ಸೋಮವಾರ, ಅಕ್ಟೋಬರ್ 19, 2020
24 °C
ಬಿಜೆಪಿ ನಾಯಕರಿಗೆ ಒತ್ತಾಯ

ವಾಸ್ತವ ಸ್ಥಿತಿ ಅರಿಯಲು ಬಾರನ್‌ಗೆ ಭೇಟಿ ನೀಡಿ: ಗೆಹ್ಲೋಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಪುರ: ರಾಜಸ್ಥಾನದ ಬಾರನ್‌ ಜಿಲ್ಲೆಗೆ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಯಾಕೆ ಭೇಟಿ ನೀಡಲಿಲ್ಲವೆಂದು ಕೇಳುವ ಬದಲು ಬಿಜೆಪಿಯ ಹಿರಿಯ ನಾಯಕರೇ ಅಲ್ಲಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಬೇಕು ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಶುಕ್ರವಾರ ಆಗ್ರಹಿಸಿದ್ದಾರೆ.

ಬಾರನ್‌ ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆರೋಪವಿದೆ.

ಉತ್ತರಪ್ರದೇಶದ ಹಾಥರಸ್‌ನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಕುಟುಂಬದವರನ್ನು ಭೇಟಿ ಮಾಡಲು ರಾಹುಲ್‌ ಮತ್ತು ಪ್ರಿಯಾಂಕ ಅಲ್ಲಿಗೆ ತೆರಳುತ್ತಿದ್ದಾಗ ಬಂಧನಕ್ಕೆ ಒಳಗಾಗಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಪಾತ್ರ ಬಹಳ ಮುಖ್ಯ. ಉತ್ತರಪ್ರದೇಶ ಸರ್ಕಾರ ಕೆಲವು ಅಂಶಗಳು ಜನರಿಗೆ ಗೊತ್ತಾಗದಂತೆ ಮಾಡಲು ಹೊರಟಿದೆ. ರಾಹುಲ್‌ ಮತ್ತು ಪ್ರಿಯಾಂಕಾ ಅವರನ್ನು ಬಂಧಿಸುವ ಮೂಲಕ ಇದು ಸಾಬೀತಾಗಿದೆ ಎಂದರು.

‘ನಾವು ಹೇಳಿದ್ದನ್ನು ಮತ್ತು ವರದಿಗಳನ್ನು ರಾಹುಲ್‌, ಪ್ರಿಯಾಂಕಾ ನಂಬುತ್ತಾರೆ. ಬಿಜೆಪಿಯ ಅಮಿತ್‌ಷಾ ಅಥವಾ ಧರ್ಮೇಂದ್ರ ಪ್ರಧಾನ್‌ ಅವರಂತಹ ನಾಯಕರು ಬಾರನ್‌ ಜಿಲ್ಲೆಗೆ ಯಾಕೆ ಭೇಟಿ ನೀಡಬಾರದು ಅಥವಾ ರಾಜ್ಯದ ಯಾವುದೇ ಭಾಗಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿಯಬೇಕು‘ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗೆಹ್ಲೋಟ್‌ ಹೇಳಿದ್ದಾರೆ.

‘ಜಿಲ್ಲೆಗೆ ಭೇಟಿ ನೀಡಲು ಅವರಿಗೆ ಅವಕಾಶ ಮಾಡಿಕೊಡುವುದಷ್ಟೇ ಅಲ್ಲ. ಅಗತ್ಯವಾದರೆ ಪೊಲೀಸ್‌ ರಕ್ಷಣೆಯನ್ನೂ ಒದಗಿಸುತ್ತೇವೆ‘ ಎಂದಿದ್ದಾರೆ.

ಪೊಲೀಸರ ಪ್ರಕಾರ, ಬಾರನ್‌ ಜಿಲ್ಲೆಯ ಇಬ್ಬರು ಬಾಲಕಿಯರು ಸೆ.19ರಂದು ಕಾಣೆಯಾಗಿದ್ದರು. ನಂತರ 22ರಂದು ಕೋಟಾದಲ್ಲಿ ಇವರನ್ನು ಪತ್ತೆ ಮಾಡಲಾಗಿತ್ತು. ಬಾಲಕಿಯರನ್ನು ಕುಟುಂಬದವರ ವಶಕ್ಕೆ ಒಪ್ಪಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದ ಬಗ್ಗೆ ದೃಢಪಟ್ಟಿಲ್ಲ.

‘ಘಟನೆಗಳು ಎಲ್ಲಾದರೂ ನಡೆಯಬಹುದು. ಆದರೆ ಮುಖ್ಯವಾದುದು ಸೂಕ್ತ ಕ್ರಮ ಕೈಗೊಳ್ಳುವುದು. ಕ್ರಮ ಕೈಗೊಳ್ಳದೇ ಇರುವುದಕ್ಕೆ ಹಾಥರಾಸ್‌ ನಿದರ್ಶನ‘ ಎಂದು ಗೆಹ್ಲೋಟ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು