ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಿತಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ: ಪ್ರಧಾನಿ ಮೋದಿ

Last Updated 4 ಫೆಬ್ರುವರಿ 2021, 8:13 IST
ಅಕ್ಷರ ಗಾತ್ರ

ನವದೆಹಲಿ: ರೈತರ ಹಿತದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಮಂಡಿಗಳನ್ನು ಲಾಭದಾಯಕವಾಗಿಸಲು, ಇನ್ನೂ 1,000 ಮಂಡಿಗಳನ್ನು ಇ-ನಾಮ್‌ (ರಾಷ್ಟ್ರೀಯ ಕೃಷಿ ಮಾರುಕಟ್ಟೆ) ವ್ಯವಸ್ಥೆಗೆ ಜೋಡಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ'ಚೌರಿ ಚೌರಾ' ಘಟನೆಯ ಶತಮಾನೋತ್ಸವದ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯು ಹೆಚ್ಚಿನ ಮಹತ್ವ ಗಿಟ್ಟಿಸಿದೆ.

ದೇಶದ ಪ್ರಗತಿಯ ಹಿಂದೆ ರೈತರ ಪಾತ್ರವಿದೆ. ಚೌರಿ ಚೌರಾ ಹೋರಾಟದಲ್ಲೂ ರೈತರು ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ ಆರು ವರ್ಷಗಳಲ್ಲಿ ರೈತರನ್ನು ಸ್ವಾವಲಂಬಿಯನ್ನಾಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಫಲವಾಗಿ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲೂ ಕೃಷಿ ಕ್ಷೇತ್ರವು ಬೆಳವಣಿಗೆ ಸಾಧಿಸಿದೆಎಂದು ಹೇಳಿದರು.

ಚೌರಿ ಚೌರಾ ಹುತಾತ್ಮರ ಬಗ್ಗೆ ಹೆಚ್ಚು ಚರ್ಚಿಸಲ್ಪಡದಿರುವುದು ದುರದೃಷ್ಟಕರ. ಇತಿಹಾಸ ಪುಟಗಳಲ್ಲೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿಲ್ಲ. ಆದರೆ ಅವರ ರಕ್ತವು ಈ ಮಣ್ಣಿನಲ್ಲಿದ್ದು, ನಮಗೆ ಸದಾ ಸ್ಫೂರ್ತಿ ತುಂಬಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ದೇಶದ ಏಕತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಲ್ಲರೂ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕೆಂದು ನಾಗರಿಕರಿಗೆ ಕರೆ ನೀಡಿದರು. ಈ ಒಂದು ಭಾವನೆಯೊಂದಿಗೆ ದೇಶದ ಪ್ರತಿಯೊಬ್ಬ ನಾಗರಿಕನೂ ಮುಂದುವರಿಯಬೇಕಾಗಿದೆ ಎಂದವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT