ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1971ರ ಯುದ್ಧದಲ್ಲಿ ಕರಾಚಿ ಬಂದರು ಉಡಾಯಿಸಿ ಬಂದಿದ್ದ ಸಮರವೀರ ಗೋಪಾಲ ರಾವ್‌ ನಿಧನ

Last Updated 9 ಆಗಸ್ಟ್ 2021, 14:44 IST
ಅಕ್ಷರ ಗಾತ್ರ

ಚೆನ್ನೈ: 1971ರ ಸಮರ ವೀರ, ಮಹಾವೀರ ಚಕ್ರ ಪುರಸ್ಕೃತ ಕಾಮೊಡೋರ್ (ನೌಕಾಪಡೆಯ ಉನ್ನತ ಅಧಿಕಾರಿ) ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ ರಾವ್ ಸೋಮವಾರ ಕೊನೆಯುಸಿರೆಳೆದರು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಅವರು ಭಾನುವಾರವೇ ನಿಧನರಾದರೆಂದು ಮೂಲಗಳು ಈ ಮೊದಲು ಹೇಳಿದ್ದವು. ಆದರೆ, ಸೋಮವಾರ ಇಹಲೋಕ ತ್ಯಜಿಸಿದ್ದಾಗಿ ಸ್ಪಷ್ಟಪಡಿಸಲಾಗಿದೆ. ಗೋಪಾಲ ರಾವ್‌ ಅವರಿಗೆ 94ವರ್ಷಗಳಾಗಿತ್ತು. ನೌಕಾಪಡೆಯ ನಿವೃತ್ತ ಸೇನಾನಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗನನ್ನು ಅವರು ಅಗಲಿದ್ದಾರೆ.

ರಾವ್ ಅವರು ವಿಶಿಷ್ಟ ಸೇವಾ ಪದಕಕ್ಕೂ ಭಾಜನರಾಗಿದ್ದರು.

ಈಗಿನ ಬಾಂಗ್ಲಾದೇಶವನ್ನು (ಪೂರ್ವ ಪಾಕಿಸ್ತಾನ) ಮುಕ್ತಿಗೊಳಿಸುವ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.

‘ಆಪರೇಷನ್‌ ಕ್ಯಾಕ್ಟಸ್ ಲಿಲ್ಲಿ’ ಎಂಬ ಕಾರ್ಯಾಚರಣೆಯ ಹೊಣೆ ಹೊತ್ತಿದ್ದ ಪಶ್ಚಿಮ ನೌಕಾಪಡೆಯ ತಂಡವೊಂದರ ನೇತೃತ್ವ ವಹಿಸಿಕೊಂಡಿದ್ದ ಗೋಪಾಲ ರಾವ್ ಅವರು, ಕರಾಚಿ ಕರಾವಳಿಯ ಮೇಲೆ ಅಕ್ರಮಣ ನಡೆಸಿದ್ದರು. ‌

ವಾಯುದಾಳಿ, ಜಲಾಂತರ್ಗಾಮಿಗಳ ಭೀತಿ ಮತ್ತು ಇನ್ನಿತರೆ ಯಾವುದೇ ದಾಳಿಗಳನ್ನೂ ಲೆಕ್ಕಿಸದೇ, 1971ರ ಡಿ.4ರಂದು ರಾತ್ರಿ ನೌಕಾದಳದ ಒಂದು ಗುಂಪನ್ನು ಪಾಕಿಸ್ತಾನದ ಜಲಪ್ರದೇಶಕ್ಕೆ ಕೊಂಡೊಯ್ದಿದ್ದ ರಾವ್‌, ಕರಾಚಿ ಕರಾವಳಿಯನ್ನು ಉಡಾಯಿಸಿದ್ದರು.

ಭಾರತೀಯ ನೌಕೆಗಳು ಮತ್ತು ಸಿಬ್ಬಂದಿಗಳ ಮೇಲಿನ ಶತ್ರುಗಳ ಗುಂಡಿನ ದಾಳಿಯನ್ನು ಎದುರಿಸುತ್ತಲೇ ಕಮಾಂಡರ್‌ ರಾವ್‌ ಅವರು ಒಂದು ಡೆಸ್ಟ್ರಾಯರ್‌ ಯುದ್ಧನೌಕೆ ಮತ್ತು ಮೈನ್ ಸ್ವೀಪರ್ (ನೆಲಬಾಂಬ್‌ ರೀತಿಯ ಜಲಾಂತರ್ಗಾಮಿ ಬಾಂಬ್‌ ಪತ್ತೆ ಮಾಡುವ ನೌಕೆ)ಮೇಲೆ ದಾಳಿ ನಡೆಸಿ, ಅವುಗಳನ್ನು ಸಮುದ್ರದಲ್ಲಿ ಮುಳುಗಿಸಿದ್ದರು.

ಇದಾದ ನಂತರ, ಗೋಪಾಲ ರಾವ್‌ ಅವರು ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿ ನಡೆಸಿದರು ಮತ್ತು ಅಲ್ಲಿನ ತೈಲ ಮತ್ತು ಇತರ ಕಟ್ಟಡಗಳನ್ನು ಸುಟ್ಟು ಭಸ್ಮ ಮಾಡಿ ಬಂದಿದ್ದರು. ಅವರು ತಮ್ಮ ಕಾರ್ಯಾಚರಣೆಯಲ್ಲಿ ಶೌರ್ಯ, ಸಾಹಸ ಮತ್ತು ಅತ್ಯುತ್ತಮ ನಾಯಕತ್ವ ಪ್ರದರ್ಶಿಸಿದ್ದರು ಎಂದು ನೌಕಾಪಡೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT