ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪಿತ ಸಂಬಂಧ ಮುರಿದುಬಿದ್ದರೆ ಅತ್ಯಾಚಾರವಲ್ಲ: ಸುಪ್ರೀಂ

Last Updated 15 ಜುಲೈ 2022, 16:15 IST
ಅಕ್ಷರ ಗಾತ್ರ

ನವದೆಹಲಿ:ಮಹಿಳೆಯು ಸ್ವಇಚ್ಛೆಯಿಂದ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧವಿಟ್ಟುಕೊಂಡು ಒಪ್ಪಿತ ಜೀವನ ನಡೆಸಿ, ಸಂಬಂಧ ಮುರಿದುಬಿದ್ದಾಗ ಅತ್ಯಾಚಾರ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ಅನ್ಸಾರ್‌ ಮೊಹಮ್ಮದ್ ಎಂಬುವವರು ತಮ್ಮ ವಿರುದ್ಧರಾಜಸ್ಥಾನ ಹೈಕೋರ್ಟ್ ಇದೇ ವರ್ಷದ ಮೇ 19ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ, ಬಂಧನ ಪೂರ್ವ ಜಾಮೀನು ಕೋರಿ ಸಲ್ಲಿಸಿದ್ದಮೇಲ್ಮನವಿ ಆಲಿಸಿದ ನ್ಯಾಯಮೂರ್ತಿ ಗುಪ್ತಾ ಮತ್ತು ವಿಕ್ರಮ್‌ ನಾಥ್‌ ಅವರಿದ್ದ ಪೀಠವು ಈ ತೀರ್ಪು ನೀಡಿದೆ.

ಅಸ್ವಾಭಾವಿಕ ಅಪರಾಧಗಳು ಮತ್ತು ಕ್ರಿಮಿನಲ್ ಬೆದರಿಕೆ ಆರೋಪ ಎದುರಿಸುತ್ತಿರುವ ಅನ್ಸಾರ್‌ ಮೊಹಮ್ಮದ್‌ಗೆ ಪೀಠವು, ನಿರೀಕ್ಷಣಾ ಜಾಮೀನು ಕೂಡ ಮಂಜೂರು ಮಾಡಿದೆ.

ದೂರುದಾರ ಮಹಿಳೆ 21 ವರ್ಷದವಳಾಗಿದ್ದಾಗ ಮೇಲ್ಮನವಿದಾರನ ಜತೆ ಸಂಬಂಧ ಹೊಂದಿದ್ದರು ಎಂದು ಮಹಿಳೆಯ ಪರ ಹಾಜರಿದ್ದ ವಕೀಲರು ಪೀಠದ ಮುಂದೆ ಒಪ್ಪಿಕೊಂಡರು. ಆಗ ನ್ಯಾಯ ಪೀಠವು, ‘ಈ ಅಂಶವನ್ನು ಗಮನಿಸಿದರೆ, ದೂರುದಾರರು ಇಚ್ಛಾಪೂರ್ವಕವಾಗಿಯೇ ಮೇಲ್ಮನವಿದಾರರೊಂದಿಗೆ ಸಂಬಂಧವಿಟ್ಟುಕೊಂಡು ವಾಸಿಸಿದ್ದಾರೆ. ಹಾಗಾಗಿ, ಇಂತಹ ಸಂಬಂಧಗಳು ಮುರಿದುಬಿದ್ದರೆ ಐಪಿಸಿ ಸೆಕ್ಷನ್ 376(2) (ಎನ್) ಅಡಿಯಲ್ಲಿ ಅತ್ಯಾಚಾರ ಅಪರಾಧದ ಎಫ್ಐಆರ್ ದಾಖಲಿಸಲು ಅವಕಾಶವಿಲ್ಲ’ ಎಂದು ಹೇಳಿದೆ.

ರಾಜಸ್ಥಾನ ಹೈಕೋರ್ಟ್‌ ನ್ಯಾಯಮೂರ್ತಿಗಳು ‘ಅರ್ಜಿದಾರ ಮಹಿಳೆಗೆ ಮದುವೆಯ ಭರವಸೆ ನೀಡಿ, ದೈಹಿಕ ಸಂಬಂಧ ಹೊಂದಿದ್ದು, ಇವರಿಬ್ಬರ ಸಂಬಂಧದಿಂದ ಒಂದು ಹೆಣ್ಣು ಮಗು ಜನಿಸಿದೆ. ಅಪರಾಧದ ಗಂಭೀರತೆಯನ್ನು ಪರಿಗಣಿಸಿದಾಗ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲವೆಂದು ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ’ ಎಂದು ಆದೇಶ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT