ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ 106 ಕೋಟಿ ಡೋಸ್ ಯಾವಾಗ ನೀಡುತ್ತೀರಿ:ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ

100 ಕೋಟಿ ಲಸಿಕೆ ಸಂಭ್ರಮಾಚರಣೆಯಲ್ಲಿರುವ ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ
Last Updated 22 ಅಕ್ಟೋಬರ್ 2021, 19:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ ಲಸಿಕೆ ವಿಚಾರದಲ್ಲಿ ಅರ್ಧಸತ್ಯವನ್ನಷ್ಟೇ ಹೇಳಿ, ದೇಶದ ಜನರ ದಿಕ್ಕುತಪ್ಪಿಸುತ್ತಿದ್ದಾರೆ. ಇದು ಅಪಾಯಕಾರಿ ಎಂದು ಕಾಂಗ್ರೆಸ್ ಆರೋಪಿಸಿದೆ.

ಕೋವಿಡ್‌ ಲಸಿಕೆಯ ನೂರು ಕೋಟಿ ಡೋಸ್‌ಗಳನ್ನು ನೀಡಿದ ಮರುದಿನದೇಶವನ್ನು ಉದ್ದೇಶಿಸಿ ಮೋದಿ ಅವರು ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್‌, ಹಲವು ಪ್ರಶ್ನೆಗಳನ್ನು ಪ್ರಧಾನಿ ಎದುರಿಗೆ ಇರಿಸಿದೆ.

‘ದೇಶದ ಶೇ 21ರಷ್ಟು ಜನರು ಮಾತ್ರವೇ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ದೇಶದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡೂ ಡೋಸ್‌ ಲಸಿಕೆ ನೀಡುತ್ತೇವೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಈಗ ಉಳಿದಿರುವ 70 ದಿನಗಳಲ್ಲಿ ಹೇಗೆ 106 ಕೋಟಿ ಡೋಸ್‌ ಲಸಿಕೆ ನೀಡಬೇಕಿದೆ. ಈ ಎಪ್ಪತ್ತು ದಿನಗಳಲ್ಲಿ ದೇಶದ ಎಲ್ಲಾ ವಯಸ್ಕರಿಗೆ ಲಸಿಕೆ ನೀಡಲಾಗುವುದು ಎಂಬುದರ ಬಗ್ಗೆ ಪ್ರಧಾನಿ ಶ್ವೇತಪತ್ರ ಹೊರಡಿಸಲಿ’ ಎಂದು ಕಾಂಗ್ರೆಸ್ ನಾಯಕ ಗೌರವ್ ವಲ್ಲಭ್ ಸವಾಲು
ಹಾಕಿದ್ದಾರೆ.

‘ವಿಶ್ವದಲ್ಲಿ 50 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ದೇಶಗಳು ಎರಡು ಮಾತ್ರ. 100 ಕೋಟಿ ಲಸಿಕೆ ನೀಡಿರುವ ಏಕೈಕ ಮತ್ತು ಮೊದಲ ದೇಶ ಭಾರತ ಎಂದು ಮೋದಿ ಅವರು ಸುಳ್ಳು ಹೇಳುತ್ತಿದ್ದಾರೆ. ಆದರೆ, ನಮಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಸೆಪ್ಟೆಂಬರ್ ಅಂತ್ಯದ ವೇಳೆಗೆ 216 ಕೋಟಿ ಡೋಸ್‌ಗಳಷ್ಟು ಲಸಿಕೆ ನೀಡಿದೆ. ಚೀನಾ ತನ್ನ ಜನಸಂಖ್ಯೆಯ ಶೇ 80ರಷ್ಟು ಜನರಿಗೆ ಎರಡೂ ಡೋಸ್‌ಗಳನ್ನು ನೀಡಿದೆ. ತನ್ನ ಒಟ್ಟು ಜನಸಂಖ್ಯೆಯ ಶೇ 21ರಷ್ಟು ಜನರಿಗೆ ಮಾತ್ರ ಎರಡೂ ಡೋಸ್‌ ಲಸಿಕೆ ನೀಡಿರುವ ಪ್ರಧಾನಿ ಮೋದಿ ಅವರ ಸರ್ಕಾರ ಲಸಿಕೆ ಮಹೋತ್ಸವವನ್ನು ಸಂಭ್ರಮಿಸುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.

‘ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಜನರಿಗೆ ಉಪಯೋಗವಾಗುವ ಯಾವುದಾದರೂ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದು ನಿರೀಕ್ಷಿಸಿದ್ದೆವು. ದೇಶದಲ್ಲಿ ಬೆಲೆ ಏರಿಕೆಯಾಗುತ್ತಿದೆ, ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಆದರೆ ಮೋದಿ ಅವರು ಈ ಯಾವುದರ ಬಗ್ಗೆಯೂ ಮಾತನಾಡಲಿಲ್ಲ. ಬದಲಿಗೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.

2021ರ ಜನವರಿಯಿಂದ ಈವರೆಗೆ ಇಂಧನದ ಬೆಲೆ ಶೇ 29ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಪ್ರಧಾನಿ ಮೋದಿ ಅವರ ಕೆಲವು ಕಾರ್ಪೊರೇಟ್ ಗೆಳೆಯರ ಆದಾಯ ಹೊರತುಪಡಿಸಿ, ಬೇರೆ ಯಾರಾದ್ದಾದರೂ ಆದಾಯ ಶೇ 20ರಷ್ಟು ಏರಿಕೆಯಾಗಿದೆಯೇ? ಆದರೆ ಮೋದಿ ಅವರು ಬೆಲೆ ಏರಿಕೆಯ ಈ ಸ್ಥಿತಿಯ ಬಗ್ಗೆ ಮಾತೇ ಆಡುವುದಿಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಎರಡು ವಾರದಲ್ಲಿ 32 ಜನ ಅಮಾಯಕರು ಉಗ್ರರಿಗೆ ಬಲಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಪ್ರಧಾನಿ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT