ಬುಧವಾರ, ಆಗಸ್ಟ್ 10, 2022
24 °C

ನದಿಗಳಲ್ಲಿ ತೇಲಿಬರುವ ಶವಗಳು: ಪಶ್ಚಿಮ ಬಂಗಾಳದಲ್ಲಿ ಕಟ್ಟೆಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಉತ್ತರ ಪ್ರದೇಶ ಮತ್ತು ಬಿಹಾರದಿಂದ ಗಂಗಾ ನದಿಯಲ್ಲಿ ತೇಲಿಬರುವ ಶವಗಳು ಮಾಲ್ಡಾ ಜಿಲ್ಲೆಯ ಮೂಲಕ ಪಶ್ಚಿಮ ಬಂಗಾಳದೊಳಕ್ಕೆ ಬರುವ ಸಾಧ್ಯತೆ ಇದೆ. ಹಾಗೇನಾದರೂ ಶವಗಳು ಬಂದರೆ ಅವುಗಳನ್ನು ಸಂಗ್ರಹಿಸಿ, ಕೋವಿಡ್‌ ಪರೀಕ್ಷೆ ನಡೆಸಿ, ಬಳಿಕ ಗೌರವಯುತವಾಗಿ ಅಂತಿಮ ಸಂಸ್ಕಾರ ನೆರವೇರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಮಾಲ್ಡಾದ ಮಾನಿಕಚಕ ಪ್ರದೇಶದ ಮೂಲಕ ಗಂಗಾನದಿಯು ರಾಜ್ಯವನ್ನು ಪ್ರವೇಶಿಸುತ್ತದೆ. ಇಲ್ಲಿ ನದಿಯ ಹರಿವಿನ ಮೇಲೆ ನಿಗಾ ಇಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಅಲ್ಲದೆ, ಕಾಲಿಚಕ್ ಎರಡು ಮತ್ತು ಮೂರನೇ ಬ್ಲಾಕ್‌ನ ಪೊಲೀಸರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಈ ಸೂಚನೆ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸ್ಥಳೀಯವಾಗಿ ದೋಣಿಗಳನ್ನು ನಡೆಸುವವರಿಗೆ ಪಿಪಿಇ ಕಿಟ್ ಹಾಗೂ ಇತರ ಸೌಲಭ್ಯಗಳೊಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಅವರು ನದಿಯ ಹರಿವಿನ ಮೇಲೆ ನಿಗಾ ಇಟ್ಟಿದ್ದಾರೆ. ಸರ್ಕಾರವು ಕೇಂದ್ರದ ಗುಪ್ತಚರ ಸಂಸ್ಥೆಗಳ ಜತೆಗೆ ನಿರಂತರ ಸಂಪರ್ಕದಲ್ಲಿದೆ. ಶವಗಳು ಇರುವ ಸ್ಥಳದ ಬಗ್ಗೆ ನಿರಂತರ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ವಿಪತ್ತು ನಿರ್ವಹಣಾ ಪಡೆಗಳ ಸ್ಪೀಡ್‌ ಬೋಟ್‌ಗಳನ್ನು ಸಹ ಈ ಕಾರ್ಯಕ್ಕೆ ಬಳಸಲಾಗುವುದು ಎಂದು ಸರ್ಕಾರ ಹೇಳಿದೆ.

ನದಿ ದಂಡೆಯಲ್ಲಿ ಕಣ್ಗಾವಲು: (ಲಖನೌ ವರದಿ) ಉತ್ತರಪ್ರದೇಶದ ಕೆಲವು ನಗರಗಳಲ್ಲಿ ಕೋವಿಡ್‌ನಿಂದ ಸತ್ತವರ ಮೃತದೇಹಗಳನ್ನು ನದಿದಂಡೆಯಲ್ಲಿ ಹೂತುಹಾಕಲಾಗಿದೆ ಎಂಬ ಆರೋಪವನ್ನು ನಿರಾಕರಿಸಿರುವ ಸರ್ಕಾರವು, ಶವಗಳನ್ನು ನದಿಗೆ ಎಸೆಯುವುದನ್ನು ತಪ್ಪಿಸಲು ನದಿ ದಂಡೆಯಲ್ಲಿ ಕಣ್ಗಾವಲು ಇಡಲಾಗಿದೆ ಎಂದು ತಿಳಿಸಿದೆ.

ಬಿಹಾರದ ಬಕ್ಸರ್‌ ಹಾಗೂ ಉತ್ತರಪ್ರದೇಶ ಗಾಜಿಪುರ ಜಿಲ್ಲೆಯ ಬಲಿಯಾದಲ್ಲಿ ಗಂಗಾನದಿಯಲ್ಲಿ ನೂರಾರು ಶವಗಳು ಹರಿದು ಬಂದಿರುವುದು ಪತ್ತೆಯಾದ ಬಳಿಕ ನದಿ ದಂಡೆಯಲ್ಲಿ ಕಣ್ಗಾವಲಿಡಲು ಸರ್ಕಾರ ತೀರ್ಮಾನಿಸಿದೆ.

‘ಇದು (ಶವಗಳನ್ನು ನದಿಯಲ್ಲಿ ಹರಿಬಿಡುವುದು) ನಮ್ಮ ಸಂಪ್ರದಾಯವಲ್ಲ. ಸತ್ತವರ ಅಂತ್ಯ ಸಂಸ್ಕಾರವನ್ನು ಸಂಪ್ರದಾಯದಂತೆ ಮಾಡಬೇಕು. ಅವರನ್ನು ನದಿದಂಡೆಯಲ್ಲಿ ಹೂಳಬಾರದು’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

‘ನದಿ ದಂಡೆಯಲ್ಲಿ ಮೂರರಿಂದ ನಾಲ್ಕು ಅಡಿ ಆಳದ ಗುಂಡಿಗಳನ್ನು ತೋಡಿ, ನೂರಾರು ಶವಗಳನ್ನು ಹೂಳಲಾಗಿದೆ. ಮಳೆಗಾಲ ಆರಂಭವಾಗಿ, ನದಿಯು ಉಕ್ಕಿ ಹರಿಯುವಾಗ ಈ ಶವಗಳು ನದಿಯಲ್ಲಿ ತೇಲಿಬರುವ ಸಾಧ್ಯತೆ ಇದೆ’ ಎಂದು ನದಿ ಸಮೀಪದ ನಿವಾಸಿಯೊಬ್ಬರು ಹೇಳಿದ್ದಾರೆ.

ಈಮಧ್ಯೆ, ಉನ್ನಾವ್ ಜಿಲ್ಲೆಯಲ್ಲೂ ಗಂಗಾನದಿಯಲ್ಲಿ ನೂರಾರು ಶವಗಳು ಹರಿದು ಬಂದಿವೆ ಎಂಬ ವರದಿಯನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಕೋವಿಡ್‌ನಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸತ್ತಿದ್ದಾರೆ ಎಂಬ ವರದಿಯನ್ನೂ ಅವರು ಅಲ್ಲಗಳೆದಿದ್ದಾರೆ.

ಮಾನವ ಹಕ್ಕು ಆಯೋಗದ ನೋಟಿಸ್‌
ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಗಂಗಾ ನದಿಯಲ್ಲಿ ಹೆಣಗಳು ತೇಲಿಕೊಂಡು ಬಂದಿವೆ ಎಂಬುದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಗಮನ ಸೆಳೆದಿದೆ. ಈ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. 

ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿಗೆ ನೋಟಿಸ್‌ ನೀಡಲಾಗಿದೆ. ಕ್ರಮ ಕೈಗೊಂಡ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ತಿಳಿಸಲಾಗಿದೆ. 

‘ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮತ್ತು ಅರೆ ಸುಟ್ಟ ಅಥವಾ ಸುಡದ ದೇಹಗಳನ್ನು ಗಂಗಾ ನದಿಗೆ ಹಾಕುವುದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದೂ ಆಯೋಗವು ಹೇಳಿದೆ. 

**
ಯೋಗಿ ಸರ್ಕಾರವು ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ಸಾವಿನ ಮಾಹಿತಿಯನ್ನು ಮುಚ್ಚಿಡುತ್ತಿದೆ. ಈ ವಿಚಾರದಲ್ಲಿ ನ್ಯಾಯಾಂಗ ತನಿಖೆ ಆಗಲೇಬೇಕಾಗಿದೆ.
-ಪ‍್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು