ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿಯಿಂದ ಪತಿಯ ಅಸ್ಥಿ ಭಾರತಕ್ಕೆ ತರಲು ಕ್ರಮ ಕೈಗೊಳ್ಳುವಂತೆ ಮಹಿಳೆ ಕೋರ್ಟ್ ಅರ್ಜಿ

ಮುಸ್ಲಿಂ ಸಂಪ್ರದಾಯದಂತೆ ನಡೆದಿರುವ ಹಿಂದೂ ವ್ಯಕ್ತಿ ಅಂತ್ಯಕ್ರಿಯೆ
Last Updated 16 ಮಾರ್ಚ್ 2021, 11:06 IST
ಅಕ್ಷರ ಗಾತ್ರ

ನವದೆಹಲಿ: ‘ಪತಿ ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದಾರೆ. ಪತಿ ಹಿಂದೂ ಆಗಿದ್ದರೂ ಮೃತದೇಹದ ಅಂತ್ಯಸಂಸ್ಕಾರವನ್ನು ಮುಸ್ಲಿಂ ಸಂಪ್ರದಾಯದಂತೆ ಮಾಡಲಾಗಿದೆ. ಪತಿಯ ಅಸ್ಥಿಗಳನ್ನು ಹೊರತೆಗೆದು ತನಗೆ ಒಪ್ಪಿಸಲು ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್‌ನಲ್ಲಿ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.

ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್‌ ಅವರು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದರು.

‘ಮಹಿಳೆ ತನ್ನ ಬೇಡಿಕೆ ಈಡೇರಿಕೆಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಅಂತ್ಯಸಂಸ್ಕಾರಕ್ಕಾಗಿ ಪತಿಯ ಮೃತದೇಹವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಈ ಮೊದಲೇ ಕೈಗೊಳ್ಳಬೇಕಿತ್ತು’ ಎಂದೂ ನ್ಯಾಯಮೂರ್ತಿ ಸಿಂಗ್‌ ಅಭಿಪ್ರಾಯಪಟ್ಟರು. ನಂತರ, ಅರ್ಜಿ ವಿಚಾರಣೆಯನ್ನು ಮಾರ್ಚ್‌ 18ಕ್ಕೆ ಮುಂದೂಡಿದರು.

ಸಂಜೀವ್‌ಕುಮಾರ್ ಎಂಬುವವರು ಜನವರಿ 24ರಂದು ಹೃದಯಾಘಾತದಿಂದ ಸೌದಿ ಅರೇಬಿಯಾದಲ್ಲಿ ಮೃತಪಟ್ಟರು.

ಈ ಸುದ್ದಿ ತಿಳಿದ ಸಂಜೀವ್‌ಕುಮಾರ್‌ ಪತ್ನಿ ಅಂಜು ಶರ್ಮಾ ಅವರು, ಪತಿಯ ಮೃತದೇಹವನ್ನು ಭಾರತಕ್ಕೆ ಕಳಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು.

‘ಪತಿಯ ಮೃತದೇಹವನ್ನು ಸೌದಿಅರೇಬಿಯಾದಲ್ಲಿ ಹೂಳಲಾಗಿದೆ ಎಂಬ ಮಾಹಿತಿ ಫೆಬ್ರುವರಿ 18ರಂದು ತಲುಪಿದಾಗ ನನಗೆ ಆಘಾತವಾಯಿತು. ಜೆಡ್ಡಾದಲ್ಲಿರುವ ಭಾರತದ ಕಾನ್ಸುಲೇಟ್‌ನ ಅಧಿಕಾರಿಗಳು ಮರಣ ಪ್ರಮಾಣ ಪತ್ರದಲ್ಲಿ ಪತಿ ಧರ್ಮವನ್ನು ಮುಸ್ಲಿಂ ಎಂದು ತಪ್ಪಾಗಿ ನಮೂದಿಸಿದ್ದರು. ಅಂತ್ಯಕ್ರಿಯೆಯನ್ನು ಮುಸ್ಲಿಂ ಸಂಪ್ರದಾಯದಂತೆ ನೆರವೇರಿಸಲು ಅಧಿಕಾರಿಗಳು ಮಾಡಿರುವ ಈ ಪ್ರಮಾದವೇ ಕಾರಣ’ ಎಂದು ಅಂಜು ಶರ್ಮಾ ಅರ್ಜಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT