ಮಂಗಳವಾರ, ಜನವರಿ 26, 2021
16 °C

ಬಿಹಾರದಲ್ಲಿ ಎನ್‌ಆರ್‌ಸಿ ಜಾರಿಗೆ ಅವಕಾಶ ನೀಡಲ್ಲ: ನಿತೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ‘ಬಿಹಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ಒಂದೊಮ್ಮೆ ಇದನ್ನು ಜಾರಿಗೊಳಿಸಲು ಮುಂದಾದರೆ ಅದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಭಾನುವಾರ ಹೇಳಿದ್ದಾರೆ. ಈ ಮೂಲಕ ಮಿತ್ರಪಕ್ಷ ಬಿಜೆಪಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಆಪರೇಷನ್‌ ಕಮಲ ನಡೆಸಿದ್ದ ಬಿಜೆಪಿ, ನಿತೀಶ್‌ ಅವರ ಜೆಡಿಯು ಪಕ್ಷದ ಆರು ಶಾಸಕರನ್ನು ತನ್ನತ್ತ ಸೆಳೆದುಕೊಂಡಿತ್ತು. ಈ ಬೆಳವಣಿಗೆ ಬಳಿಕ ಇದೇ ಮೊದಲ ಬಾರಿಗೆ ನಿತೀಶ್‌, ಬಿಜೆಪಿಯ ಕಿವಿ ಹಿಂಡಿದ್ದಾರೆ.

‘ಯಾರು ನಿಜವಾದ ಮಿತ್ರ, ಯಾರು ಶತ್ರು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಚುನಾವಣೆಗೆ ಐದು ತಿಂಗಳು ಮುನ್ನವೇ ಸೀಟು ಹಂಚಿಕೆ ಒಪ್ಪಂದ (ಎನ್‌ಡಿಎ ಜೊತೆ) ಮಾಡಿಕೊಳ್ಳಬೇಕಿತ್ತು ಎಂದು ಈಗ ಅನಿಸುತ್ತಿದೆ. ಇದರಿಂದ ನಮಗೆ ಹೆಚ್ಚು ಲಾಭವಾಗುತ್ತಿತ್ತು’ ಎಂದು ನಿತೀಶ್‌ ಅವರು ಪಕ್ಷದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಈ ಬಾರಿ ಮುಖ್ಯಮಂತ್ರಿ ಗಾದಿಗೆ ಏರಲು ನಾನು ಮಾನಸಿಕವಾಗಿ ಸಜ್ಜಾಗಿರಲಿಲ್ಲ. ಪಕ್ಷದ ಶಾಸಕರು ಹಾಗೂ ಮಿತ್ರಪಕ್ಷದವರ ಒತ್ತಾಯಕ್ಕೆ ಮಣಿದು ಈ ಹುದ್ದೆ ಅಲಂಕರಿಸಿದ್ದೇನೆ. ನಾವೆಲ್ಲರೂ ಹಿಂದಿನ ಕಹಿ ಘಟನೆಗಳನ್ನೆಲ್ಲಾ ಮರೆತು ನಮಗೆ ಮತ ನೀಡಿರುವ ಹಾಗೂ ನೀಡದವರ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ. ಈ ಸರ್ಕಾರವು ಐದು ವರ್ಷ ಯಶಸ್ವಿಯಾಗಿ ಆಡಳಿತ ನಡೆಸಲಿದೆ’ ಎಂದು ಹೇಳಿದರು.

ತಮ್ಮ ಸೋಲಿಗೆ ಬಿಜೆಪಿಯೇ ನೇರ ಕಾರಣ ಎಂದು ಜೆಡಿಯು ಪರಾಜಿತ ಅಭ್ಯರ್ಥಿಗಳು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎಲ್‌ಜೆಪಿಯಿಂದ ನನಗೇನೂ ನಷ್ಟವಾಗಿಲ್ಲ. ಆದರೆ ಚುನಾವಣೆಯಲ್ಲಿ ನನ್ನ ಸೋಲಿಗೆ ಬಿಜೆಪಿಯೇ ಕಾರಣ. ಪ್ರಚಾರದ ವೇಳೆ ನನ್ನ ಕ್ಷೇತ್ರದಲ್ಲಿ ‘ಎಲ್‌ಜೆಪಿ–ಬಿಜೆಪಿ ಭಾಯ್‌ ಭಾಯ್‌’ ಎಂಬ ಘೋಷಣೆಗಳು ಮೊಳಗಿದ್ದವು. ಅದರಿಂದ ನನಗೆ ಹಿನ್ನಡೆ ಉಂಟಾಯಿತು’ ಎಂದು ದಿನಾರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಜೈ ಕುಮಾರ್‌ ಸಿಂಗ್‌ ಅಳಲು ತೋಡಿಕೊಂಡರು.

ಉಮೇಶ್‌ಗೆ ರಾಜ್ಯಾಧ್ಯಕ್ಷ ಪಟ್ಟ: ಹಿರಿಯ ಮುಖಂಡ ಉಮೇಶ್‌ ಕುಶ್ವಾಹ ಅವರನ್ನು ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಮೊದಲು ರಾಜ್ಯಾಧ್ಯಕ್ಷರಾಗಿದ್ದ ವಶಿಷ್ಠ ನಾರಾಯಣ ಸಿಂಗ್‌ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಈ ಬದಲಾವಣೆ ಮಾಡಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು