೇಡಿ’

‘ನನ್ನನ್ನು ಮುಟ್ಟಬೇಡಿ. ನೀವೊಬ್ಬ ಮಹಿಳೆ’ ಎಂದು ಸುವೆಂದು ಅಧಿಕಾರಿ ಅವರು ತಮ್ಮನ್ನು ವಶಕ್ಕೆ ಪಡೆಯಲು ಬಂದಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಹೇಳಿದರು. ‘ನಾನು ಕಾನೂನಿಗೆ ತಲೆಬಾಗುವ ವ್ಯಕ್ತಿ. ಪುರುಷ ಸಿಬ್ಬಂದಿಯನ್ನು ನನ್ನ ಬಳಿ ಕಳುಹಿಸಿ’ ಎಂದು ತಿಳಿಸಿದರು. ಬಳಿಕ ಡಿಸಿಪಿ (ದಕ್ಷಿಣ) ಅಕಾಶ್‌ ಮಘಾರಿಯ ಅವರು ಬಂದು ಸುವೆಂದು ಅವರನ್ನು ಪೊಲೀಸ್‌ ವಾಹನದ ಬಳಿ ಕರೆದುಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT