ಗುರುವಾರ , ಮಾರ್ಚ್ 23, 2023
29 °C

ನಿಮ್ಮ ಮಕ್ಕಳು ಟಾರ್ಗೆಟ್ ಆದಾಗ ನಿಮ್ಮ ನಿಲುವೇನು? ಜಯಾ ಬಚ್ಚನ್‌ಗೆ ಕಂಗನಾ ಪ್ರಶ್ನೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯಸಭಾ ಸದಸ್ಯೆ ಹಾಗೂ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಪತ್ನಿ ಜಯಾ ಬಚ್ಚನ್‌ ಅವರನ್ನು ನಟಿ ಕಂಗನಾ ರನೌತ್‌‌ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಮೃತಪಟ್ಟ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಚಿತ್ರರಂಗ ಹಾಗೂ ಡ್ರಗ್ಸ್ ಜಾಲದ ನಂಟಿನ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿವೆ.‌ ಈ ವೇಳೆ ಬಿಜೆಪಿಯ ಸಂಸದ ಮತ್ತು ಭೋಜ್‌ಪುರಿ ನಟ ರವಿ ಕಿಶನ್ ಅವರು  ಸೋಮವಾರ, ‘ಸಿನಿಮಾ ಕ್ಷೇತ್ರದಲ್ಲಿ ಡ್ರಗ್ಸ್ ಚಟದ ಸಮಸ್ಯೆ ಇದೆ’ ಎಂದಿದ್ದರು. ಕಂಗನಾ ‘ಬಾಲಿವುಡ್’‌ ಅನ್ನು ಇತ್ತೀಚೆಗೆ ‘ಚರಂಡಿ’ಗೆ ಹೋಲಿಸಿದ್ದರು.

ಇಂದು ನಡೆದ ಸಂಸತ್‌ ಅಧಿವೇಶನದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸದೆಯೇ ಮಾತನಾಡಿದ ಜಯಾ ಬಚ್ಚನ್‌, ‘ಅವರಿಗೆ ತುತ್ತು ನೀಡುತ್ತಿರುವ ಕೈಗಳನ್ನೇ ಅವರು ಕಚ್ಚುತ್ತಿದ್ದಾರೆ’ ಎಂದು ಟೀಕಿಸಿದ್ದರು.

ಇದನ್ನೂ ಓದಿ: ತುತ್ತು ನೀಡುವ ಕೈಗಳನ್ನೇ ಕಚ್ಚುತ್ತಿರುವರು; ಬಾಲಿವುಡ್ ನಿಂದಕರಿಗೆ ಜಯಾ ಚಾಟಿ

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಂಗನಾ, ‘ಜಯಾ ಜೀ ನನ್ನ ಜಾಗದಲ್ಲಿ ನಿಮ್ಮ ಮಗಳು ಶ್ವೇತಾ ಇದ್ದಿದ್ದರೆ, ಅವಳು ಹದಿಹರೆಯದವಳಾಗಿದ್ದಾಗ ಮಾದಕ ವ್ಯಸನಿಯಾಗಿ, ಕಿರುಕುಳಕ್ಕೊಳಗಾಗಿದ್ದರೆ, ಅಭಿಷೇಕ್ ನಿರಂತರವಾಗಿ ಬೆದರಿಕೆ ಮತ್ತು ಕಿರುಕುಳದ ಬಗ್ಗೆ ಆರೋಪಿಸಿದ್ದರೆ ಹಾಗೂ ಒಂದು ದಿನ ನೇಣು ಬಿಗಿದುಕೊಂಡಿದ್ದರೆ ನೀವು ಆಗಲೂ ಇದೇ ಮಾತನ್ನು ಹೇಳುವಿರಾ? ನಮಗೂ ಸಹಾನುಭೂತಿ ತೋರಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಒಬ್ಬ ಪ್ರತಿದ್ಧ ನೃತ್ಯನಿರ್ದೇಶಕ ಒಮ್ಮೆ, ‘ನಾವು ಅತ್ಯಾಚಾರ ಎಸಗಿದ್ದೇವೆ ಎಂದಾದರೆ, ನಾವು ಅವರಿಗೆ ಜೀವನೋಪಾಯವನ್ನೂ ಕಲ್ಪಿಸಿದ್ದೇವೆ’ ಎಂದು ಹೇಳಿದ್ದರು. ನೀವೂ ಅದನ್ನೇ ಹೇಳುತ್ತಿರುವಿರಾ? ಮಹಿಳೆಯರು ದೂರು ನೀಡಲು ಪ್ರೊಡಕ್ಷನ್‌ ಹೌಸ್‌ಗಳಲ್ಲಿ ಸರಿಯಾದ ಮಾನವ ಸಂಪನ್ಮೂಲ ವಿಭಾಗಗಳಿಲ್ಲ. ಸುರಕ್ಷತೆ ಅಥವಾ ವಿಮಾ ಸೌಲಭ್ಯವಿಲ್ಲ. ಪ್ರತಿದಿನವೂ ಪ್ರಾಣವನ್ನು ಪಣಕ್ಕಿಡುವವರಿಗೆ ಎಂಟು ಗಂಟೆಗಳ ಶಿಫ್ಟ್‌ ಎಂಬ ಕಟ್ಟುಪಾಡುಗಳೂ ಇಲ್ಲ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ‘ಬಡವರಿಗೆ ಆಹಾರ ಸಾಕು’ ಎಂಬ ಮನಸ್ಥಿತಿಯನ್ನು ‘ಬಡವರಿಗೆ ಆಹಾರದ ಜೊತೆಗೆ ಗೌರವವೂ ಅಗತ್ಯ’ ಎಂದು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ‘ಒಂದು ದಿನ ನಾನು ಗೌರವಾನ್ವಿತ ಪ್ರಧಾನ ಮಂತ್ರಿಯವರನ್ನು ಭೇಟಿಯಾದರೆ, ಈ ಬಗ್ಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು