ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಡ್ರೋನ್‌ಗಳಿಂದ ಶಸ್ತ್ರಾಸ್ತ್ರ ಪೂರೈಕೆ: ಜಮ್ಮು–ಕಾಶ್ಮೀರದ 8 ಕಡೆ ಎನ್ಐಎ ಶೋಧ

Last Updated 19 ಆಗಸ್ಟ್ 2022, 6:59 IST
ಅಕ್ಷರ ಗಾತ್ರ

ಶ್ರೀನಗರ: ಪಾಕಿಸ್ತಾನದ ಡ್ರೋನ್‌ಗಳ ಮೂಲಕ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸುತ್ತಿರುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಜಮ್ಮು ಮತ್ತು ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಶೋಧ ನಡೆಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ರವಾನೆಗೆ ಲಷ್ಕರ್-ಎ-ತಯಬಾ (ಎಲ್‌ಇಟಿ)ದ ಶಾಖೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್‌‌ (ಟಿಆರ್‌ಎಫ್)‘ನ ಪ್ರಮುಖ ಘಟಕ ಬಳಸುತ್ತಿರುವ ಡ್ರೋನ್‌ನ ಪ್ರತಿಬಂಧಕ್ಕೆ ಸಂಬಂಧಿಸಿದಂತೆ ಶೋಧ ನಡೆಯಿತು. ಜಮ್ಮು, ಶ್ರೀನಗರ, ಕಥುವಾ, ಸಾಂಬಾ ಮತ್ತು ದೋಡಾ ಜಿಲ್ಲೆಗಳ ಎಂಟು ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಟಿಆರ್‌ಎಫ್ ಸದಸ್ಯರು ಪಾಕಿಸ್ತಾನದಲ್ಲಿರುವವರ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

‘ಇಂದು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ವಿವಿಧ ವಸ್ತುಗಳು, ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎನ್ಐಎ ಹೇಳಿದೆ.

‘ಟಿಆರ್‌ಎಫ್ ಸದಸ್ಯರು ಎಲ್‌ಇಟಿ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಾಂಬಾದಲ್ಲಿನ ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ಭಾರತೀಯ ಭೂಪ್ರದೇಶದಲ್ಲಿ ಡ್ರೋನ್‌ಗಳ ಮೂಲಕ ಬರುವ ಶಸ್ತ್ರಾಸ್ತ್ರ ಮತ್ತು ಇತರ ಭಯೋತ್ಪಾದಕ ಸಲಕರಣೆಗಳನ್ನು ಅವರು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ವಕ್ತಾರರು ತಿಳಿಸಿದ್ದಾರೆ.

‘ಡ್ರೋನ್‌ಗಳ ಮೂಲಕ ಪಡೆಯಲಾದ ಶಸ್ತ್ರಾಸ್ತ್ರಗಳನ್ನು ಕಾಶ್ಮೀರದ ಅಲ್ಪಸಂಖ್ಯಾತರು, ವಲಸಿಗರು ಮತ್ತು ಭದ್ರತಾ ಪಡೆಗಳ ಮೇಲಿನ ಭಯೋತ್ಪಾದಕ ದಾಳಿಗಾಗಿ ಟಿಆರ್‌ಎಫ್ ಭಯೋತ್ಪಾದಕರಿಗೆ ರವಾನೆ ಮಾಡಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.

ಈ ಪ್ರಕರಣವನ್ನು ಮೊದಲಿಗೆ ಮೇ 29 ರಂದು ಕಥುವಾದಲ್ಲಿನ ರಾಜ್‌ಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು ಮತ್ತು ಜುಲೈ 30 ರಂದು ಎನ್‌ಐಎಗೆ ವಹಿಸಲಾಗಿದೆ.

ಮರ್ಹೀನ್ ಪ್ರದೇಶದ ನಾಲ್ಕು ಮನೆಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ ಎಂದು ಕಥುವಾ ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ, ದೋಡಾ ಜಿಲ್ಲೆಯ ಖರೋವಾ-ಭಲ್ಲಾದಲ್ಲಿರುವ ಮನೆ ಮತ್ತು ಜಮ್ಮುವಿನ ತಾಲಾಬ್ ಖಟಿಕನ್‌ನಲ್ಲಿ ದಾಳಿ ನಡೆಸಲಾಯಿತು.

ಕಳೆದ ತಿಂಗಳು, ಪೊಲೀಸರು ಎಲ್‌ಇಟಿಯ ಏಳು ಸದಸ್ಯರನ್ನು ಬಂಧಿಸಿ, ಅವರ ಕಾರ್ಯಸೂಚಿಯನ್ನು ವಿಫಲಗೊಳಿಸಿದ್ದರು. ಏಳು ಮಂದಿ ಪೈಕಿ, ತಂಡದ ನಾಯಕ ಖಟಿಕನ್ ತಲಾಬ್‌ನ ಫೈಸಲ್ ಮುನೀರ್ ಕೂಡ ಒಬ್ಬನಾಗಿದ್ದ.

ತಂಡದ ರಹಸ್ಯ ಕಾರ್ಯಸೂಚಿಯು ಎರಡು ವರ್ಷಗಳಿಂದ ಜಾರಿಯಲ್ಲಿತ್ತು. ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನದ ಕಡೆಯಿಂದ ಡ್ರೋನ್‌ಗಳ ಮೂಲಕ ಬರುವ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಸಂಗ್ರಹಿಸುವುದು ಈ ತಂಡದ ಕೆಲಸವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT