ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಭೇಟಿ ವೇಳೆ ತ್ರಿಪುರಾ ಹಿಂಸಾಚಾರ, ಬಿಎಸ್‌ಎಫ್ ಬಗ್ಗೆ ಪ್ರಸ್ತಾಪ: ಮಮತಾ

Last Updated 22 ನವೆಂಬರ್ 2021, 13:39 IST
ಅಕ್ಷರ ಗಾತ್ರ

ಕೋಲ್ಕತ್ತ: ದೆಹಲಿ ಭೇಟಿ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ತ್ರಿಪುರಾದಲ್ಲಿ ತಮ್ಮ ಪಕ್ಷದ ನಾಯಕರ ಮೇಲೆ ನಡೆಯುತ್ತಿರುವ ಪೊಲೀಸರ ದೌರ್ಜನ್ಯ ಮತ್ತು ಬಿಎಸ್ಎಫ್ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆ ಕುರಿತ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ತ್ರಿಪುರಾದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ, ಟಿಎಂಸಿ ಯುವ ಘಟಕದ ಅಧ್ಯಕ್ಷರಾದ ಸಯೊನಿ ಘೋಷ್ ಅವರ ಬಂಧನದ ವಿಷಯಗಳ ಬಗ್ಗೆ ದೆಹಲಿ ಭೇಟಿ ವೇಳೆ ಧ್ವನಿ ಎತ್ತುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದ ಇತರೆ ವಿಷಯಗಳ ಜೊತೆ ಬಿಎಸ್‌ಎಫ್ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆ, ತ್ರಿಪುರಾ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸುತ್ತೇನೆ’ಎಂದಿದ್ದಾರೆ.

ಬೆಳಗ್ಗೆಯಿಂದ ನಮ್ಮ ಸಂಸದರು ಅವರ ಕಚೇರಿ ಬಳಿ ಕುಳಿತರೂ ಭೇಟಿಗೆ ಅವಕಾಶ ನೀಡಿರಲಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ವಿರುದ್ಧ ಮಮತಾ ವಾಗ್ದಾಳಿ ನಡೆಸಿದ್ಧಾರೆ.

‘ಬಿಪ್ಲಬ್ ದೇವ್ ನೇತೃತ್ವದ ತ್ರಿಪುರಾ ಸರ್ಕಾರದ ಆಡಳಿತದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, ಇಷ್ಟಾದರೂ ಸಹ ಮಾನವ ಹಕ್ಕುಗಳ ಆಯೋಗ ಕಣ್ಮುಚ್ಚಿ ಕುಳಿತಿದೆ ಎಂದು ಟೀಕಿಸಿದ್ದಾರೆ. ತ್ರಿಪುರಾದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂದ ಅವರು, ರಾಜ್ಯದಲ್ಲಿ ಹಲವು ಕೊಲೆಗಳು ನಡೆದಿವೆ. ಮಾರಕಾಸ್ತ್ರಗಳನ್ನು ಹಿಡಿದ ಗೂಂಡಾಗಳು ಪೊಲೀಸ್ ಠಾಣೆಗಳನ್ನು ಪ್ರವೇಶಿಸುತ್ತಿದ್ದಾರೆ. ತ್ರಿಪುರಾದಲ್ಲಿ ಗಾಯಗೊಂಡ ಅದೆಷ್ಟು ಮಂದಿಯನ್ನು ತಂದು ಕೋಲ್ಕತ್ತದ ಎಸ್ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಿದ್ದಾರೋ ಗೊತ್ತಿಲ್ಲ’ಎಂದಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಪಕ್ಷಗಳು ಸಭೆ, ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ತಡೆಒಡ್ಡಲಾಗುತ್ತಿದೆ. ತ್ರಿಪುರಾದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಅಣಕಿಸಲಾಗುತ್ತಿದೆ. ಪಕ್ಷಗಳು ಸಭೆ ನಡೆಸಲು ಅವಕಾಶ ನೀಡದಿದ್ದರೆ ಚುನಾವಣೆಯ ಭವಿಷ್ಯ ಏನಾಗಬಹುದು ಎಂದು ಟೀಕಿಸಿದ್ದಾರೆ. ಚುನಾವಣೆ ನಡೆಸುವ ಬದಲು ಕೇಸರಿ ಪಕ್ಷವು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ತ್ರಿಪುರಾದಲ್ಲಿ ಸದ್ಯ ನಡೆಯುತ್ತಿರುವ ದೌರ್ಜನ್ಯಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಎಸ್ಎಫ್ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ತನ್ನ ಲಾಭಕ್ಕಾಗಿ ಪ್ಯಾರಾ ಮಿಲಿಟರಿಯನ್ನು ಬಳಸುತ್ತಿದೆ ಎಂದಿದ್ದಾರೆ. ‘ಬಿಎಸ್‌ಎಫ್ ನನ್ನ ಶತ್ರುವಲ್ಲ. ಅವರೂ ನನ್ನ ಸ್ನೇಹಿತರು. ಬಿಎಸ್ಎಫ್ ಇದ್ದರೆ ತಮ್ಮ ಪಕ್ಷ ಸುರಕ್ಷಿತ ಎಂದು ಬಿಜೆಪಿ ಭಾವಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ಹೊಣೆಗಾರಿಕೆಯಾಗಿರುತ್ತದೆ. ಬಿಎಸ್ಎಫ್ ರೀತಿ ಕೇಂದ್ರದ ಏಜೆನ್ಸಿಗಳನ್ನು ಬಿಜೆಪಿ ತನ್ನ ಪಕ್ಷದ ಚಟುವಟಿಕೆಗಳಿಗೆ ಬಳಸುತ್ತಿದೆ. ಒತ್ತಾಯಪೂರ್ವಕವಾಗಿ ಯಾವುದೇ ಪ್ರದೇಶವನ್ನು ಆಕ್ರಮಿಸಲು ನಾನು ಬಿಡುವುದಿಲ್ಲ’ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT